ಸಂಕಷ್ಟದಲ್ಲಿ ಗ್ರಂಥಾಲಯ ‘ಜ್ಞಾನ’ ದೇಗುಲ

7
₹127.69 ಕೋಟಿ ಬಾಕಿ ಉಳಿಸಿಕೊಂಡ ಸ್ಥಳೀಯ ಸಂಸ್ಥೆಗಳು

ಸಂಕಷ್ಟದಲ್ಲಿ ಗ್ರಂಥಾಲಯ ‘ಜ್ಞಾನ’ ದೇಗುಲ

Published:
Updated:
Prajavani

ಹುಬ್ಬಳ್ಳಿ: ನಗರ ಹಾಗೂ ಗ್ರಾಮೀಣ ಪ್ರದೇಶದ ಜನರ ಜ್ಞಾನದೇಗುಲಗಳಾಗಿರುವ ಗ್ರಂಥಾಲಯಗಳು ಹಣ ಇಲ್ಲದೆ ಸೊರಗಿವೆ. ಅವುಗಳ ಅಭಿವೃದ್ಧಿಗೆಂದು ಸಂಗ್ರಹಿಸುವ ತೆರಿಗೆಯ ಮೊತ್ತವನ್ನು ಸ್ಥಳೀಯ ಸಂಸ್ಥೆಗಳು ನೀಡದ ಕಾರಣ ರಾಜ್ಯದಲ್ಲಿರುವ 12,791 ಗ್ರಂಥಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಶೇ 6ರಷ್ಟನ್ನು ಗ್ರಂಥಾಲಯ ಕರ ಎಂದೇ ಜನರಿಂದ ವಸೂಲು ಮಾಡುತ್ತವೆ. ಆದರೆ, ಆ ಹಣವನ್ನು ಗ್ರಂಥಾಲಯಗಳಿಗೆ ನೀಡುತ್ತಿಲ್ಲ. ನಗರ ಸ್ಥಳೀಯ ಸಂಸ್ಥೆಗಳು ₹54 ಕೋಟಿ, ಗ್ರಾಮ ಪಂಚಾಯ್ತಿಗಳು ₹73.69 ಕೋಟಿ ಬಾಕಿ ಉಳಿಸಿಕೊಂಡಿವೆ.

ಸ್ಥಳೀಯ ಸಂಸ್ಥೆಗಳು ನೀಡುವ ಹಣವನ್ನು ಸಾಮಾನ್ಯವಾಗಿ ಪುಸ್ತಕ ಖರೀದಿ, ಸ್ಟೇಷನರಿ, ಕಟ್ಟಡಗಳ ನಿರ್ವಹಣೆ ಹಾಗೂ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಸ್ವೀಪರ್‌ಗಳ ಗೌರವ ಧನ ನೀಡುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ, ಸಂಸ್ಥೆಗಳು ಹಣ ಪಾವತಿಸದ ಕಾರಣ ಹಲವು ಗ್ರಂಥಾಲಯಗಳು ಸುಣ್ಣ– ಬಣ್ಣವನ್ನೂ ಕಂಡಿಲ್ಲ.

ಕೆಲವು ಸಂಸ್ಥೆಗಳು ಒಂದು ವರ್ಷದಿಂದ; ಇನ್ನು ಕೆಲವು ಸಂಸ್ಥೆಗಳು ನಾಲ್ಕೈದು ವರ್ಷಗಳಿಂದ ಬಾಕಿ ಉಳಿಸಿಕೊಂಡಿವೆ. ಒತ್ತಡ ಹಾಕಿದಾಗ ಒಂದಷ್ಟು ಹಣ ಬಿಡುಗಡೆ ಆಗುತ್ತದೆ. ಇಲ್ಲದಿದ್ದರೆ ಇಲ್ಲ. ವರ್ಷದಿಂದ ವರ್ಷಕ್ಕೆ ಬಾಕಿ ಮೊತ್ತ ಏರುತ್ತಲೇ ಇದೆ ಎನ್ನುತ್ತಾರೆ ಗ್ರಂಥಾಲಯ ಅಧಿಕಾರಿಯೊಬ್ಬರು.

ಹುಬ್ಬಳ್ಳಿ– ಧಾರವಾಡದ ಗ್ರಂಥಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ 60 ಮಂದಿ ಸ್ವೀಪರ್‌ಗಳನ್ನು ತಲಾ ₹4,000 ಗೌರವ ಧನಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ಗೌರವ ಧನವನ್ನು ಸ್ಥಳೀಯ ಸಂಸ್ಥೆಗಳು ಪಾವತಿಸುವ ಹಣದಲ್ಲಿಯೇ ನೀಡಬೇಕು. ಸರಿಯಾಗಿ ಪಾವತಿಸದೇ ಇರುವುದರಿಂದ ಮೂರು ತಿಂಗಳಿಗೊಮ್ಮೆ ನೀಡುವಂತಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸಾಕಷ್ಟು ವಿದ್ಯಾರ್ಥಿಗಳು ಗ್ರಂಥಾಲಯಗಳನ್ನೇ ಅವಲಂಬಿಸಿದ್ದಾರೆ. ಅನುದಾನದ ಕೊರತೆಯಿಂದಾಗಿ ಕೆಲವು ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಯಮಿತವಾಗಿ ಹಣ ಬಿಡುಗಡೆಯಾದರೆ ಈ ತೊಂದರೆ ತಪ್ಪುತ್ತದೆ.

ಪತ್ರಿಕೆ ಖರೀದಿಗೆ ಕೇವಲ ₹400: ‘ಗ್ರಾಮ ಪಂಚಾಯ್ತಿಗಳು, ದಿನಪತ್ರಿಕೆಗಳ ಖರೀದಿಗೆ ತಿಂಗಳಿಗೆ ₹400 ಮಾತ್ರ ಬಿಡುಗಡೆ ಮಾಡುತ್ತವೆ. ಆ ಹಣದಲ್ಲಿ ಕೇವಲ ಎರಡು ಪತ್ರಿಕೆ, ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪತ್ರಿಕೆ ಖರೀದಿ ಮಾಡಲು ಸಾಧ್ಯವಾ
ಗುತ್ತಿದೆ. ಆದ್ದರಿಂದ ಈ ಹಣವನ್ನು ಕನಿಷ್ಠ ₹ 800ಕ್ಕೆ ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗಿದೆ’ ಎನ್ನುತ್ತಾರೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕಿ ಹೇಮಾ ಸಾಲಿಗಟ್ಟಿ.

**

ನಿಯಮಿತವಾಗಿ ಹಣ ಬಿಡುಗಡೆ ಮಾಡದ ಕಾರಣ ಗ್ರಂಥಾಲಯ ನಡೆಸುವುದು ಕಷ್ಟವಾಗುತ್ತಿದೆ
- ಎಂ.ಬಿ. ಕರಿಗಾರ, ಉಪ ನಿರ್ದೇಶಕರು, ಧಾರವಾಡ ನಗರ ಕೇಂದ್ರ ಗ್ರಂಥಾಲಯ

**

ಸ್ಥಳೀಯ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಹಣ ಬಿಡುಗಡೆಗೆ ಜಿಲ್ಲಾ ಪಂಚಾಯ್ತಿ ಸಿಇಒ ಗಳಿಗೆ ಪತ್ರ ಬರೆಯಲಾಗಿದೆ
- ಸತೀಶ ಕುಮಾರ ಹೊಸಮನಿ, ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ, ಬೆಂಗಳೂರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !