ಬುಧವಾರ, ಆಗಸ್ಟ್ 21, 2019
25 °C
ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ವೃತ್ತಿ ರಂಗಭೂಮಿಯ ಹಿರಿಯ ನಟ ಜಯಕುಮಾರ್‌ ಕೊಡಗನೂರು

ತಡವಾಗಿಯಾದರೂ ಗುರುತಿಸಿದ ಖುಷಿ ನನ್ನದು

Published:
Updated:

ಬುದ್ಧಿ ತಿಳಿಯುವ ಮೊದಲೇ ತಂದೆ ಹನುಮಂತಪ್ಪ ಅವರನ್ನು ಕಳೆದುಕೊಂಡ, ತಾಯಿ ಗಂಗಮ್ಮ ತೋಳಸಮ್ಮರನವರ ಆಸರೆಯಲ್ಲೇ ಬೆಳೆದರೂ ಚೆನ್ನಾಗಿ ವಿದ್ಯೆ ಕಲಿವ ಮಗನಾಗಲಿ ಎಂಬ ತಾಯಿಯ ಆಸೆಗೆ ವಿರುದ್ಧವಾಗಿ ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡ, ಬಡತನದಲ್ಲಿಯೇ ಬೆಳೆದ ಜಯಕುಮಾರ್‌ ಕೊಡಗನೂರು ಅವರಿಗೆ 2019–20ನೇ ಸಾಲಿನ ಕರ್ನಾಟಕ ನಟಕ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಜತೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ.

ಈ ಪ್ರಶಸ್ತಿ ಬಂದ ಸುದ್ದಿ ತಿಳಿದಾಗ ಏನನಿಸಿತು?

ಅರ್ಧ ಶತಮಾನದಿಂದ ರಂಗಭೂಮಿಯಲ್ಲಿದ್ದೇನೆ. ನನ್ನಿಂದ ಚಿಕ್ಕವರಿಗೆಲ್ಲ ಪ್ರಶಸ್ತಿ ನೀಡಲಾಗಿತ್ತು. ಈಗ ನನಗೆ 71 ವರ್ಷ. ಸಕ್ಕರೆ ಕಾಯಿಲೆ ಜಾಸ್ತಿಯಾಗಿ ಆಸ್ಪತ್ರೆಗೆ ಓಡಾಡುವ ಕಾಲದಲ್ಲಿ ಪ್ರಶಸ್ತಿ ಬಂದಿದೆ. ತಡವಾದರೂ ಪರವಾಗಿಲ್ಲ, ಗುರುತಿಸಿದರಲ್ಲ. ಹಾಗಾಗಿ ಬಹಳ ಖುಷಿಯಾಗಿದೆ.

ರಂಗಭೂಮಿಯಲ್ಲಿ ನಿಮ್ಮ ಬದುಕು ಹೇಗಿತ್ತು?

ಪ್ರೌಢಶಾಲೆಯಲ್ಲಿ ಓದುವಾಗಲೇ ‘ತಾಯಿ ಕರುಳು’ ಎಂಬ ನಾಟಕದಲ್ಲಿ ಪಾತ್ರ ಮಾಡಿದೆ. ನಂತರ ನಮ್ಮ ಹಳ್ಳಿಯಲ್ಲಿ ನಾಟಕಗಳನ್ನು ಮಾಡುತ್ತಿದ್ದೆ. ಆಗ ನಿಮ್ಮಂಥ ಕೆಲವರು ಚೆನ್ನಾಗಿ ಮಾಡುತ್ತೀಯಾ ಕಂಪನಿಗೆ ಸೇರು ಎಂದು ಪ್ರೋತ್ಸಾಹಿಸಿದರು. ಬಣ್ಣದ ಮೇಲಿನ ಹುಚ್ಚು ಜಾಸ್ತಿಯಾಗಿದ್ದರಿಂದ ಕಷ್ಟದಲ್ಲಿ 10ನೇ ತರಗತಿ ಮುಗಿಸಿದೆ.  ತಾಯಿಗೆ ನಾನು ಚೆನ್ನಾಗಿ ಓದಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಆದರೆ ನನ್ನ ಗಮನ ಓದಿನ ಕಡೆ ಇಲ್ಲದಾಯಿತು. ತಾಯಿ ಜತೆ ಸ್ವಲ್ಪ ದಿನ ಕೂಲಿ ಮಾಡಿದರೂ ಅಲ್ಲಿ ನಿಲ್ಲಲು ಆಗಲಿಲ್ಲ. ಸರ್ಕಾರಿ ನೌಕರಿಗೂ ಪ್ರಯತ್ನ ಪಟ್ಟೆ ಸಿಗಲಿಲ್ಲ. ಹಿರಿಯೂರಿನ ರಂಗಶಿಲ್ಪಿ ಡಿ. ಮುನಿರಂಗಪ್ಪ ಅವರ ರಾಜರಾಜೇಶ್ವರಿ ನಾಟಕ ಸಂಘಕ್ಕೆ ಸೇರಿಕೊಂಡೆ. ‘ಸದಾರಮೆ’ ಮೂಲಕ ಹಳ್ಳಿ ನಾಟಕದಿಂದ ವೃತ್ತಿ ರಂಗಭೂಮಿಗೆ ಕಾಲಿಟ್ಟೆ. ಚಿಂದೋಡಿ ಲೀಲಾ ಕಂಪನಿ ಕಂಪಿಯಿಂದ ‘ಪೊಲೀಸನ ಮಗಳು’ ನಾಟಕ ಬೆಂಗಳೂರಿನಲ್ಲಿ ನಡೆಯುತ್ತಿದ್ದಾಗ ಅದರಲ್ಲಿ ನಿಷ್ಠಾವಂತ ಎಸ್‌ಪಿಯ ಪಾತ್ರ ನಾನು ಮಾಡಿದ್ದೆ. ಆ ನಾಟಕವನ್ನು ನೋಡಲು ತಾಯಿ ಬಂದಿದ್ದರು. ಅಲ್ಲಿಗೆ ಡಾ. ರಾಜಕುಮಾರ್‌ ಅವರೂ ಬಂದಿದ್ದರು. ನಾಟಕ ನೋಡಿ ರಾಜಕುಮಾರ್‌ ನನ್ನನ್ನು ತಬ್ಬಿಕೊಂಡು ಹೊಗಳಿಬಿಟ್ಟರು. ಅದನ್ನು ಕಂಡು ತಾಯಿ ಭಾವುಕರಾದರು. ರಾಜಕುಮಾರ್‌ರಂಥ ಮಹಾನ್‌ ಕಲಾವಿದರು ನಿನ್ನನ್ನು ಹೊಗಳಿದ್ದಾರೆ. ನನ್ನ ಜೀವನ ಸಾರ್ಥಕವಾಯಿತು ಎಂದು ತಾಯಿ ಹೇಳಿದ್ದರು.

ಯಾವ್ಯಾವ ನಾಟಕ ಕಂಪನಿಗಳಲ್ಲಿ ನಾಟಕ ಮಾಡಿದ್ದೀರಿ?

ರಾಜರಾಜೇಶ್ವರಿ ನಾಟಕ ಸಂಘ ಮೊದಲನೆಯದ್ದು. ಬಳಿಕ ಗುಬ್ಬಿ ವೀರಣ್ಣ ಕಂಪನಿಯಲ್ಲಿದ್ದೆ. ಬಳಿಕ ಸುಳ್ಯದ ದೇಸಾಯಿ ಕಂಪನಿಯಲ್ಲಿದ್ದೆ. ಅವರು ಕಿತ್ತೂರು ಚನ್ನಮ್ಮ ನಾಟಕದಲ್ಲಿ ವೇದಿಕೆಗೇ ಆನೆ, ಕುದುರೆ, ಜೀಪು ತಂದು ನಾಟಕ ಪ್ರದರ್ಶನ ಮಾಡುತ್ತಿದ್ದರು. ಬಿ. ಕುಮಾರಸ್ವಾಮಿ ನಾಟಕ ಸಂಘದಲ್ಲಿ 15 ವರ್ಷ ಇದ್ದೆ. ಚಿಂದೋಡಿ ಲೀಲಾ ಕಂಪನಿಯಲ್ಲಿದ್ದೆ. ಸದ್ಯ ಮಂಡಲಗಿರಿ ಶ್ರೀ ಸಿದ್ದಲಿಂಗೇಶ್ವರ ನಾಟ್ಯಸಂಘದಲ್ಲಿದ್ದೇನೆ.

ಖುಷಿ ನೀಡಿದ ನಾಟಕ, ಪಾತ್ರ ಯಾವುದು?

ಮದಕರಿ ನಾಯಕ, ಟಿಪ್ಪುಸುಲ್ತಾನ್‌, ಲವಕುಶ, ಮುದುಕನ ಮದುವೆಯ ಶಾಮ, ಪೊಲೀಸನ ಮಗಳು ನಾಟಕದ ನಿಷ್ಠಾವಂತ ಎಸ್‌ಪಿ ಸೇರಿದಂತೆ ಮಾಡಿದ ಎಲ್ಲ ಪಾತ್ರಗಳು ನಂಗೆ ಖುಷಿ ಕೊಟ್ಟಿವೆ. ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಾಟಕದಲ್ಲಿ ಮಾಡಿದ ತಿಪ್ಪೇರುದ್ರಸ್ವಾಮಿ ಪಾತ್ರ ಮಾತ್ರ ಇವೆಲ್ಲದಕ್ಕಿಂತ ದೊಡ್ಡದು. ಈ ಪಾತ್ರ ಮಾಡಿದಾಗ ಪ್ರೇಕ್ಷಕರೆಲ್ಲ ಪಾದಪೂಜೆ ಮಾಡಲು ಭಕ್ತಿಯಿಂದ ಬರುತ್ತಿದ್ದರು. ಅದನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.

ವೃತ್ತಿ ರಂಗಭೂಮಿಯನ್ನು ಹೊರತುಪಡಿಸಿ ಹೊರಗಿನ ಅವಕಾಶಗಳು ಯಾವುವು?

‘ಪೊಲೀಸನ ಮಗಳು’ ನಾಟಕದಲ್ಲಿ ನನ್ನ ಅಭಿನಯ ನೋಡಿದ ಬಳಿಕ ರಾಜ್‌ಕುಮಾರ್‌ ಅವರು ಶಿವಣ್ಣನ ‘ಜನುಮದ ಜೋಡಿ’ ಚಿತ್ರದಲ್ಲಿ ಪಾತ್ರ ನೀಡಿದರು. ‘ತಾಯಿಗೊಬ್ಬ ಕರ್ಣ’, ‘ಕಿಟ್ಟಿ’, ‘ಹೃದಯ ಹೃದಯ’, ‘ರಾಜ’, ‘ಜಾಕಿ’, ‘ಯುವ’ ಹೀಗೆ ಸುಮಾರು 140 ಚಿತ್ರಗಳಲ್ಲಿ ಅಭಿನಯಿಸಿದೆ. ಆನಂತರ ತಂದೆಯ ಪಾತ್ರವನ್ನೂ ಯುವಕರೇ ಮಾಡಲು ಬಂದ ಕಾರಣ ಅವಕಾಶಗಳು ಕಡಿಮೆಯಾಗಿ ಮತ್ತೆ ವೃತ್ತಿ ರಂಗಭೂಮಿಗೆ ಬಂದೆ. ಈ ನಡುವೆ ‘ಮಹಾನದಿ’, ಸಂಕ್ರಾಂತಿ, ‘ಪಾಪಪಾಂಡು’ ‘ಸಿಲ್ಲಿಲಲ್ಲಿ’ ಸೇರಿದಂತೆ ಸುಮಾರು 500 ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ.

ನೀವು ಬಣ್ಣಹಚ್ಚಲು ಆರಂಭಿಸಿದ ಕಾಲದ ಹಾಗೂ ಈ ಕಾಲದ ರಂಗಭೂಮಿಯಲ್ಲಿ ಕಂಡ ಬದಲಾವಣೆಗಳು ಯಾವುದು?

ಹಿಂದೆ ಕಲಾವಿದರಲ್ಲಿ ಶ್ರದ್ಧೆ, ಭಕ್ತಿ, ನಿಯಮ ಇತ್ತು. ಅದು ಕಾಣಿಸುತ್ತಿಲ್ಲ. ಈಗ ಏನಾದರೂ ಹೇಳಿದರೆ ಸಿಟ್ಟು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಹೇಳಲು ಹೋಗುವುದಿಲ್ಲ.

ಈಗಿನ ಕಲಾವಿದರಿಗೆ ಏನು ಹೇಳಲು ಬಯಸುವಿರಿ?

ವೃತ್ತಿಯಲ್ಲಿ ಶ್ರದ್ಧೆ, ಭಕ್ತಿ ಇರಲಿ. ಆಧುನಿಕತೆಯ ಹೆಸರಲ್ಲಿ ಈಗ ಬರೀ ಡಯಲಾಗ್‌, ಹೈಪಿಚ್‌ನಲ್ಲಿ ಕೂಗಾಡುವುದಷ್ಟೇ ರಂಗಭೂಮಿಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ.

ಸಾಂಸಾರಿಕ ಬದುಕು ಹೇಗಿದೆ?

ಪತ್ನಿ ಪದ್ಮಾವತಿ ಮನೆಯನ್ನು ತೂಗಿಸಿಕೊಂಡು ಹೋಗುತ್ತಾಳೆ. ಮನೆ ಬಿಟ್ಟು ಬೇರೇನು ಮಾಡಿಲ್ಲ. ನನಗೆ ನಾಲ್ವರು ಗಂಡು, ನಾಲ್ವರು ಹೆಣ್ಣು ಮಕ್ಕಳು. ಯಾರಿಗೂ ವರದಕ್ಷಿಣೆ ತೆಗೆದುಕೊಳ್ಳದೇ, ನೀಡದೇ ಮದುವೆ ಮಾಡಿದ ಸಂತೃಪ್ತಿ ನನ್ನದು. 

Post Comments (+)