ಶುಕ್ರವಾರ, ಡಿಸೆಂಬರ್ 6, 2019
17 °C

ಕಾವ್ಯವನ್ನೇ ಜೀವಿಸುವ ಎಚ್‌.ಎಸ್‌.ವೆಂಕಟೇಶಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಕಾವ್ಯದ ಜೊತೆಜೊತೆಗೆ ತಮ್ಮದೇ ಆದ ಕಾವ್ಯಮೀಮಾಂಸೆಯನ್ನು ರೂಪಿಸಿಕೊಂಡು, ಕಾವ್ಯವನ್ನೇ ಜೀವಿಸುತ್ತ ಪಸರಿಸುತ್ತಿರುವ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್‌ 23ರಂದು ಹುಟ್ಟಿದ ಇವರು ಈಗ 75ನೇ ವಸಂತದ ಸಂಭ್ರಮದಲ್ಲಿದ್ದಾರೆ. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ.

ಇದನ್ನೂ ಓದಿ: ಕಾವ್ಯ ತಪಸ್ವಿ ಎಚ್ಚೆಸ್ವಿ ಸಂದರ್ಶನ| ಕಾವ್ಯ ಪ್ರವಾಹದ ಅಲೆ ನಾನು

ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್‌ ಆಗಿ ಉದ್ಯೋಗ ಆರಂಭಿಸಿದರು.

 

ಉನ್ನತ ವ್ಯಾಸಂಗದ ಆಸಕ್ತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಗಳಿಸಿದರು.

ಇದನ್ನೂ ಓದಿ: ತಿನ್ನುಬಾಕ ಸಿಂಗಪುರ: ಕವಿ ಎಚ್.ಎಸ್.ವೆಂಕಟೇಶಮೂರ್ತಿ ಬರಹ

ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತಾಯಿಯ ಮನೆಯಲ್ಲಿ ನಡೆಯುತ್ತಿದ್ದ ಗಮಕ ವಾಚನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಭಾವದಿಂದ ಕವನ ಬರೆಯುವ ಪ್ರೇರಣೆ ಪಡೆದರು.

ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). 

ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ). 

ಇದನ್ನೂ ಓದಿ: 85ನೇ ಸಾಹಿತ್ಯ ಸಮ್ಮೇಳನಕ್ಕೆ ಎಚ್‌.ಎಸ್‌. ವೆಂಕಟೇಶಮೂರ್ತಿ ಅಧ್ಯಕ್ಷತೆ

ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು).

ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು. 

ಬಿಡುವಿಲ್ಲದ ಬರವಣಿಗೆಯ ನಡುವೆ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ. 

ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು