ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರ

ದೀಪಾವಳಿಗೂ ಮುನ್ನ 35 ಸಂತ್ರಸ್ತ ಕುಟುಂಬಗಳ ಬಾಳಲ್ಲಿ ಬೆಳಕು
Last Updated 25 ಅಕ್ಟೋಬರ್ 2019, 18:13 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಉಂಟಾಗಿದ್ದ ನೆರೆ, ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಶುಕ್ರವಾರ ಮನೆ ಹಸ್ತಾಂತರಿಸಲಾಯಿತು. ದೀಪಾವಳಿಗೆ ಮುನ್ನವೇ ಸಂತ್ರಸ್ತ ಕುಟುಂಬಗಳ ಬಾಳಲ್ಲಿ ಬೆಳಕು ಮೂಡಿದೆ.

ಮನೆ ಕಳೆದುಕೊಂಡಿರುವ 840 ಕುಟುಂಬಗಳ ಪೈಕಿ ಮೊದಲ ಹಂತದಲ್ಲಿ ಕರ್ಣಂಗೇರಿ ಗ್ರಾಮದಲ್ಲಿ 35 ಮಂದಿಗೆ ಮಾತ್ರ ಮನೆಯ ಕೀ ಹಾಗೂ ಹಕ್ಕುಪತ್ರವನ್ನು ವಸತಿ ಸಚಿವ ವಿ.ಸೋಮಣ್ಣ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ಹಸ್ತಾಂತರಿಸಿದರು.

‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಎರಡು ಮಲಗುವ ಕೋಣೆಗಳುಳ್ಳ ಪ್ರತಿ ಮನೆಗೆ ₹ 9.85 ಲಕ್ಷ ವೆಚ್ಚ ಮಾಡಲಾಗಿದೆ. ಮಾದಾಪುರ, ಮಡಿಕೇರಿ, ಉದಯಗಿರಿಯ ಸಂತ್ರಸ್ತ ಕುಟುಂಬಗಳಿಗೆ ಕರ್ಣಂಗೇರಿಯಲ್ಲಿ ಸೂರು ಕಲ್ಪಿಸಲಾಯಿತು.

ಸಚಿವ ವಿ.ಸೋಮಣ್ಣ ಮಾತನಾಡಿ, ‘ಈ ಮನೆಗಳಲ್ಲಿ ಸಂತ್ರಸ್ತರೇ ವಾಸಿಸಬೇಕು. ಮನೆಗಳನ್ನು ಮಾರಾಟ ಮಾಡಬಾರದು’ ಎಂದು ಸಂತ್ರಸ್ತರಲ್ಲಿ ಕೋರಿದರು.

ಕರ್ಣಂಗೇರಿಯಲ್ಲಿ ಮನೆ, ರಸ್ತೆ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯಕ್ಕೆ ₹ 5.45 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಾರ್ಚ್‌ ಅಂತ್ಯದಲ್ಲಿ ಇನ್ನೂ 600 ಮನೆಗಳನ್ನು ಹಸ್ತಾಂತರಿಸಲು ಪ್ರಯತ್ನಿಸಲಾಗುವುದು. ಶಾಶ್ವತ ಕಾಮಗಾರಿ ಕೈಗೊಳ್ಳಲು ಮಳೆ ಬಿಡುವು ನೀಡುತ್ತಿಲ್ಲ. ಆದರೂ, ಸಂತ್ರಸ್ತರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಧೈರ್ಯ ತುಂಬಿದರು.

‘ಈ ಬಾರಿಯ ಪ್ರವಾಹದಿಂದ ಸಂತ್ರಸ್ತರಾದ 400 ಕುಟುಂಬಗಳಿಗೆ ಸೂರು ಕಲ್ಪಿಸಲು ಜಾಗ ಗುರುತಿಸಿ ಒತ್ತುವರಿ ತೆರವುಗೊಳಿಸಲಾಗಿದೆ. ಆದರೆ, ಒತ್ತುವರಿದಾರರು ಕೋರ್ಟ್‌ ಮೆಟ್ಟಿಲೇರಿದ್ದು ತಡೆಯಾಜ್ಞೆ ತೆರವುಗೊಂಡ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT