ಕೊಡಗಿನಲ್ಲಿ ಮಾನವ ಹಸ್ತಕ್ಷೇಪವೇ ಭೂಕುಸಿತಕ್ಕೆ ಕಾರಣ:ಭೂವಿಜ್ಞಾನಿಗಳ ವರದಿ ಸಲ್ಲಿಕೆ

7
ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ

ಕೊಡಗಿನಲ್ಲಿ ಮಾನವ ಹಸ್ತಕ್ಷೇಪವೇ ಭೂಕುಸಿತಕ್ಕೆ ಕಾರಣ:ಭೂವಿಜ್ಞಾನಿಗಳ ವರದಿ ಸಲ್ಲಿಕೆ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಬೆಟ್ಟಗಳಲ್ಲಿ ಅತಿಯಾದ ಮಾನವ ಹಸ್ತಕ್ಷೇಪ ಹಾಗೂ ಅರಣ್ಯ ನಾಶವೇ ಮೂಲ ಕಾರಣ ಎಂದು ಭಾರತೀಯ ಭೂಸರ್ವೇಕ್ಷಣಾ ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಥಮಿಕ ಅಧ್ಯಯನ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ.

ಇಲಾಖೆ ನಿರ್ದೇಶಕ ಕೆ.ವಿ.ಮಾರುತಿ, ಹಿರಿಯ ಭೂವಿಜ್ಞಾನಿ ಅಂಕುರ್‌ಕುಮಾರ್‌ ಶ್ರೀವಾಸ್ತವ್‌, ಭೂವಿಜ್ಞಾನಿ ಸುನಂದನ್‌ ಬಸು ಅವರನ್ನು ಒಳಗೊಂಡ ತಂಡವು ಭೂಕುಸಿತ ಪ್ರದೇಶಕ್ಕೆ ಭೇಟಿನೀಡಿ ಪರಿಶೀಲಿಸಿ, ಈ ವರದಿ ತಯಾರಿಸಿತ್ತು.

ಜಿಲ್ಲೆಯ 105 ಕಡೆ ಸಣ್ಣ ಹಾಗೂ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿ ಹಾನಿ ಸಂಭವಿಸಿತ್ತು. ಜಿಲ್ಲಾಡಳಿತದ ಮನವಿ ಮೇರೆಗೆ ಆಗಸ್ಟ್ 27ರಿಂದ ಸೆ. 1ರ ತನಕ ಜಿಲ್ಲೆಯ ವಿವಿಧೆಡೆ ತೆರಳಿ ಅಧ್ಯಯನ ನಡೆಸಿರುವ ತಂಡವು ಭೂಕುಸಿತಕ್ಕೆ ಹಲವು ಕಾರಣಗಳನ್ನು ಪತ್ತೆ ಮಾಡಿದೆ.

ಹಲವು ವರ್ಷಗಳ ಬಳಿಕ ಕೊಡಗಿನಲ್ಲಿ ಮಹಾಮಳೆ ಸುರಿದಿದೆ. ಮಳೆಯ ನೀರು ಏಕಾಏಕಿ ನುಗ್ಗಿದ ಪರಿಣಾಮವಾಗಿ ಬೆಟ್ಟಕ್ಕೆ ಹಾನಿಯಾಗಿರುವ ಸಾಧ್ಯತೆಯಿದೆ. ಅಲ್ಲದೇ, ಬೆಟ್ಟಗಳನ್ನು ಕಡಿದು ಆಧುನಿಕ ವ್ಯವಸ್ಥೆ ಮಾಡಿಕೊಂಡಿರುವುದೂ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಲು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಟ್ಟಗಳನ್ನು ಅವೈಜ್ಞಾನಿಕವಾಗಿ ಸಮತಟ್ಟು ಮಾಡಿ ಕಾಡುಜಾತಿಯ ಮರ ಕಡಿದು ಕಾಫಿ ತೋಟ ಬೆಳೆಸಲಾಗಿದೆ. ಅಲ್ಲಿ ನೀರಿನ ಸಹಜ ಹರಿಯುವಿಕೆಗೆ ಅಡಚಣೆಯಾಗಿದೆ. ಬೆಟ್ಟಗಳ ಮೇಲೆ ದೊಡ್ಡ ಪ್ರಮಾಣದ ಕೆರೆ, ತೆರೆದ ಬಾವಿಗಳನ್ನು ನಿರ್ಮಿಸಿಕೊಂಡಿದ್ದು, ನೀರಿನ ಒತ್ತಡ ಹೆಚ್ಚಾಗಿ ಗುಡ್ಡಗಳು ಕುಸಿದಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಟ್ಟಗಳ ಮೂಲ ಸ್ವರೂಪಕ್ಕೆ ಧಕ್ಕೆ ಉಂಟು ಮಾಡಿ, ಇಳಿಜಾರು ಪ್ರದೇಶವನ್ನೇ ಮಾರ್ಪಾಡು ಮಾಡಲಾಗಿದೆ. ಅಲ್ಲಿ ರಸ್ತೆ, ಮನೆ, ಹೋಂಸ್ಟೇ, ರೆಸಾರ್ಟ್‌ ನಿರ್ಮಿಸಲಾಗಿದೆ. ಧಾರಾಕಾರ ಮಳೆಯಿಂದ ಅಲ್ಪಸ್ವಲ್ಪ ಹಾನಿಯಾದರೆ, ಮಾನವನ ಹಸ್ತಕ್ಷೇಪದಿಂದ ದೊಡ್ಡ ಪ್ರಮಾಣ ಹಾನಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

‘ರಸ್ತೆ, ಮನೆ ನಿರ್ಮಾಣದ ವೇಳೆ ಗುಡ್ಡಗಾಡು ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇಳಿಜಾರು ಪ್ರದೇಶದಲ್ಲಿ ಬೇರು ಆಳಕ್ಕೆ ಇಳಿಯುವ ಹುಲ್ಲು ಬೆಳೆಸಿದರೆ ಭೂಕುಸಿತ ತಡೆಯಲು ಸಾಧ್ಯವಿದೆ. ರಸ್ತೆ ಬದಿಯಲ್ಲಿ ನೀರು ಹರಿಯಲು ಚರಂಡಿ ನಿರ್ಮಿಸಬೇಕು. ತಡೆಗೋಡೆ ನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಮೂಲಸೌಕರ್ಯ ಹಾಗೂ ರಸ್ತೆ ನಿರ್ಮಿಸುವ ವೇಳೆ ಮೆಟ್ಟಿಲು ಆಕೃತಿಯಲ್ಲಿ ಮಣ್ಣು ತೆರವು ಮಾಡಬೇಕು ಎಂದು ಸಲಹೆ ನೀಡಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !