ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಂಗಾಲೇಶ್ವರ ಭೇಟಿಗೆ ನಿರಾಕರಿಸಿದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ
Last Updated 20 ಫೆಬ್ರುವರಿ 2020, 21:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಹಿನ್ನೆಲೆಯಲ್ಲಿ ಫೆ.23 ರಂದು ಆಯೋಜಿಸಿರುವ ಸತ್ಯ ದರ್ಶನ ಸಭೆಗೆ ಆಹ್ವಾನಿಸಲು ಬಂದಿದ್ದ ಬಾಲೇಹೂಸೂರಿನ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗಲು ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನಿರಾಕರಿಸಿದರು.

ಸಭೆ ಆಯೋಜನೆಗೆ ಬುಧವಾರ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುರುವಾರ ಮಠಕ್ಕೆ ಭೇಟಿ ಸಭೆಯಲ್ಲಿ ಭಾಗವಹಿಸಿ ಉತ್ತರಾಧಿಕಾರಿ ಸಮಸ್ಯೆ ಪರಿಹಾರಕ್ಕೆ ಅವಕಾಶ ಒದಗಿಸಿಕೊಡಬೇಕು ಎಂದು ಕೋರಿದರು.

ಲಿಂಗೈಕ್ಯ ಗುರುಸಿದ್ಧೇಶ್ವರರ ಗದ್ದುಗೆ ದರ್ಶನ ಪಡೆದ ನಂತರ ಮಠದ ಭಕ್ತ ವಿಜಯ ಶೆಟ್ಟರ್‌ ಅವರೊಂದಿಗೆ ಮಾತು
ಕತೆ ನಡೆಸಿದರು. ಅಲ್ಲಿಂದ ಪ್ರಾಂಗಣದಲ್ಲಿ ಬಂದು ಕುಳಿತು, ‘ಗುರುಗಳ ದರ್ಶನಕ್ಕೆ ಬಂದಿದ್ದೇನೆ. ಅವರನ್ನೂ ಸಭೆಗೆ ಆಹ್ವಾನಿಸುತ್ತೇನೆ’ ಎಂದರು.

‘ಮಠದ ಏಳ್ಗೆಗಾಗಿ ಬಂದಿದ್ದೇನೆ. ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಉತ್ತರಾಧಿಕಾರಿ ನಾನೇ ಎನ್ನುವವರಿಗೆ, ಆರೋಪ ಮಾಡುವವರಿಗೆ ವೇದಿಕೆ ಕಲ್ಪಿಸಿದ್ದೇನೆ. ಅವರು ಅಲ್ಲಿ ತಮ್ಮ ಅಭಿಪ್ರಾಯ ಮಂಡಿಸಲಿ. ದಾಖಲೆಗಳೊಂದಿಗೆ ಉತ್ತರ ನೀಡುತ್ತೇನೆ’ ಎಂದು ಹೇಳಿದರು.

ಪೊಲೀಸ್‌ ಬಂದೋಬಸ್ತ್‌ ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು. ಅಷ್ಟರಲ್ಲಿ ಮಠದ ಭಕ್ತರಾದ ವಿಜಯ ಶೆಟ್ಟರ್‌ ಬಂದು, ‘ಸ್ವಾಮೀಜಿ ಅವರು ಸಮಾಜದ ಹಿರಿಯರೊಂದಿಗೆ ನಿಮ್ಮನ್ನು ಭೇಟಿಯಾಗುತ್ತಾರಂತೆ. ಈಗ ಭೇಟಿಯಾಗುವುದಿಲ್ಲ’ ಎಂದು ತಿಳಿಸಿದರು.

‘ಮಠದ ಬಾಗಿಲು ಬಂದ್‌ ಮಾಡಿರುವುದು ಆಶ್ಚರ್ಯವಾಗುತ್ತಿದೆ. ದರ್ಶನಕ್ಕೆ ಬಂದವರ ಭೇಟಿಗೆ ಅವಕಾಶ ಕೊಡದಿರುವುದು ಸರಿಯಲ್ಲ. ಮಠದ ವಿದ್ಯಾರ್ಥಿಯಾಗಿದ್ದೇನೆ. ಇಲ್ಲಿರುವವರು ಗುರುಗಳಿಗೆ ಸ್ವಾತಂತ್ರ್ಯ ನೀಡಬೇಕು. ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ತಪ್ಪು ಸಂದೇಶ ಹೋಗುತ್ತದೆ. ಭೇಟಿಯಾಗಲು ಅವಕಾಶ ನೀಡದಂತೆ ತಡೆ ಹಿಡಿದವರು ಯಾರು ಎಂಬುದು ಬಹಿರಂಗವಾಗಬೇಕು’ ಎಂದು ದಿಂಗಾಲೇಶ್ವರ ಶ್ರೀ ಆಗ್ರಹಿಸಿದರು.

‘ಸಭೆಯಲ್ಲಿ ಭಾಗವಹಿಸಬೇಕು ಎಂಬ ಮನವಿ ಪತ್ರವನ್ನು ಗುರುಗಳು ವಿಶ್ರಾಂತಿಯಲ್ಲಿರುವುದರಿಂದ ಸ್ವೀಕರಿಸಿಲ್ಲ. ಇದನ್ನು ಗುರುಸಿದ್ದೇಶ್ವರನ ಗದ್ದುಗೆಯಲ್ಲಿಟ್ಟು ಹೋಗುತ್ತೇನೆ. ಜವಾಬ್ದಾರಿ ಹೊಂದಿರುವವರು ಅದನ್ನು ಗುರುಗಳಿಗೆ ತಲುಪಿಸಬೇಕು’ ಎಂದು ಹೇಳಿ, ಗದ್ದುಗೆ ಮುಂದಿಟ್ಟು ಹೋರಟು ಹೋದರು.

‘ಪ್ರಾಣ ತ್ಯಾಗಕ್ಕೂ ಸಿದ್ಧ’
ಧಾರವಾಡ: ‘ಹುಬ್ಬಳ್ಳಿ ಮೂರು ಸಾವಿರ ಮಠದ ಗದ್ದುಗೆ ಏರಲು ಹಣದ ಲಾಬಿ ನಡೆಸಿದ್ದೇನೆ ಹಾಗೂ ನಾನೊಬ್ಬ ಗೂಂಡಾ ಎಂದು ಹೇಳಿದವರು ಆರೋಪ ಸಾಬೀತುಪಡಿಸಿದರೆ ಮೂರುಸಾವಿರ ಮಠದ ಕರ್ತೃ ಗದ್ದುಗೆ ಎದುರೇ ಪ್ರಾಣ ಬಿಡುತ್ತೇನೆ’ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಇಲ್ಲಿ ಹೇಳಿದರು.ಇಲ್ಲಿನ ಲಿಂಗಾಯತ ಭವನದಲ್ಲಿ ಗುರುವಾರ ನಡೆದವೀರಶೈವ ಲಿಂಗಾಯತ ಮುಖಂಡರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ‘ಮೂಜಗು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅದು ಕೆಲವರ ಕಲ್ಪನೆ ಅಷ್ಟೆ. ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿದೆ. ನನಗೆ ಮಠದ ಗದ್ದುಗೆ ಏರುವ ಆಸೆ ಇಲ್ಲ ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT