ಮಂಗಳವಾರ, ನವೆಂಬರ್ 12, 2019
27 °C
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ–ಶಾಸಕ ಡಾ.ಎಚ್‌.ಡಿ.ರಂಗನಾಥ್ ನಡುವೆ ವಾಕ್ಸಮರ

ರಾಜ್ಯದ ಹಣಕಾಸು ಸ್ಥಿತಿ ಹೇಗಿದೆ ಎಂಬುದು ನನಗೊಬ್ಬನಿಗೇ ಗೊತ್ತು: ಬಿಎಸ್‌ವೈ

Published:
Updated:
Prajavani

ತುಮಕೂರು: ಕುಣಿಗಲ್ ತಾಲ್ಲೂಕಿನ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರ ನಡುವಿನ ವಾಕ್ಸಮರಕ್ಕೆ ಸಾಕ್ಷಿ ಆಯಿತು. 

ಮನೆ ದೇವರು ಸಿದ್ಧಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಂದಿದ್ದರು.

ತಮ್ಮ ಭಾಷಣದ ವೇಳೆ ಶಾಸಕ ಡಾ.ಎಚ್.ಡಿ.ರಂಗನಾಥ್, ‘ಹಿಂದಿನ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರವು ನನ್ನ ಕ್ಷೇತ್ರಕ್ಕೆ ₹ 720 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಈಗ ಇವೆಲ್ಲವನ್ನು ತಡೆ ಹಿಡಿದಿದ್ದು ಏಕೆ’ ಎಂದು ಪ್ರಶ್ನಿಸಿದರು. ‘ಇದು ನಿಮ್ಮ ಮನೆ ದೇವರಿರುವ ಕ್ಷೇತ್ರ. ಅಭಿವೃದ್ಧಿಗೆ ಹಣ ನೀಡಿ’ ಎಂದು ಮುಖ್ಯಮಂತ್ರಿ ಅವರಿಗೆ ಆಗ್ರಹಿಸಿದರು.

ಆಗ ಸಿಡಿಮಿಡಿಗೊಂಡ ಯಡಿಯೂರಪ್ಪ ಏರುಧ್ವನಿಯಲ್ಲಿ, ‘ಆಯ್ತು ಸಾಕು ಬಿಡ್ರಿ’ ಎಂದು ಭಾಷಣ ಮುಗಿಸುವಂತೆ ಸೂಚಿಸಿದರು.

‘ನಾನು ಮುಖ್ಯಮಂತ್ರಿಯಾಗಿ ಎರಡು ತಿಂಗಳಾಗಿದೆ. ರಾಜ್ಯದ ಹಣಕಾಸು ಸ್ಥಿತಿ ಹೇಗಿದೆ ಎಂಬುದು ನನಗೊಬ್ಬನಿಗೆ ಮಾತ್ರ ಗೊತ್ತು. ಭವಿಷ್ಯದಲ್ಲಿ ಹಣಕಾಸಿನ ಲಭ್ಯತೆ ಆಧರಿಸಿ ಅಭಿವೃದ್ಧಿ ಕಾಮಗಾರಿಗೆ ಹಣ ಒದಗಿಸಲಾಗುವುದು’ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಹಿಂದಿನ ಸಮ್ಮಿಶ್ರ ಸರ್ಕಾರ ರಾಜ್ಯದ ಹಣಕಾಸಿನ ಇತಿಮಿತಿ ಗಮನಿಸದೆ ಹಲವು ಯೋಜನೆಗಳಿಗೆ ಅನುಮೋದನೆ ನೀಡಿದೆ. ಐದಾರು ವರ್ಷ ಆದಾಯ ಸಂಗ್ರಹಿಸಿ ನೀಡಿದರೂ ಆ ಯೋಜನೆಗಳು ಪೂರ್ಣವಾಗುವುದು ಕಷ್ಟವಿದೆ. ಅಭಿವೃದ್ಧಿ, ನೀರಾವರಿ ಯೋಜನೆಗಳಿಗೆ ನಾನು ವಿರೋಧಿಯಲ್ಲ. ಮುಂದೆ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಅನುದಾನ ನೀಡುವೆ’ ಎಂದು ಹೇಳಿದರು.

‘ನೆರೆ ಹಾನಿ ಪ್ರದೇಶಗಳಲ್ಲಿ ಪರಿಹಾರ ಕೈಗೊಳ್ಳಲು ಹೆಚ್ಚಿನ ಹಣ ಒದಗಿಸಲಾಗುತ್ತಿದೆ. ಬೇರೆ ಅಭಿವೃದ್ಧಿ ಕಾರ್ಯಕ್ಕೆ ನಿಗದಿಪಡಿಸಿದ ಹಣವನ್ನೂ ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದರು.

ಯಡಿಯೂರಪ್ಪ ಅವರ ಕುಟುಂಬವು ₹ 4 ಕೋಟಿ ಸ್ವಂತ ಹಣದಿಂದ ನಿರ್ಮಿಸಲಿರುವ ಮೈತ್ರಾದೇವಿ ಬಿ.ಎಸ್.ಯಡಿಯೂರಪ್ಪ ಸಮುದಾಯಭವನಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಸರ್ಕಾರದ ಅನುದಾನದಲ್ಲಿ ₹ 10 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ₹ 5 ಕೋಟಿ ಮೊತ್ತದ ಸಭಾಭವನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಪ್ರತಿಕ್ರಿಯಿಸಿ (+)