ನನಗೆ ಬಂಧನದ ಭೀತಿ ಇಲ್ಲ: ಡಿ.ಕೆ. ಶಿವಕುಮಾರ್‌

7

ನನಗೆ ಬಂಧನದ ಭೀತಿ ಇಲ್ಲ: ಡಿ.ಕೆ. ಶಿವಕುಮಾರ್‌

Published:
Updated:

ನವದೆಹಲಿ: ‘ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಗಳು ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿಲ್ಲ. ನನಗೆ ಬಂಧನದ ಭೀತಿ ಇಲ್ಲ’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಕಾನೂನಿನ ಚೌಕಟ್ಟಿನಲ್ಲೇ ಎಲ್ಲ ವ್ಯವಹಾರ ಮಾಡಿದ್ದರಿಂದ ನನಗೆ ಭಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಳೆದ ಒಂದು ತಿಂಗಳಿಂದ ನನ್ನ ಬಂಧನವಾಗಲಿದೆ. ನನಗೆ ಆತಂಕ ಎದುರಾಗಿದೆ. ನಾನು ಕಾಣೆಯಾಗಿದ್ದೇನೆ ಎಂಬ ಸುದ್ದಿಗಳು ಮಾಧ್ಯಮದಲ್ಲಿ ಪ್ರಸಾರವಾಗುತ್ತಿವೆ. ಭಾನುವಾರ ನವದೆಹಲಿಗೆ ಬಂದಿದ್ದು, ಯಾವುದೇ ವಕೀಲರನ್ನು ಭೇಟಿ ಮಾಡಿಲ್ಲ’ ಎಂದು ಅವರು ಹೇಳಿದರು.

‘ಲೇವಾದೇವಿ ವ್ಯವಹಾರ ದಲ್ಲಿ ಯಾರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂಬುದು ನನಗೆ ಗೊತ್ತು. ನಾನಂತೂ ಲೇವಾದೇವಿ ವ್ಯವಹಾರ ಮಾಡಿಲ್ಲ. ಆದರೂ ಮಾಧ್ಯಮಗಳು ಗೊಂದಲ ಸೃಷ್ಟಿಸಿವೆ. ಬಿಜೆಪಿಯಲ್ಲಿ ನನಗೂ ಸಾಕಷ್ಟು ಸ್ನೇಹಿತರಿದ್ದಾರೆ. ಆ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಕುರಿತು ನನಗೆ ಮಾಹಿತಿ ದೊರೆಯುತ್ತದೆ’ ಶಿವಕುಮಾರ್‌ ವಿವರಿಸಿದರು.

‘ನಾನು ನಿಸ್ಸಂದೇಹವಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಸ್ನೇಹಿತ. ಅವರು ಜಾರಿ ನಿರ್ದೇಶನಾಲಯಕ್ಕೆ, ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ ಎಂಬ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದೇಕೆ ಎಂದು ಸೋದರ ಡಿ.ಕೆ. ಸುರೇಶ ಅವರನ್ನು ಕೇಳಿದ್ದೇನೆ’ ಎಂದು ಅವರು ತಿಳಿಸಿದರು.

‘ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರು ಕಾನೂನುಬದ್ಧವಾಗಿಯೇ ಕೆಲಸ ಮಾಡಿದ್ದರು. ಆದರೂ ನಮ್ಮಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ನಂತರ ಆರೋಪದಿಂದ ಮುಕ್ತವಾದೆವು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !