ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು ಸಂತಸ ತಂದಿದೆ: ಪೇಜಾವರ ಶ್ರೀ

ಸಂಭ್ರಮಾಚರಣೆ ಬೇಡ; ಶಾಂತಿ, ಸೌಹಾರ್ದತೆ ನೆಲಸಲಿ: ಸ್ವಾಮೀಜಿ ಕರೆ
Last Updated 9 ನವೆಂಬರ್ 2019, 10:52 IST
ಅಕ್ಷರ ಗಾತ್ರ

ಉಡುಪಿ: ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿರುವುದು ಸಂತಸ ತಂದಿದೆ. ರಾಮಮಂದಿರ ನಿರ್ಮಾಣವಾಗಬೇಕು ಎಂಬ ಜೀವನದ ಬಹುದೊಡ್ಡ ಅಪೇಕ್ಷೆ ಈಡೇರುತ್ತಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತೀರ್ಪು ಪ್ರಕಟವಾದ ಬಳಿಕ ಶನಿವಾರ ಪೇಜಾವರ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸ್ವಾಮೀಜಿ, ‘ವಿವಾದಿತ ರಾಮಜನ್ಮ ಭೂಮಿಯು ರಾಮಲಲ್ಲಾಗೆ ದಕ್ಕಿದೆ. ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ 5 ಎಕರೆ ಪ್ರತ್ಯೇಕ ಭೂಮಿ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿದೆ. ಒಟ್ಟಾರೆ ತೀರ್ಪು ನ್ಯಾಯಸಮ್ಮತವಾಗಿದೆ ಎಂದರು.

ಹಿಂದೂಗಳಿಗೆ ರಾಮಜನ್ಮಭೂಮಿಯ ಸ್ಥಳ ಮುಖ್ಯವಾದರೆ, ಮುಸ್ಲಿಮರಿಗೆ ಮಸೀದಿ ಮುಖ್ಯವಾಗಿತ್ತು. ಈ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮುಸ್ಲಿಮರಿಗೆ ಹಾನಿಯಾಗಿಲ್ಲ. ಹಿಂದೂಗಳ ನಂಬಿಕೆಯ ಕೇಂದ್ರವಾದ ರಾಮಜನ್ಮಭೂಮಿ ಹಿಂದೂಗಳಿಗೆ ಸಿಕ್ಕರೆ, ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ ಯೋಗ್ಯವಾದ ಸ್ಥಳ ಸಿಗಲಿದೆ ಎಂದರು.

ಪರಸ್ಪರ ಸಹಕಾರ ಅಗತ್ಯ

ಮುಂದೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಕಾರ ನೀಡಲಿ, ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಕಾರ ನೀಡಲಿದ್ದಾರೆ. ಈ ಮೂಲಕ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸೌಹಾರ್ದದ ಹೊಸ ಯುಗ ಆರಂಭವಾಗಲಿ ಎಂದು ಸ್ವಾಮೀಜಿ ಆಶಿಸಿದರು.

ಎಲ್ಲರೂ ಸಮಚಿತ್ತದಿಂದ ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಬೇಕು. ಹಿಂದೂಗಳು ಸಾರ್ವಜನಿಕವಾಗಿ ವಿಜಯೋತ್ಸವ, ಮೆರವಣಿಗೆ, ಸಂಭ್ರಮಾಚರಣೆ ಮಾಡಬಾರದು. ಮುಸ್ಲಿಮರು ಉದ್ರೇಕಗೊಳ್ಳದೆ ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು. ಸಮಾಜದಲ್ಲಿ ಶಾಂತಿ ನೆಲೆಸಲು ಉಭಯ ಸಮುದಾಯಗಳು ಸಹಕರಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ಭಾನುವಾರ ದೆಹಲಿಗೆ

ಭಾನುವಾರ ದೆಹಲಿಯಲ್ಲಿ ನಡೆಯುವ ವಿಶ್ವ ಹಿಂದೂ ಪರಿಷತ್‌ನ ಸಭೆಯಲ್ಲಿ ಭಾಗವಹಿಸುತ್ತೇನೆ. ಹಿಂದೂ ಹಾಗೂ ಮುಸ್ಲಿಂ ಸಂತರು ಸಭೆಯಲ್ಲಿ ಭಾಗವಹಿಸಿ ಸಮಾಜಕ್ಕೆ ಶಾಂತಿ ಸಂದೇಶ ನೀಡಲಿದ್ದಾರೆ.ಅಯೋಧ್ಯೆಗೆ ಭೇಟಿ ನೀಡುವ ಉದ್ದೇಶವಿಲ್ಲ ಎಂದರು.

ರಾಮಮಂದಿರ ನಿರ್ಮಾಣಕ್ಕೆ ಸಮಿತಿ ರಚಿಸಲು ಸರ್ಕಾರಕ್ಕೆ ಮೂರು ತಿಂಗಳ ಗಡುವು ನೀಡಲಾಗಿದೆ. ಮಂದಿರ ನಿರ್ಮಾಣಕ್ಕೆ ಈಗಾಗಲೇ ತಯಾರಿಗಳು ನಡೆದಿವೆ. ಶೀಘ್ರ ರಾಮಮಂದಿರ ನಿರ್ಮಾಣವಾಗುವ ವಿಶ್ವಾಸವಿದೆ ಎಂದು ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT