ಹೈದರಾಬಾದ್‌– ಕರ್ನಾಟಕ: ಹಂಚಿಕೆ ₹4,381 ಕೋಟಿ– ಖರ್ಚು ₹2,283 ಕೋಟಿ

7
ಅಭಿವೃದ್ಧಿಯ ‘ಬೆಳಕು’ ಚೆಲ್ಲಿದ ಮಂಡಳಿ ಕಾರ್ಯದರ್ಶಿ

ಹೈದರಾಬಾದ್‌– ಕರ್ನಾಟಕ: ಹಂಚಿಕೆ ₹4,381 ಕೋಟಿ– ಖರ್ಚು ₹2,283 ಕೋಟಿ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ 2013ರ ಬಳಿಕ ಹೈದರಾಬಾದ್‌– ಕರ್ನಾಟಕ ಭಾಗದ ಅಭಿವೃದ್ಧಿಗೆ ₹4,381 ಕೋಟಿ ಹಂಚಿಕೆ ಮಾಡಿದೆ. ಆದರೆ ಖರ್ಚು ಆಗಿದ್ದು ₹2,283 ಕೋಟಿ ಮಾತ್ರ!

ವಿಧಾನಸೌಧದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಹೈದರಾಬಾದ್‌–ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಎಚ್‌ಕೆಆರ್‌ಡಿಬಿ) ಕಾರ್ಯದರ್ಶಿ ಸುಬೋಧ್‌ ಯಾದವ್‌ ‘ಅಭಿವೃದ್ಧಿಯ ಪಥ’ದ ಬಗ್ಗೆ ಬೆಳಕು ಚೆಲ್ಲಿದರು. ಈ ಮಾತು ಕೇಳಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಬ್ಬಿಬ್ಬಾದರು. ಹಣ ಖರ್ಚಾಗದೆ ಉಳಿಯಲು ಕಾರಣವೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಸಾಕಷ್ಟು ಅಧಿಕಾರಿಗಳ ಕೊರತೆ ಇದೆ ಎಂದು ಸುಬೋಧ್ ಹೇಳಿದರು. ಈ ವಿಷಯದ ಚರ್ಚೆಗೆ ಪ್ರತ್ಯೇಕ ಸಭೆ ಕರೆಯುತ್ತೇನೆ ಎಂದೂ ಮುಖ್ಯಮಂತ್ರಿ ಹೇಳಿದರು.

ಹೈದರಾಬಾದ್‌–ಕರ್ನಾಟಕ ಭಾಗಕ್ಕೆ ಕೇಂದ್ರ ಸರ್ಕಾರ 2014ರಲ್ಲಿ ‘371 ಜೆ’ ವಿಶೇಷ ಸ್ಥಾನಮಾನ ನೀಡಿತ್ತು. ಇದರಿಂದಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದೆ. ಮಂಡಳಿಯ ವ್ಯಾಪ್ತಿಗೆ ಬೀದರ್‌, ಬಳ್ಳಾರಿ, ಕಲಬುರ್ಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಬರುತ್ತವೆ. ಈ ಮಂಡಳಿಗೆ ಸರ್ಕಾರ ಪ್ರತಿವರ್ಷ ₹1,500 ಕೋಟಿ ಅನುದಾನ ನೀಡುತ್ತಿದೆ. ಇದರಿಂದಾಗಿ ಈ ಪ್ರದೇಶದ ರಸ್ತೆಗಳು ಸುಧಾರಣೆ ಆಗಿವೆ. ಹಲವು ಮೂಲಸೌಕರ್ಯಗಳು ದೊರೆತಿವೆ. ಒಂದು ವೇಳೆ ಪೂರ್ಣ ಅನುದಾನ ಬಳಕೆ ಮಾಡಿದ್ದರೆ ಈ ಭಾಗದ ಚಹರೆಯೇ ಬದಲಾಗುತ್ತಿತ್ತು. ಹಲವು ಮೂಲಸೌಕರ್ಯ ಕಾಮಗಾರಿಗಳು ಪ್ರಗತಿಯಲ್ಲಿವೆ ಅಷ್ಟೇ!

‘ಮಂಡಳಿಯಲ್ಲಿ ಶೇ 50ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ. 83 ಹುದ್ದೆಗಳು ಮಂಜೂರಾಗಿದ್ದವು. 40 ಹುದ್ದೆಗಳನ್ನು ತುಂಬಲಾಗಿದೆ. 13,656 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿತ್ತು. 7,902 (ಶೇ 57) ಕಾಮಗಾರಿಗಳು ಪೂರ್ಣಗೊಂಡಿವೆ’ ಎಂದು ಸುಬೋಧ್‌ ತಿಳಿಸಿದರು.

1999ರ ಬ್ಯಾಚಿನ ಐಎಎಸ್‌ ಅಧಿಕಾರಿಯಾದ ಯಾದವ್‌ ಅವರನ್ನು ಕಳೆದ ತಿಂಗಳು ಮಂಡಳಿಯ ಕಾರ್ಯದರ್ಶಿ ಹಾಗೂ ಕಲಬುರ್ಗಿ ಪ್ರಾದೇಶಿಕ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಈ ಭಾಗದಲ್ಲಿ ಕೆಲಸ ಮಾಡಲು ಖುಷಿಯಾಗುತ್ತಿದೆ ಎಂದು ಅವರು ಟ್ವೀಟ್‌ ಮಾಡಿದ್ದರು. ಮಂಡಳಿಗೆ ಹೊಸ ರೂಪ ನೀಡಲು ಯಾದವ್‌ ಮುಂದಾಗಿದ್ದಾರೆ.   

ಅನುದಾನ ಬಳಕೆ ಆಗಿದೆ: ಪಾಟೀಲ

‘ಮಂಡಳಿಯಲ್ಲಿ 2017–18ರವರೆಗೆ ಉತ್ತಮ ಕೆಲಸಗಳು ಆಗಿವೆ. ಈ ವರ್ಷ ಚುನಾವಣಾ ನೀತಿಸಂಹಿತೆ ಇದ್ದಿದ್ದರಿಂದ ಸ್ವಲ್ಪ ಕೆಲಸ ಕಡಿಮೆ ಆಗಿದೆ. ಮಂಡಳಿ ವ್ಯಾಪ್ತಿಯಲ್ಲಿ 40 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ವಿವಿಧ ಇಲಾಖೆಗಳ ಮೂಲಕ ಕೆಲಸ ಮಾಡಿಸಲಾಗುತ್ತಿದೆ. ಇವೆಲ್ಲ ಮೂಲಸೌಕರ್ಯ ಅಭಿವೃದ್ಧಿಯ ಕೆಲಸಗಳು. ಕ್ರಿಯಾಯೋಜನೆ ರೂಪಿಸುವುದು, ಟೆಂಡರ್‌ ಪ್ರಕ್ರಿಯೆ ನಡೆಸಲು ಏಳೆಂಟು ತಿಂಗಳುಗಳು ಬೇಕಾಗುತ್ತವೆ. ಬಿಡುಗಡೆಯಾದ ಬಹುತೇಕ ಅನುದಾನ ಖರ್ಚಾಗಿದೆ’ ಎಂದು ಡಾ.ಶರಣ ಪ್ರಕಾಶ ಪಾಟೀಲ ಹೇಳಿದರು. ಅವರು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಂಡಳಿಯ ಅಧ್ಯಕ್ಷರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !