ಶುಕ್ರವಾರ, ನವೆಂಬರ್ 15, 2019
22 °C

ಇಂದು ಕಲ್ಯಾಣ ಕರ್ನಾಟಕ ಉತ್ಸವ

Published:
Updated:
Prajavani

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ರಾಜ್ಯ ಸರ್ಕಾರ ಪುನರ್‌ ನಾಮಕರಣ ಮಾಡಿದ್ದು, ‘ಹೈ.ಕ. ವಿಮೋಚನಾ ದಿನ’ದ ಬದಲಾಗಿ ಇದೇ ಮೊದಲ ಬಾರಿಗೆ ‘ಕಲ್ಯಾಣ ಕರ್ನಾಟಕ ಉತ್ಸವ ದಿನ’ ಆಚರಿಸಲಾಗುತ್ತಿದೆ.

ಕಲಬುರ್ಗಿ, ರಾಯಚೂರು, ಬೀದರ್‌ ಜಿಲ್ಲೆಗಳು ಹಿಂದೆ ಹೈದರಾಬಾದ್‌ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದವು. ದೇಶಕ್ಕೆ 1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ದೊರೆತರೂ ಹೈದರಾಬಾದ್‌ ನಿಜಾಮ ತನ್ನ ಸಂಸ್ಥಾನವನ್ನು ಸ್ವತಂತ್ರ ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ಒಪ್ಪಲಿಲ್ಲ. ಇದು ಹೈದರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟಕ್ಕೆ ಕಾರಣವಾಯಿತು.

ನಂತರ 1948ರ ಸೆಪ್ಟೆಂಬರ್‌ 17ರಂದು ಈ ಹೈದರಾಬಾದ್‌ ಸಂಸ್ಥಾನ ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ಈ ಭಾಗದ ಜಿಲ್ಲೆಗಳು ಕರ್ನಾಟಕದ ಭಾಗವಾದವು. ಅಂದಿನಿಂದ ಪ್ರತಿ ವರ್ಷ ಸೆ.17ನ್ನು ‘ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನ’ ಎಂದು ಆಚರಿಸಲಾಗುತ್ತಿತ್ತು.

ಈ ಭಾಗದ ಜನರ ಬೇಡಿಕೆ ಸ್ಪಂದಿಸಿದ ರಾಜ್ಯ ಸರ್ಕಾರವು ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ ಎಂದು ಪುನರ್‌ ನಾಮಕರಣ ಮಾಡಿದೆ.

ಹೈದರಾಬಾದ್‌ ಕರ್ನಾಟಕ ಎಂದು ಕರೆಯುವಲ್ಲಿ ಕಲ್ಯಾಣ ಕರ್ನಾಟಕ ಎಂದು ಕರೆಯುವಂತೆ ಹಾಗೂ ವಿಮೋಚನಾ ದಿನಾಚರಣೆ ಬದಲು ‘ಕಲ್ಯಾಣ ಕರ್ನಾಟಕ ಉತ್ಸವ ದಿನ’ ಎಂದು ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಕಲಬುರ್ಗಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಾಲ್ಗೊಂಡು ಈ ಪ್ರದೇಶವನ್ನು ‘ಕಲ್ಯಾಣ ಕರ್ನಾಟಕ’ ಎಂದು ಘೋಷಿಸುವರು. ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿಯೂ ಈ ಉತ್ಸವ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಅವರು ತಲಾ ಒಬ್ಬೊಬ್ಬ ಸಚಿವರನ್ನು ನಿಯೋಜಿಸಿದ್ದಾರೆ.

ಕೆಎಟಿ ಪೀಠಕ್ಕೂ ಚಾಲನೆ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಕಲಬುರ್ಗಿ ಪೀಠದ ಉದ್ಘಾಟನೆ ಸೆ.17ರಂದು ನಡೆಯಲಿದೆ.

ಪ್ರತಿಕ್ರಿಯಿಸಿ (+)