ಸೋಮವಾರ, ಜನವರಿ 20, 2020
29 °C
45 ಅಡಿ ಹಿಂದಕ್ಕೆ, 20 ಅಡಿ ಬಲಕ್ಕೆ ಬರುವ ಮನೆ, ಈಗಾಗಲೇ 3 ಮೇಲಕ್ಕೆ ಬಂದ ಕಟ್ಟಡ

ದಶಪಥ ಕಾಮಗಾರಿ: ‘ಆತ್ಮೀಯ’ ಮನೆ ಸ್ಥಳಾಂತರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಮದ್ದಿನ ಮನೆ (ಶಸ್ತ್ರಾಗಾರ) ಸ್ಥಳಾಂತರ ವಿಷಯ ದೇಶದಾದ್ಯಂತ ಗಮನ ಸೆಳೆದಿತ್ತು. ಈಗ ಇಲ್ಲೊಬ್ಬರು ತಾವು ಪ್ರೀತಿಯಿಂದ ಕಟ್ಟಿಸಿದ್ದ ‘ಆತ್ಮೀಯ’ ಹೆಸರಿನ ಮನೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ಸ್ಥಳಾಂತರ ಮಾಡಿಸುತ್ತಿದ್ದಾರೆ.

ಬೆಂಗಳೂರು–ಮೈಸೂರು ದಶಪಥ ಕಾಮಗಾರಿ ಭರದಿಂದ ನಡೆಯುತ್ತಿದ್ದು ಕಟ್ಟಡ ತೆರವು ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ತಾಲ್ಲೂಕಿನ ಕೋಣನಹಳ್ಳಿ ಗ್ರಾಮದ ಮಲ್ಲಿಕಾರ್ಜುನ್‌ ಅವರು ವಿ.ಸಿ.ಫಾರಂ ರಸ್ತೆಯಲ್ಲಿ ಕಟ್ಟಿಸಿರುವ ಮನೆಯೂ ಹೆದ್ದಾರಿಗೆ ಹೋಗುತ್ತಿದೆ. ತೆರವಿಗೆ ಅವಕಾಶ ನೀಡದ ಮಲ್ಲಿಕಾರ್ಜುನ್‌ 2014ರಲ್ಲಿ ಪ್ರೀತಿಯಿಂದ ಕಟ್ಟಿಸಿರುವ 36 ಚದರ ಅಡಿ ಮನೆಯನ್ನು ಸ್ಥಳಾಂತರ ಮಾಡುತ್ತಿದ್ದಾರೆ.

ಹರಿಯಾಣ ಮೂಲದ ಟಿಡಿಬಿಡಿ ಎಂಜಿನಿಯರಿಂಗ್‌ ವರ್ಕ್ಸ್‌ ಕಂಪನಿ ₹ 20 ಲಕ್ಷಕ್ಕೆ ವೆಚ್ಚದಲ್ಲಿ ಸ್ಥಳಾಂತರ ಜವಾಬ್ದಾರಿ ವಹಿಸಿಕೊಂಡಿದೆ. 45 ಅಡಿ ಹಿಂದಕ್ಕೆ, 20 ಅಡಿ ಎಡಕ್ಕೆ ಮನೆ ಸ್ಥಳಾಂತರಗೊಳಿಸುವ ಕಾಮಗಾರಿ ತಿಂಗಳಿನಿಂದ ನಡೆಯುತ್ತಿದೆ. ಆಧುನಿಕ ಯಂತ್ರಗಳನ್ನು ಬಳಸಿ ಮನೆಯ ಸುತ್ತಲೂ ಕಾಲುವೆ ತೋಡಲಾಗಿದ್ದು ಈಗಾಗಲೇ ಮನೆಯನ್ನು 3 ಅಡಿ ಮೇಲಕ್ಕೆ ಎತ್ತಲಾಗಿದೆ. ಸ್ಥಳಾಂತರ ಕಾಮಗಾರಿ ಆರಂಭವಾದ ನಂತರ ಮನೆಗೆ ಯಾವುದೇ ತೊಂದರೆಯಾದರೆ ಅದನ್ನು ಒಪ್ಪಂದದಂತೆ ಕಂಪನಿಯೇ ತುಂಬಿಕೊಡಲಿದೆ.

ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಕಂಪನಿ ಭರವಸೆ ನೀಡಿದೆ. ಮನೆ ಸ್ಥಳಾಂತರ ವಿಚಾರ ಅಕ್ಕಪಕ್ಕದ ಹಳ್ಳಿಗಳಲ್ಲಿ ಹರಡಿದ್ದು ಜನರು ತಂಡೋಪತಂಡವಾಗಿ ಬಂದು ಕಾಮಗಾರಿ ವೀಕ್ಷಣೆ ಮಾಡುತ್ತಿದ್ದಾರೆ.

‘ಪ್ರಸ್ತುತ ಸನ್ನಿವೇಶವಲ್ಲಿ ಮನೆ ನಿರ್ಮಾಣ ಖರ್ಚು ಗಗನಕ್ಕೇರಿದೆ. ಅಲ್ಲದೆ ಎಂ ಸ್ಯಾಂಡ್‌ ಹೊರತುಪಡಿಸಿ ಮರಳು ಸಿಗುತ್ತಿಲ್ಲ. ನಾನು ಅತ್ಯಂತ ಕಾಳಜಿಯಿಂದ ಗುಣಮಟ್ಟದ ಮರಳು, ಸಿಮೆಂಟ್‌ ಬಳಸಿ ಮನೆ ನಿರ್ಮಾಣ ಮಾಡಿ ಆತ್ಮೀಯ ಎಂದು ನಾಮಕರಣ ಮಾಡಿದ್ದೆ. ಪ್ರೀತಿಯ ಸೂರನ್ನು ಕಳೆದುಕೊಳ್ಳಲು ಇಷ್ಟವಿಲ್ಲ’ ಎಂದು ಮನೆಯ ಮಾಲೀಕ ಮಲ್ಲಿರ್ಕಾಜುನ್‌ ಹೇಳಿದರು.

ಮನೆ, ಜಮೀನು ಹಾಗೂ ಇತರ ಆಸ್ತಿ ಕಳೆದುಕೊಂಡ ನಿವಾಸಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಪರಿಹಾರ ಪಾವತಿಸಿದೆ. ಅದರಂತೆ ಮಲ್ಲಿಕಾರ್ಜುನ್‌ ಅವರಿಗೂ ಪರಿಹಾರ ಸಂದಾಯವಾಗಿದೆ.

ಬೆಂಗಳೂರು–ಮೈಸೂರು ಜೋಡಿ ರೈಲ್ವೆ ಮಾರ್ಗಕ್ಕೆ ತೊಡಕಾಗಿದ್ದ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಕಾಲದ ಶಸ್ತ್ರಾಗಾರವನ್ನು ವರ್ಷದ ಹಿಂದೆ ಸ್ಥಳಾಂತರ ಮಾಡಲಾಗಿತ್ತು. ಸರ್ಕಾರವೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಐತಿಹಾಸಿಕ ಸ್ಮಾರಕದ ಮೂಲ ಸ್ವರೂಪಕ್ಕೆ ಧಕ್ಕೆ ಬರದಂತೆ 130 ಮೀಟರ್ ದೂರಕ್ಕೆ ಸ್ಥಳಾಂತರಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು