ಗುರುವಾರ , ಸೆಪ್ಟೆಂಬರ್ 19, 2019
22 °C
ಭರವಸೆ ಈಡೇರಿಸಲು ಆಗದಿದ್ದರೆ ಕುಮಾರಸ್ವಾಮಿ ಅಧಿಕಾರ ಬಿಟ್ಟು ತೊಲಗಲಿ: ವಾಗ್ದಾಳಿ

ನಂಗೆ ಜಾತಿ ಇಲ್ಲ, ನನ್ನದು ಮನುಷ್ಯ ಜಾತಿ: ಬಿಎಸ್‌ವೈ

Published:
Updated:
Prajavani

ಹುಬ್ಬಳ್ಳಿ: ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಅವರ ಮೂಗು ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಕುಂದಗೋಳದ ಅರಳಿಕಟ್ಟೆಯಲ್ಲಿ ಗುರುವಾರ ಪಕ್ಷದ ಅಭ್ಯರ್ಥಿ ಐ.ಎಸ್. ಚಿಕ್ಕನಗೌಡ್ರ ಪರ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕೊಟ್ಟ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿದ್ದರೆ ಅಧಿಕಾರ ಬಿಟ್ಟು ತೊಲಗಿ. ಜನರ ಪರವಾಗಿ ನಾವು ಕೆಲಸ ಮಾಡುತ್ತೇವೆ, ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಅವರು ವಾಗ್ದಾಳಿ ನಡೆಸಿದರು.

‘ನಂಗೆ ಜಾತಿ ಇಲ್ಲ, ನನ್ನದು ಮನುಷ್ಯ ಜಾತಿ. ಎಲ್ಲ ವರ್ಗದವರಿಗಾಗಿ ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ. ಉದ್ಯಮ ಆರಂಭಿಸುವ ಮಹಿಳೆಯರಿಗೆ ₹ 50 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಯೋಜನೆಯನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ನದಿ ಜೋಡಣೆ ಮಾಡಲು ಮುಂದಾಗಿದೆ. ರೈತರಿಗೆ ವಾರ್ಷಿಕ ₹6 ಸಾವಿರ ನೀಡುವ ಕೃಷಿ ಸಮ್ಮಾನ್ ಜಾರಿಗೊಳಿಸಲಾಗಿದೆ. ರೈತರಿಗೆ ಪಿಂಚಣಿ ಸಹ ಘೋಷಣೆ ಮಾಡಲಾಗಿದೆ ಎಂದರು.

ಊರಿಗೆ ಆಗಮಿಸಿದ ಯಡಿಯೂರಪ್ಪ ಅವರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಗ್ರಾಮದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಭೇಟಿ ನೀಡಿದ ಅವರು ವಧು– ವರರನ್ನು ಆಶೀರ್ವದಿಸಿದರು. ಅಭ್ಯರ್ಥಿ ಚಿಕ್ಕನಗೌಡ, ಶಾಸಕ ಗೋವಿಂದ ಕಾರಜೋಳ. ಮುಖಂಡರಾದ ಸಿ.ಸಿ. ಪಾಟೀಲ ಇದ್ದರು.

Post Comments (+)