ಹುಲಿ ಸಂರಕ್ಷಣೆಗೆ ಆಪತ್ತು: ಎನ್‌ಟಿಸಿಎ ಕಳವಳ

7
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ

ಹುಲಿ ಸಂರಕ್ಷಣೆಗೆ ಆಪತ್ತು: ಎನ್‌ಟಿಸಿಎ ಕಳವಳ

Published:
Updated:

ಬೆಂಗಳೂರು: ‘ಪ್ರಸ್ತಾವಿತ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗದಿಂದ ಹುಲಿ ಸಂರಕ್ಷಣೆಯ ಯೋಜನೆಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ಈ ಯೋಜನೆಯನ್ನು ಅನುಷ್ಠಾನ ಮಾಡಬಾರದು’ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಶಿಫಾರಸು ಮಾಡಿದೆ.

ಪ್ರಾಧಿಕಾರದ ಇನ್‌ಸ್ಪೆಕ್ಟರ್‌ ಜನರಲ್‌ ಪಿ.ಎಸ್‌.ಸೋಮಶೇಖರ್‌ ನೇತೃತ್ವದ 11 ಅಧಿಕಾರಿಗಳ ತಂಡವು ಕಾಳಿ ಹುಲಿ ಮೀಸಲು ಅರಣ್ಯ, ಯಲ್ಲಾಪುರ ಹಾಗೂ ಕಾರವಾರದ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅರಣ್ಯ, ಪರಿಸರ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಈ ವರದಿ ಪಡೆದಿದ್ದಾರೆ.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ದಟ್ಟವಾದ ಅರಣ್ಯ ಇದೆ. ಈ ಭಾಗದಲ್ಲೇ ಯೋಜನೆ ಹಾದು ಹೋಗಲಿದೆ. ಪಶ್ಚಿಮ ಘಟ್ಟ ಜೀವವೈವಿಧ್ಯದ ತಾಣ. ಆನೆ ಕಾರಿಡಾರ್‌ ಸಹ ಹೌದು. ಪಶ್ಚಿಮ ಘಟ್ಟದಲ್ಲಿ ಹುಲಿಗಳ ವಂಶಾಭಿವೃದ್ಧಿಗೆ ಅತ್ಯುತ್ತಮ ವಾತಾವರಣ ಇದೆ. ಯೋಜನೆ ಜಾರಿ ಮಾಡಿದರೆ ಪಶ್ಚಿಮ ಘಟ್ಟ ನಾಶವಾಗಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  

‘ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 10,277 ಚದರ ಕಿ.ಮೀ ಹಾಗೂ ಜಿಲ್ಲೆಯ ಅರಣ್ಯ ಪ್ರದೇಶ 8,118 ಚದರ ಕಿ.ಮೀ ಎಂದು ಭಾರತೀಯ ಅರಣ್ಯ ಸಮೀಕ್ಷೆ 2017 ವರದಿ ತಿಳಿಸಿದೆ. ರೈಲು ಯೋಜನೆ ಅನುಷ್ಠಾನಗೊಂಡರೆ ಜಿಲ್ಲೆ ಎರಡು ಭಾಗಗಳಾಗಿ ವಿಭಜನೆಗೊಳ್ಳಲಿದೆ ಹಾಗೂ ಕಾಡುಪ್ರಾಣಿಗಳ ಸಹಜ ಸಂಚಾರಕ್ಕೆ ಅಡ್ಡಿಯಾಗಲಿದೆ ಎಂದು ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ವರದಿ ಸಲ್ಲಿಸಿದ್ದಾರೆ. ಕಾಳಿ ಹುಲಿ ಸಂರಕ್ಷಿತ ಅರಣ್ಯದ ದಕ್ಷಿಣ ಭಾಗದ ಗಡಿಯ ಹತ್ತಿರದಲ್ಲೇ ಈ ಮಾರ್ಗ ಹಾದುಹೋಗಲಿದೆ. ನದಿಗಳಿಗೂ ಆಪತ್ತು ಉಂಟಾಗಲಿದೆ ಎಂದು ಅರಣ್ಯ ಸಚಿವಾಲಯದ ಪ್ರಾದೇಶಿಕ ಸಿಸಿಎಫ್‌ 2004ರಲ್ಲೇ ವರದಿ ಸಲ್ಲಿಸಿದ್ದಾರೆ. ಜತೆಗೆ, ಅದಿರು ಸಾಗಣೆ ಈಗ ನಿಂತಿದೆ. ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆಗೆ ಅನೇಕ ಕಾಡುಪ್ರಾಣಿಗಳು ಸತ್ತಿವೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ವ್ಯಾಪಕವಾಗಲಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಯೋಜನೆಯ ಹಾದಿ ಏನು–ಎತ್ತ?

ಹೊಸ ಬ್ರಾಡ್‌ಗೇಜ್‌ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆ 1997–98ರಲ್ಲಿ ಒಪ್ಪಿಗೆ ನೀಡಿತ್ತು. ಈ ಯೋಜನೆಗೆ ತಲಾ ಶೇ 50: 50 ಹೂಡಿಕೆ ಮಾಡಬೇಕು ಎಂದು ರೈಲ್ವೆ ಇಲಾಖೆ ಹಾಗೂ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕ್ರೈಡ್‌) ಒಪ್ಪಂದ ಮಾಡಿಕೊಂಡಿದ್ದವು.

ಮಾರ್ಗ ನಿರ್ಮಾಣಕ್ಕೆ 965 ಹೆಕ್ಟೇರ್‌ ಅರಣ್ಯ ಸೇರಿದಂತೆ 1384 ಹೆಕ್ಟೇರ್‌ ಜಾಗ ಬೇಕೆಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. 329 ಸೇತುವೆಗಳು, 25 ಟನೆಲ್‌ಗಳು ಹಾಗೂ 12 ರೈಲು ನಿಲ್ದಾಣಗಳ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಶುರುವಿನಲ್ಲಿ ಯೋಜನಾ ವೆಚ್ಚ ₹1153 ಕೋಟಿ ಆಗಿತ್ತು. ನಂತರ ಅದು ₹2,316 ಕೋಟಿಗೆ ಏರಿತ್ತು. ಪರಿಷ್ಕೃತ ಸರ್ವೆಗಳ ಬಳಿಕ 596 ಹೆಕ್ಟೇರ್‌ ಅರಣ್ಯ ಭೂಮಿ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಬಳ್ಳಾರಿ–ಹೊಸಪೇಟೆಯಿಂದ ಕಾರವಾರ ಬಂದರಿಗೆ ಅದಿರು ಸಾಗಣೆ ಮಾಡುವ ಉದ್ದೇಶದಿಂದ ಈ ಮಾರ್ಗ ನಿರ್ಮಿಸಲಾಗುತ್ತಿದೆ ಎಂದು ತಿಳಿಸಲಾಗಿತ್ತು.

ಸಿಮೆಂಟ್ ಕಾಮಗಾರಿ ನಿಲ್ಲಿಸಲು ಒತ್ತಾಯ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಸಿಮೆಂಟ್ ಕಾಮಗಾರಿ ಕೂಡಲೇ  ನಿಲ್ಲಿಸಬೇಕು ಎಂದು ಜೋಯಿಡಾ ಕಾಳಿ ಬ್ರಿಗೇಡ್ ಒತ್ತಾಯಿಸಿದೆ.

‘ಸ್ಥಳೀಯರಿಗೆ ಯಾವುದೇ ಪ್ರಯೋಜನವಿಲ್ಲದ ಭ್ರಷ್ಟಾಚಾರದಿಂದ ಕೂಡಿದ ಯೋಜನೆಗಳನ್ನು ಆ ಪ್ರದೇಶದಲ್ಲಿ ನಡೆಸಲಾಗುತ್ತಿದೆ. ಪರಿಸರಕ್ಕೆ ಮತ್ತು ವನ್ಯಜೀವಿಗಳಿಗೆ ಮಾರಕವಾದ ಯೋಜನೆಗಳನ್ನು ಅರಣ್ಯ ಅಧಿಕಾರಿಗಳು ಜಾರಿಗೊಳಿಸಲು ಮುಂದಾಗಿದ್ದಾರೆ’ ಎಂದು ಬ್ರಿಗೇಡ್‍ ಮುಖ್ಯ ಸಂಚಾಲಕ ರವಿ ರೇಡಕರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಗುತ್ತಿಗೆದಾರರು ವನ್ಯಜೀವಿಗಳ ನಾಶಕ್ಕೆ ಮುಂದಾಗಿದ್ದಾರೆ. ಸ್ಥಳೀಯರ ಹೋರಾಟಕ್ಕೆ, ಮನವಿಗಳಿಗೆ ಅಲ್ಲಿನ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರ್ಕಾರ ಕಾಳಿ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಸಿಒಡಿ ತನಿಖೆ ನಡೆಸಬೇಕು’ ಎಂದು ಅವರು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !