ಸೋಮವಾರ, ಅಕ್ಟೋಬರ್ 26, 2020
27 °C
ರಂಗಕರ್ಮಿ ಪ್ರಸನ್ನ ಉಪವಾಸ ಸತ್ಯಾಗ್ರಹಕ್ಕೆ ಗಣ್ಯರ ಬೆಂಬಲ l ಸಚಿವ ಸುರೇಶ್‌ ಕುಮಾರ್‌ ಭೇಟಿ

ರಾಕ್ಷಸ ಆರ್ಥಿಕತೆ ಮಣಿಸಿ: ಪ್ರಧಾನಿ ಮೋದಿಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪವಿತ್ರ ಆರ್ಥಿಕತೆಯನ್ನು ಜಾರಿಗೆ ತರುವ ಮೂಲಕ ರಾಕ್ಷಸ ಆರ್ಥಿಕತೆಯನ್ನು ಮಣಿಸಿ’ ಎಂದು ಒತ್ತಾಯಿಸಿ ಗ್ರಾಮಸೇವಾಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಪವಿತ್ರ ಆರ್ಥಿಕತೆಗೆ ಆಗ್ರಹಿಸಿ ಗ್ರಾಮ ಸೇವಾ ಸಂಘ ನಗರದಲ್ಲಿ ನಡೆಸುತ್ತಿರುವ ಸತ್ಯಾಗ್ರಹದ ಭಾಗವಾಗಿ ರಂಗಕರ್ಮಿ ಪ್ರಸನ್ನ ಅವರು ಆರಂಭಿಸಿರುವ ಉಪವಾಸ ಸತ್ಯಾಗ್ರಹ ಮೂರು ದಿನ ಪೂರ್ಣಗೊಂಡಿದೆ.

ಮಂಗಳವಾರ ಪ್ರಧಾನಿಗೆ ಪತ್ರ ಬರೆದಿರುವ ಸಂಘ, ‘ದಸರಾ ಎಂದರೆ ಪವಿತ್ರ ಶಕ್ತಿಗಳು, ರಾಕ್ಷಸ ಶಕ್ತಿಗಳನ್ನು ಮಣಿಸಿದ ಸಂಭ್ರಮಿಸುವ ದಿನ. ರಾಕ್ಷಸ ಶಕ್ತಿಗಳನ್ನು ಮಣಿಸಬೇಕಾದಲ್ಲಿ ಮೊದಲು ಪವಿತ್ರ ಆರ್ಥಿಕತೆಯನ್ನು ಜಾರಿಗೆ ತರಬೇಕು. ‌ಉದ್ಯೋಗ ಹಾಗೂ ಪರಿಸರವನ್ನು ಉಳಿಸುವ ಶಕ್ತಿ ಪವಿತ್ರ ಆರ್ಥಿಕತೆಗೆ ಇದೆ’ ಎಂದು ಹೇಳಿದೆ.

‘ನೀವು ಸಮರ್ಥ ನಾಯಕರು. ‌ನಮ್ಮ ಬೇಡಿಕೆಗಳ ಪಟ್ಟಿಯನ್ನೂ ನಿಮಗೆ ಕಳುಹಿಸಿದ್ದೇವೆ. ಆದಷ್ಟು ಶೀಘ್ರದಲ್ಲಿ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇವೆ’ ಎಂದು ತಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಿ.ಎಂ ಯಡಿಯೂರಪ್ಪ ಅವರಿಗೂ ಸಂಘವು ಪತ್ರದ ಪ್ರತಿಯನ್ನು ಕಳುಹಿಸಿದೆ.

ಸತ್ಯಾಗ್ರಹದಲ್ಲಿ ಮಂಗಳವಾರ ಭಾಗವಹಿಸಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ‘ಮಾನವಹಕ್ಕುಗಳು ಮತ್ತು ಮನುಷ್ಯರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಎರಡೂ ಸರ್ಕಾರಗಳು ಸೋತಿವೆ. ಬಡತನ, ನಿರುದ್ಯೋಗ, ಪರಿಸರ ಹಾನಿ ಹೆಚ್ಚಾಗಿದೆ. ಗಾಂಧೀಜಿ ಮತ್ತು ಮಾರ್ಕ್ಸ್ ಅವರ ತತ್ವಾದರ್ಶಗಳ ನೆಲೆಯಲ್ಲಿ ಸಾಮಾನ್ಯ ಪ್ರಜೆಗಳ ಕೇಂದ್ರಿತವಾದ ನಿಯಮಗಳನ್ನು ರೂಪಿಸಬೇಕು’ ಎಂದರು.

ಶಾಸಕ ಕೆ.ಆರ್. ರಮೇಶ್‌ ಕುಮಾರ್ ಇದ್ದರು.

‘ಪರಿಸರ ನಿಯಮ ಉಲ್ಲಂಘನೆ ಅಸಾಧ್ಯ’
‘ಪರಿಸರದ ನಿಯಮಗಳನ್ನು ಉಲ್ಲಂಘಿಸಿ ನಾಗರಿಕತೆಯನ್ನು ಸರಿಪಡಿಸುವುದು ಅಸಾಧ್ಯ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟರು.

‌‘ಕೇವಲ ಬಂಡವಾಳಶಾಹಿಗಳಿಗಲ್ಲ, ಸಾಮಾನ್ಯ ಜನರಿಗೂ ಇಂದು ಸರ್ಕಾರ ಉತ್ತರಿಸಬೇಕಿದೆ. ಪರಿಸರ ಉಳಿಸುವ ಕಡೆಗೆ ಸ್ಪಷ್ಟ ನಿಲುವು ಇರಬೇಕು. ಆರ್ಥಿಕತೆಯ ನೀತಿಗಳನ್ನು ಮನಬಂದಂತೆ ಉಲ್ಲಂಘನೆ ಮಾಡಬಹುದು. ಆದರೆ, ಪರಿಸರದ ನಿಯಮಗಳನ್ನು ಉಲ್ಲಂಘಿಸಲು ಆಗುವುದಿಲ್ಲ’ ಎಂದರು.

ಉಪವಾಸ ಕೈಬಿಡಿ: ಸಚಿವ ಮನವಿ
ಉಪವಾಸನಿರತ ಪ್ರಸನ್ನ ಅವರನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್ ಅವರು ಭೇಟಿ ಮಾಡಿ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.

‘ಪವಿತ್ರ ಆರ್ಥಿಕತೆಗೆ ಬೇಕಾದ ನೀತಿಗಳನ್ನು ರೂಪಿಸುವ ಸಂಬಂಧ ಸರ್ಕಾರದೊಂದಿಗೆ ಚರ್ಚಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು