ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳಿಗೆ 40ರಿಂದ 41 ಡಿಗ್ರಿ ಸೆಲ್ಸಿಯಸ್‌ ಕೆಂಡದ ಬಿಸಿಲೇ ಪ್ರಮುಖ ಎದುರಾಳಿ!

ಬಿಸಿಲಿನಲ್ಲಿ ಪ್ರಚಾರ ನಡೆಸಬೇಕಾದ ಸವಾಲು
Last Updated 30 ಮಾರ್ಚ್ 2019, 18:13 IST
ಅಕ್ಷರ ಗಾತ್ರ

ಹೊಸಪೇಟೆ: ಮೈ ಸುಡುವ ಬಿಸಿಲೇ ಇಲ್ಲಿನ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಮುಖ ಸವಾಲಾಗಿದೆ.

ಅಭ್ಯರ್ಥಿಗಳು ಪರಸ್ಪರ ಒಬ್ಬರನ್ನೊಬ್ಬರುಮೀರಿಸಿ ಚುನಾವಣಾ ಪ್ರಚಾರ ನಡೆಸುವುದಕ್ಕಿಂತ ಪ್ರಖರವಾದ ಬಿಸಿಲನ್ನೂ ಮೀರಿ ಮತದಾರರನ್ನು ತಲುಪಬೇಕಾದ ದೊಡ್ಡ ಸವಾಲು ಅವರ ಎದುರಿಗಿದೆ. ಹೀಗಾಗಿ ಬಿಸಿಲೇ ಎಲ್ಲ ಅಭ್ಯರ್ಥಿಗಳಿಗೂ ಪ್ರಮುಖ ಎದುರಾಳಿಯಾಗಿ ಕಾಡುತ್ತಿದೆ!

ಬಳ್ಳಾರಿ ಲೋಕಸಭೆಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಗುರುವಾರವಷ್ಟೇ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ನೇರ ಸ್ಪರ್ಧೆ ಏರ್ಪಡಲಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಎರಡೂ ಪಕ್ಷಗಳು ಈಗಾಗಲೇ ಅಖೈರುಗೊಳಿಸಿವೆ. ಇನ್ನಷ್ಟೇ ಎರಡೂ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕಿದೆ. ಆದರೆ, ಅದಕ್ಕೂ ಮುನ್ನವೇ ಅವರು ಮತದಾರರನ್ನು ತಲುಪುವ ಕೆಲಸ ಆರಂಭಿಸಿದ್ದಾರೆ. ಬಿಸಿಲಿನಿಂದ ಬಚಾವ್‌ ಆಗಲು ಪ್ರಚಾರದ ತಂತ್ರವನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿಕೊಂಡಿದ್ದಾರೆ.

ಬೆಳಿಗ್ಗೆ ಏಳು ಗಂಟೆಯಿಂದ ಹತ್ತು ಗಂಟೆಯ ವರೆಗೆ, ಸಂಜೆ ಆರು ಗಂಟೆಯಿಂದ ರಾತ್ರಿ ಹತ್ತರ ವರೆಗೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡವರಂತೆ ಓಡಾಡಿ ಹೆಚ್ಚಿನ ಮತದಾರರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಮಧ್ಯಾಹ್ನ ಸುಡುವ ಬಿಸಿಲು ಇರುತ್ತಿರುವುದರಿಂದ ಪ್ರಚಾರಕ್ಕೆ ಕೊಕ್‌ ಕೊಟ್ಟು, ಆಯಾ ಊರುಗಳಲ್ಲೇ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಮಸಾಲೆರಹಿತ ಸರಳ ಊಟದ ಜತೆಗೆ ಹಣ್ಣು, ಹಣ್ಣಿನ ರಸ, ಎಳನೀರಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ.

ಪ್ರತಿ ವರ್ಷ ಸಾಮಾನ್ಯವಾಗಿ ಏಪ್ರಿಲ್‌ ಮೊದಲ ವಾರದ ನಂತರ ಜಿಲ್ಲೆಯಲ್ಲಿ ಬಿಸಿಲು ಕೆಂಡ ಕಾರುತ್ತದೆ. ಆದರೆ, ಈ ವರ್ಷ ಅದಕ್ಕೂ ಮುನ್ನವೇ ಪ್ರಖರವಾದ ಬಿಸಿಲು ಕಾಣಿಸಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ 40ರಿಂದ 41 ಡಿಗ್ರಿ ಸೆಲ್ಸಿಯಸ್‌ ನಡುವೆ ತಾಪಮಾನ ದಾಖಲಾಗುತ್ತಿದೆ. ಬೆಳಿಗ್ಗೆ ಹತ್ತರಿಂದ ಸಂಜೆ ಆರರ ವರೆಗೆ ಜನಸಂಚಾರವಿರದ ಕಾರಣಪ್ರಮುಖ ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ಒಂದು ರೀತಿಯಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗುತ್ತಿದೆ.ಇದು ವ್ಯಾಪಾರ ವಹಿವಾಟಿನ ಮೇಲೆಯೂ ಪರಿಣಾಮ ಬೀರಿದೆ.

‘ಇಂತಹ ಬಿಸಿಲು ಎಂದೂ ನೋಡಿರಲಿಲ್ಲ. ಹೊರಗೆ ಹೋದರೆ ಮೈಸುಡುತ್ತಿದೆ. ವಾಸ್ತವವಾಗಿ ಬಳ್ಳಾರಿಯಂತಹ ಬಿಸಿಲೂರಿನಲ್ಲಿ ಏಪ್ರಿಲ್‌, ಮೇನಲ್ಲಿ ಯಾವುದೇ ರೀತಿಯ ಚುನಾವಣೆ ಸಂಘಟಿಸಬಾರದು. ಇದು ಪ್ರಚಾರದ ಮೇಲಷ್ಟೇ ಅಲ್ಲ, ಮತದಾನದ ಮೇಲೆಯೂ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ’ ಕಾಂಗ್ರೆಸ್‌ ಐ.ಟಿ. ವಿಭಾಗದ ಹೈದರಾಬಾದ್‌ ಕರ್ನಾಟಕದ ಉಸ್ತುವಾರಿ ನಿಂಬಗಲ್‌ ರಾಮಕೃಷ್ಣ.

*ಬಿರುಸಿನ ಪ್ರಚಾರ ಕೈಗೊಂಡಿದ್ದೆವು. ಕೆಲವರು, ಬಿಸಿಲಿನಿಂದ ಅಸ್ವಸ್ಥರಾದ ನಂತರ ಪ್ರಚಾರವನ್ನು ಬೆಳಿಗ್ಗೆ ಹಾಗೂ ಸಂಜೆಗೆ ಸೀಮಿತಗೊಳಿಸಿದ್ದೇವೆ

– ಅನಿಲ್‌ ಜೋಷಿ, ಬಿಜೆಪಿ ಯುವ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT