ಮನೆ ಸಮೀಪವೇ ಆಗಂತುಕ: 48 ತಾಸಿನಲ್ಲಿ ಬಂಧನ

7
ಮಾಲೂರು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣ

ಮನೆ ಸಮೀಪವೇ ಆಗಂತುಕ: 48 ತಾಸಿನಲ್ಲಿ ಬಂಧನ

Published:
Updated:
Deccan Herald

ಕೋಲಾರ: ಜಿಲ್ಲೆಯಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿದ್ದ ಮಾಲೂರು ತಾಲ್ಲೂಕು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು 48 ತಾಸಿನಲ್ಲಿ ಭೇದಿಸಿರುವ ಪೊಲೀಸರು ಆರೋಪಿ ಟಿ.ಎನ್‌.ಸುರೇಶ್‌ಬಾಬು ಉರುಫ್‌ ಸೂರಿಯನ್ನು (25) ಶುಕ್ರವಾರ ಬಂಧಿಸಿದ್ದಾರೆ.

ಮಾಲೂರು ತಾಲ್ಲೂಕಿನ ಟೇಕಲ್‌ ಗ್ರಾಮದ ಸುರೇಶ್‌ಬಾಬು, ಸಂತ್ರಸ್ತ ವಿದ್ಯಾರ್ಥಿನಿಯನ್ನು ಆರೇಳು ತಿಂಗಳಿನಿಂದ ಪ್ರೀತಿಸುತ್ತಿದ್ದಾಗಿ ಪೊಲೀಸರಿಗೆ ಹೇಳಿದ್ದಾನೆ. 9ನೇ ತರಗತಿ ಓದಿರುವ ಆತ ವಿದ್ಯಾರ್ಥಿನಿಯ ಮನೆ ಸಮೀಪವೇ ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿಯ ಚಲನವಲನದ ಬಗ್ಗೆ ನಿಗಾ ಇರಿಸಿ ಅತ್ಯಾಚಾರಕ್ಕೆ ಸಂಚು ರೂಪಿಸಿದ್ದ.

‘ಆರೋಪಿಯು ಹಲವು ಬಾರಿ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಆಕೆ ಶಾಲೆಗೆ ಹೋಗುವ ಮತ್ತು ಶಾಲೆಯಿಂದ ಮನೆಗೆ ಹಿಂದಿರುಗುವ ಸಮಯ ಹಾಗೂ ರಸ್ತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಈ ಮಾಹಿತಿ ಆಧರಿಸಿ ಘಟನಾ ದಿನ (ಆ.1) ರೈಲ್ವೆ ಕೆಳ ಸೇತುವೆ ಮಾರ್ಗದ ಕಾಲುದಾರಿಯಲ್ಲಿ ವಿದ್ಯಾರ್ಥಿನಿಗಾಗಿ ಗಂಟೆಗಟ್ಟಲೇ ಕಾದು ಕುಳಿತಿದ್ದ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯಾರ್ಥಿನಿಯು ಸಂಜೆ ಶಾಲೆ ಮುಗಿದ ನಂತರ ಸ್ನೇಹಿತೆ ಜತೆ ರೈಲ್ವೆ ಕೆಳ ಸೇತುವೆ ಮಾರ್ಗದ ಕಾಲುದಾರಿಯಲ್ಲಿ ಮನೆಗೆ ನಡೆದು ಹೋಗುತ್ತಿದ್ದಳು. ಆಗ ಆರೋಪಿಯು ಏಕಾಏಕಿ ಆಕೆ ಮೇಲೆ ಎರಗಿ ಕೈ ಹಿಡಿದು ಎಳೆದಾಡಿದ್ದಾನೆ. ಇದರಿಂದ ಗಾಬರಿಯಿಂದ ಸ್ನೇಹಿತೆ ಓಡಿ ಹೋಗಿದ್ದಳು’ ಎಂದು ಹೇಳಿದ್ದಾರೆ.

ಹಿಡಿಯಲು ಯತ್ನ: ‘ನಂತರ ಆರೋಪಿಯು ವಿದ್ಯಾರ್ಥಿನಿಯನ್ನು ನೀಲಗಿರಿ ತೋಪಿಗೆ ಎಳೆದೊಯ್ದು ಅತ್ಯಾಚಾರ ಮಾಡಲೆತ್ನಿಸಿದ್ದ. ಆಗ ವಿದ್ಯಾರ್ಥಿನಿಯು ಚೀರಾಡಿದ್ದರಿಂದ ಆರೋಪಿಯು ಜನರಿಗೆ ಸಿಕ್ಕಿ ಬೀಳಬಹುದೆಂದು ಆತಂಕಗೊಂಡು ಕಲ್ಲಿನಿಂದ ಆಕೆ ತಲೆಯನ್ನು ಜಜ್ಜಿದ್ದಾನೆ. ಆಗ ಅದೇ ಮಾರ್ಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಯು ಆತನನ್ನು ನೋಡಿ ಹಿಡಿಯಲು ಯತ್ನಿಸಿದ್ದರು. ಆದರೆ, ಆತ ಅವರ ಕೈಗೆ ಸಿಗದೆ ಪರಾರಿಯಾಗಿದ್ದ’ ಎಂದು ಮಾಹಿತಿ ನೀಡಿದ್ದಾರೆ.

‘ಸುರೇಶ್‌ಬಾಬುನ ಪ್ರೀತಿಯ ಸಂಗತಿ ವಿದ್ಯಾರ್ಥಿನಿಗೆ ಗೊತ್ತಿರಲಿಲ್ಲ. ಅಲ್ಲದೇ, ಆಕೆಗೆ ಆತನ ಪರಿಚಯವೂ ಇರಲಿಲ್ಲ. ಆರೋಪಿಗೆ ವಿದ್ಯಾರ್ಥಿನಿಯನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ. ಆದರೆ, ಆಕೆ ಘಟನೆ ನಂತರ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಹುದೆಂದು ಹೆದರಿ ಕೊಲೆ ಮಾಡಿದ್ದಾನೆ’ ಎಂದು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !