ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನದು ಜಾತಿ ವಿನಾಶದ ಹಾದಿ,ನಿಮ್ಮದು? ಬಿಜೆಪಿ,ಜೆಡಿಎಸ್‌ಗೆ ಸಿದ್ದರಾಮಯ್ಯ ಪ್ರಶ್ನೆ

Last Updated 28 ಅಕ್ಟೋಬರ್ 2019, 8:49 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತ, ಒಕ್ಕಲಿಗ ಸಮುದಾಯಗಳು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರಿಂದ ದೂರವಾಗುತ್ತಿರುವ ಬಗ್ಗೆ ಮತ್ತು ಡಿ.ಕೆ ಶಿವಕುಮಾರ್‌ ಜೆಡಿಎಸ್‌ ಬಾವುಟ ಹಿಡಿದ ಕುರಿತು ತಾವು ಆಡಿದ್ದ ಮಾತುಗಳುಳ್ಳ ವಿಡಿಯೊವನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ತಾವು ಜಾತ್ಯತೀತವಾದಿಯಾಗಿದ್ದು, ಜನರೂ ಜಾತ್ಯತೀತವಾಗಿ ಯೋಚಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ಈ ಕುರಿತು ಇಂದು ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷಗಳು ನೈತಿಕ ಅಧಃಪತನಕ್ಕೆ ತಲುಪಿದಾಗ ಎದುರಾಳಿಗಳ ವಿರುದ್ಧ ಇಂಥ ಅಪಸವ್ಯಗಳನ್ನು ಸೃಷ್ಟಿಸುತ್ತವೆ. ಆದರೆ ಇದರಿಂದ ನನ್ನ ಸಾಮಾಜಿಕ ಬದ್ಧತೆಗೆ ಧಕ್ಕೆಯಾಗದು. ನನ್ನದು ಜಾತಿ ವಿನಾಶದ ಹಾದಿ, ನಿಮ್ಮದು ಯಾವ ಹಾದಿ ಎಂದು ಬಿಜೆಪಿ, ಜೆಡಿಎಸ್‌ ಅನ್ನು ಅವರು ಪ್ರಶ್ನಿಸಿದ್ದಾರೆ.

ಏನಿದೆ ಟ್ವೀಟ್‌ನಲ್ಲಿ?

ನನ್ನ ಮನೆಯಲ್ಲಿ ನಡೆದ ಖಾಸಗಿ ಮಾತುಕತೆಯ ವಿಡಿಯೋದ ತಪ್ಪು ವ್ಯಾಖ್ಯಾನವನ್ನು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಾ ವಿಕೃತಾನಂದ ಪಡುತ್ತಿದ್ದಾರೆ. ಇದು ನನಗೆ ಹೊಸತಲ್ಲ. ಈ ಸುಳ್ಳಿನ ಕತ್ತಲನ್ನು ಸತ್ಯದ ಬೆಳಕು ಅಳಿಸಿ ಹಾಕುತ್ತೆ. ನನ್ನ ರಾಜಕೀಯ ವಿರೋಧಿಗಳಿಗೆ ಇದೇ ನನ್ನ ದೀಪಾವಳಿ ಸಂದೇಶ.

ನಾನು ಜಾತಿವಾದಿ ಅಲ್ಲ, ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವ ನಾನು ಅಂಬೇಡ್ಕರ್,ಗಾಂಧೀಜಿ, ಬಸವಣ್ಣ ಮತ್ತು ಕುವೆಂಪು ಅವರ ಚಿಂತನೆಯಿಂದ ಪ್ರೇರಿತನಾದ ಜಾತ್ಯತೀತ. ಅವರ ಚಿಂತನೆಗಳ ಫಲವೇ ನನ್ನ ಸರ್ಕಾರದ ಯೋಜನೆಗಳಾಗಿದ್ದವು. ಇದು ನನ್ನ ಜಾತಿವಿನಾಶದ ಹಾದಿ. ನಿಮ್ಮದು ಯಾವ ಹಾದಿ?

ನಾನು ಜಾತಿ ರಾಜಕೀಯ ಮಾಡುತ್ತಿದ್ದೇನೆ ಎಂದು ಆರೋಪಿಸುವವರು ಅವರ ಪಕ್ಷಗಳ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಗಾಂಧಿ ಅಂಬೇಡ್ಕರ್, ಬಸವಣ್ಣ ಮತ್ತು ಕುವೆಂಪು ವಿಚಾರಧಾರೆಗಳೆಷ್ಟು ಇವೆ ಎನ್ನುವುದನ್ನು ಬಹಿರಂಗ ಪಡಿಸಲಿ. ಇದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ದ. ಇದು ನನ್ನ ಸವಾಲು ಕೂಡಾ ಹೌದು.

ರಾಜ್ಯದ ಮತದಾರರು ಜಾತಿ ಬಿಟ್ಟು ಯೋಚನೆ ಮಾಡುತ್ತಿದ್ದಾರೆ, ಲಿಂಗಾಯತರು ಯಡಿಯೂರಪ್ಪನವರಿಂದ, ಒಕ್ಕಲಿಗರು ಜೆಡಿಎಸ್ ಪಕ್ಷದಿಂದ ದೂರವಾಗುತ್ತಿದ್ದಾರೆ ಎಂಬ ಗೆಳೆಯರ ಮಾತಿಗೆ ನಾನು ಸಹಮತ ಸೂಚಿಸಿದ್ದು ನಿಜ. ಜನ ಜಾತ್ಯತೀತರಾಗುತ್ತಿದ್ದಾರೆ ಎಂದು ಹೇಳಿದ್ದರಲ್ಲಿ ಏನು ತಪ್ಪಿದೆ?

ರಾಜಕೀಯ ಪಕ್ಷಗಳು ನೈತಿಕವಾಗಿ ದಿವಾಳಿಯಾದಾಗ ಇಂತಹ ಅಪಸವ್ಯಗಳು ಹುಟ್ಟಿಕೊಳ್ಳುತ್ತವೆ. ವೈಯುಕ್ತಿಕ ದಾಳಿಗಳು ನನ್ನ ಸಾಮಾಜಿಕ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ಜನರಿಗಾಗಿ ಹೋರಾಡುವ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ. ಇದಕ್ಕಾಗಿ ನನ್ನ ರಾಜಕೀಯ ವಿರೋಧಿಗಳಿಗೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ಬರೆದಿದ್ದಾರೆ.

ಜತೆಗೆ ಸತ್ಯಮೇವ ಜಯತೇ ಎಂಬ ಹ್ಯಾಷ್‌ ಟ್ಯಾಗ್‌ ಅನ್ನೂ ಅವರು ತಮ್ಮ ಟ್ವೀಟ್‌ಗಳಿಗೆ ಬಳಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT