ಭಾನುವಾರ, ಏಪ್ರಿಲ್ 18, 2021
32 °C

ಪರಿಶೀಲನೆ ನಂತರವೇ ರಾಜೀನಾಮೆ ಅಂಗೀಕಾರ: ಸ್ಪೀಕರ್‌ ಅಚಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತೃಪ್ತ ಶಾಸಕರು ಸಲ್ಲಿಸಿರುವ ರಾಜೀನಾಮೆಗಳನ್ನು ನಾನು ಪರಿಶೀಲನೆ ನಡೆಸಲೇಬೇಕಿದೆ. ಅದರ ನೈಜತೆ ಖಾತ್ರಿಯಾದ ನಂತರವೇ ರಾಜೀನಾಮೆ ಇತ್ಯರ್ಥಪಡಿಸುತ್ತೇನೆ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸ್ಪಷ್ಟಪಡಿಸಿದ್ದಾರೆ. 

ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಅತೃಪ್ತ ಶಾಸಕರು ತಮ್ಮನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್‌ ರಮೇಶ್‌ಕುಮಾರ್‌,  ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ವಿಳಂಬ ಮಾಡುತ್ತಿದ್ದೇನೆ ಎಂಬ ಸಂಗತಿ ಕೇಳಿ ನನಗೆ ಅತೀವ ಬೇಸರವಾಗಿದೆ ಎಂದು ಹೇಳಿದರು. ಆದರೆ, ರಾಜೀನಾಮೆ ಅಂಗೀಕಾರದ ವಿಚಾರದಲ್ಲಿ ನಾನು ಕಾನೂನಿನ ಪರಿಮಿತಿಗಳನ್ನು ಮೀರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು. 

ರಾಜೀನಾಮೆ ಹೀಗೇ ಇರಬೇಕು ಎಂದು ಉಲ್ಲೇಖಗಳಿವೆ. ಅದರಂತೆ, ಕೆಲವು ಶಾಸಕರ ರಾಜೀನಾಮೆ ಕ್ರಮ ಬದ್ಧವಾಗಿರಲಿಲ್ಲ. ಇದನ್ನು ತಿಳಿಸಿದ್ದಕ್ಕೆ ನಾನು ವಿಳಂಬ ಮಾಡುತ್ತಿದ್ದೇನೆ ಎಂದು ಹೇಳಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ಕಾನೂನಿನ ಪರಿಮಿತಿಯನ್ನು ಮೀರಲಾರೆ. ಎಲ್ಲರ ವಾದವನ್ನೂ ಆಲಿಸಿದ್ದೇನೆ. ಅದನ್ನು ವಿಡಿಯೋ ಚಿತ್ರಿಕರಣ ಮಾಡಿದ್ದೇನೆ. ಎಲ್ಲವನ್ನೂ ನಾಳೆ ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು. 

ನನ್ನನ್ನು ಭೇಟಿಯಾಗಲು ನನ್ನದೇ ಶಾಸಕರು ಸುಪ್ರೀಂ ಕೋರ್ಟ್‌ಗೆ ಹೋದರು. ಭೇಟಿಗೆ ಅವಕಾಶ ಕೇಳಿದ್ದರೆ ನಾನು ಇಲ್ಲ ಎನ್ನುತ್ತಿರಲಿಲ್ಲ. ಸುಪ್ರೀಂ ಕೋರ್ಟ್‌ ಕೂಡ ಈ ಸಂಗತಿಯನ್ನು ಗಮನಸಿಬಹುದಿತ್ತು. ಅವರ ಪಾಡಿಗೆ ಅವರು ಹೋಗಿ ಮುಂಬೈ ಅಲ್ಲಿ ಕೂತು, ನಾನು ವಿಳಂಬ ಮಾಡುತ್ತಿದ್ದೇನೆ ಎಂದರೆ, ಜನ ಗಮನಿಸಲಾರರೇ?  ಎಂದು ಅವರು ಪ್ರಶ್ನೆ ಮಾಡಿದರು.  

‘ಇಲ್ಲಿರುವ ಕೆಲವರು ನಮ್ಮನ್ನು ಬೆದರಿಸುತ್ತಿದ್ದಾರೆ,’ ಎಂದು ಕೆಲ ಶಾಸಕರು ನನಗೆ ತಿಳಿಸಿದ್ದಾರೆ. ಹಾಗೇನಾದರೂ ಇದ್ದಿದ್ದರೆ ಅವರು ನನಗೆ ತಿಳಿಸಬಹುದಿತ್ತು. ಅವರಿಗೆ ನಾನೇ ರಕ್ಷಣೆ ಕೊಡಿಸುತ್ತಿದೆ. ಇದನ್ನೇ ಅವರಿಗೂ ಹೇಳಿದ್ದೇನೆ. ಅವರು ರಾಜೀನಾಮೆ ಕೊಟ್ಟು ಮೂರು ಮಂಗಳವಾರಕ್ಕೆ ಮೂರು ದಿನವಾಗಿತ್ತಷ್ಟೇ. ಅಷ್ಟಕ್ಕೇ ಭೂಕಂಪನವಾದಂತೆ ವರ್ತಿಸುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ವರ್ಷಗಳಗಟ್ಟಲೆ ರಾಜೀನಾಮೆ ಅಂಗೀಕರಿಸದೇ ಉಳಿಸಿಕೊಂಡ ಉದಾಹರಣೆಗಳು ಈ ದೇಶದಲ್ಲಿವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು