ಗುರುವಾರ , ನವೆಂಬರ್ 21, 2019
20 °C

ಬಿಜೆಪಿಗೆ ಇನ್ನೂ ರಾಜೀನಾಮೆ ನೀಡಿಲ್ಲ: ಕಾಗೆ

Published:
Updated:
Prajavani

ಮೋಳೆ: ‘ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ’ ಎಂದು ಮುಖಂಡ ಭರಮಗೌಡ (ರಾಜು) ಕಾಗೆ ತಿಳಿಸಿದರು.

‘ರಾಜೀನಾಮೆ ಕೊಟ್ಟಿದ್ದೇನೆ ಎನ್ನುವ ವದಂತಿ ಹರಡಿದೆ. ನಾನು ಪಕ್ಷ ತೊರೆದಿದ್ದೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ’ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಅನರ್ಹ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿದೆ. ತೀರ್ಪು ಬಂದ ನಂತರ ನನ್ನ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ. ರಾಜೀನಾಮೆ ನೀಡಿದ್ದೇನೆ ಎಂಬ ವದಂತಿ ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಏಕೆ ಹರಡುತ್ತಿದೆಯೋ ಗೊತ್ತಿಲ್ಲ’ ಎಂದರು.

‘20 ವರ್ಷಗಳಿಂದ ಸಾವಿರಾರು ಕಾರ್ಯಕರ್ತರು ಹಾಗೂ ನಾನು ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಸಂಘಟಿಸಿದ್ದೇನೆ. 4 ಬಾರಿ ಶಾಸಕನಾಗಿ ಆಯ್ಕೆಯಾಗಿ ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿ ಇದೆ. ಈಗ ಬದಲಾದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಮಾಡಬೇಕಾಗುತ್ತದೆ. ನನ್ನನ್ನೇ ನಂಬಿದ 60ಸಾವಿರ ಕಾರ್ಯಕರ್ತರಿದ್ದಾರೆ. ಹಿಂದಿನಿಂದಲೂ ವಿರೋಧ ಪಕ್ಷದ ಅಭ್ಯರ್ಥಿ ವಿರುದ್ಧ ಸಂಘರ್ಷ ಮಾಡುತ್ತಾ ಬಂದಿದ್ದೇವೆ, ಈಗ ಒಮ್ಮೆಲೇ ಅನರ್ಹ ಶಾಸಕರು ಪಕ್ಷಕ್ಕೆ ಬಂದರೆ ಅವರೊಂದಿಗೆ ನಮಗೆ ಹೊಂದಾಣಿಕೆ ಆಗುವುದಿಲ್ಲ ಎಂದು ನಮ್ಮ ಕಾರ್ಯಕರ್ತರು ಹೇಳುತ್ತಿದ್ದಾರೆ’ ಎಂದರು.

‘ಬಿಜೆಪಿ ಟಿಕೆಟ್‌ ಸಿಗದಿದ್ದರೆ ನೀವು ಮಾಡುವ ನಿರ್ಧಾರಕ್ಕೆ ಬದ್ಧ ಎಂದು ಕಾರ್ಯಕರ್ತರು ಹೇಳಿದ್ದಾರೆ. ಹೀಗಾಗಿ, ಪಕ್ಷ ತೊರೆಯುವ ಆಲೋಚನೆ ಮಾಡಿದ್ದೇನೆಯೇ ಹೊರತು ಇನ್ನೂ ಬಿಟ್ಟಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)