ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಿಂದ ಹಣ ಪಡೆದಿರುವ ಕಾಂಗ್ರೆಸ್‌ ಮುಖಂಡರು: ಎಂ.ಟಿ.ಬಿ.ನಾಗರಾಜ್ ಆರೋಪ

Last Updated 20 ನವೆಂಬರ್ 2019, 18:41 IST
ಅಕ್ಷರ ಗಾತ್ರ

ಹೊಸಕೋಟೆ: ‘ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ, ಕೆ.ಎಚ್.ಮುನಿಯಪ್ಪ, ಮಾಲೂರು ಶಾಸಕ ನಂಜೇಗೌಡ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರುನನ್ನಿಂದ ಹಣ ಪಡೆದಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ಆರೋಪಿಸಿದರು.

ತಾಲ್ಲೂಕಿನ ವಿವಿಧೆಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಲೋಕಸಭೆ ಚುನಾವಣೆ ಸಮಯದಲ್ಲಿ ಶಾಸಕ ಕೃಷ್ಣ ಬೈರೇಗೌಡ ನನ್ನಿಂದ ಹಣ ಪಡೆದುಕೊಂಡಿದ್ದರು. ನಂತರ ವಾಪಸ್ ಮಾಡಿದ್ದಾರೆ. ಉಳಿದವರು ಹಣ ವಾಪಸ್ ಮಾಡಿಲ್ಲ’ ಎಂದು ದೂರಿದರು.

‘ನಾನು ಕಾಂಗ್ರೆಸ್ ಬಿಡಲು ಸಿದ್ದರಾಮಯ್ಯ ಕಾರಣ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತನಾಗಿದ್ದು ಸುಳ್ಳು ಹೇಳುವುದಿಲ್ಲ. ನನ್ನ ಬಳಿ ಇರುವ ₹1,200 ಕೋಟಿಗೂ ಅಧಿಕ ಹಣ, ಆಸ್ತಿಯನ್ನು ನ್ಯಾಯವಾಗಿ ಸಂಪಾದಿಸಿದ್ದೇನೆ. ಅದಕ್ಕೆ ಕಾಲಕಾಲಕ್ಕೆ ತೆರಿಗೆ ಪಾವತಿಸುತ್ತೇನೆ’ ಎಂದರು.

‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಬಳಿ ಮಾತನಾಡಿ ಶಾಸಕರ ಸಮಸ್ಯೆ ಪರಿಹರಿಸುವಂತೆ ಸಿದ್ದರಾಮಯ್ಯ ಬಳಿ ಕೇಳಿದ್ದೆ. ನನ್ನ ಮತ್ತುಮಗನ ಕ್ಷೇತ್ರದ ಕೆಲಸವನ್ನೇ ಮಾಡಿಕೊಡುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದರು. ಮೈತ್ರಿ ಮುರಿದುಕೊಂಡು ವಿಪಕ್ಷದಲ್ಲಿ ಕೂರೋಣವೆಂದು ಸಲಹೆ ಕೊಟ್ಟಿದ್ದೆ. ಆಗ ಅವರು ಹೈಕಮಾಂಡ್ ಕಡೆ ಬೆರಳು ತೋರಿದರು. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸತ್ತು ಹೋಗಿದೆ. ಅದು ಲೋಕಮಾಂಡ್ ಆಗಿದೆ’ ಎಂದು ಟೀಕಿಸಿದರು.

ದುಡ್ಡು ಪಡೆದಿಲ್ಲ: ಸಿದ್ದರಾಮಯ್ಯ

ಮೈಸೂರು: ‘ಎಂ.ಟಿ.ಬಿ ಒಬ್ಬ ಯಕಶ್ಚಿತ್ ರಾಜಕಾರಣಿ. ಅವನ ಬಳಿ‌ ನಾನ್ ಯಾಕ್ರೀ ದುಡ್ಡು ತಗೊಳ್ಳಲಿ? ಜನರೇ ನನಗೆ ದುಡ್ಡು ಕೊಟ್ಟು ಗೆಲ್ಸಿದ್ದಾರೆ. ನಾನ್ ಯಾಕ್ರಿ ಆತನ ಬಳಿ ಸಾಲ ತಗೊಳ್ಳಲಿ? ಈ ಬಾರಿಯ ಚುನಾವಣೆಯಲ್ಲಿ ಜನರೇ ಅವನಿಗೆ ಉತ್ತರ ಕೊಡ್ತಾರೆ’ ಎಂದು ಏಕವಚನದಲ್ಲಿ ಕಿಡಿಕಾರಿದರು.

‘ಬಿಜೆಪಿಯವರಿಗೂ ನಾನೇ ಟಾರ್ಗೆಟ್. ಜೆಡಿಎಸ್‌ನವರಿಗೂ ನಾನೇ ಟಾರ್ಗೆಟ್. ಅನರ್ಹರ ಟಾರ್ಗೆಟ್ ಕೂಡ ನಾನೇ. ಇದನ್ನೆಲ್ಲಾ ನೋಡಿದರೆ ಅವರಿಗೆಲ್ಲಾ ನನ್ನನ್ನು ಕಂಡರೆ ಭಯ ಇರಬಹುದೇನೋ’ ಎಂದರು.

ನಾನು ಏಕಾಂಗಿ ಅಲ್ಲ:‘ನಾನು ಕಾಂಗ್ರೆಸ್‌ನಲ್ಲಿ ಏಕಾಂಗಿಯಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಯಾರನ್ನೂ ಏಕಾಂಗಿ ಮಾಡಲ್ಲ. ನಾನು ಏಕಾಂಗಿ ಆಗಬೇಕೆಂದು ಯಡಿಯೂರಪ್ಪ ಬಯಸಿರಬಹುದು. ಆದರೆ, ಅವರ ಆಸೆ ಈಡೇರುವುದಿಲ್ಲ’ ಎಂದು ಕುಟುಕಿದರು.

ಉಪಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್‌ನವರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಕುಮಾರಸ್ವಾಮಿ ಹೇಳಿಕೆ ಕುರಿತು, ‘ಮೈತ್ರಿ ಸರ್ಕಾರದ ಪ‍ತನಕ್ಕೆ ಕಾರಣರಾಗಿರುವ ಅನರ್ಹರನ್ನು ಉಪಚುನಾವಣೆಯಲ್ಲಿ ಸೋಲಿಸುವುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಸಮಾನ ಉದ್ದೇಶ. ದಾರಿ ಮಾತ್ರ ಬೇರೆ’ ಎಂದರು.

ತಮ್ಮನ್ನು ಹೀಯಾಳಿಸಿರುವ ಸಚಿವ ಶ್ರೀರಾಮುಲು ಕುರಿತು, ‘ಶ್ರೀರಾಮುಲು ಬಹಳ ಜನಪ್ರಿಯ ನಾಯಕ. ಅಂಥವರ ವಿರುದ್ಧ ತೊಡೆ ತಟ್ಟಲು ಸಾಧ್ಯವಿಲ್ಲ. ನಾನು ಅವರಷ್ಟು ಜನಪ್ರಿಯ ಅಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT