ರಮೇಶ‌ ಜಾರಕಿಹೊಳಿ ಬಹಿರಂಗ ಹೇಳಿಕೆ‌ಗಳನ್ನು ಗಂಭೀರವಾಗಿ ಪರಿಗಣಿಸುವೆ: ಗುಂಡೂರಾವ್

7
ಅಶಿಸ್ತು ಸಹಿಸುವುದಿಲ್ಲ ಎಂದ ಕೆಪಿಸಿಸಿ ಅಧ್ಯಕ್ಷ

ರಮೇಶ‌ ಜಾರಕಿಹೊಳಿ ಬಹಿರಂಗ ಹೇಳಿಕೆ‌ಗಳನ್ನು ಗಂಭೀರವಾಗಿ ಪರಿಗಣಿಸುವೆ: ಗುಂಡೂರಾವ್

Published:
Updated:

ನವದೆಹಲಿ: ಸಚಿವರೇ ಇರಲಿ, ಶಾಸಕರೇ ‌ಇರಲಿ ಪಕ್ಷವು ಅಶಿಸ್ತನ್ನು ಸಹಿಸುವುದಿಲ್ಲ. ಸಚಿವ ರಮೇಶ‌ ಜಾರಕಿಹೊಳಿ ಅವರು ಬಹಿರಂಗ ಹೇಳಿಕೆ‌ ನೀಡುವುದನ್ನು ನಾನು‌ ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ತಿಳಿಸಿದರು.

ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್ ನೇತೃತ್ವದಲ್ಲಿ ಗುರುವಾರ‌ ಇಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೂ ಪಕ್ಷಕ್ಕೂ ಸಂಬಂಧ ಇಲ್ಲ. ವೈಯಕ್ತಿಕ‌ ಹಾಗೂ ಸ್ಥಳೀಯ ವಿಷಯಗಳಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ಹೊರ ಹಾಕುವುದಲ್ಲದೆ, ಪಕ್ಷದ‌ ಶಿಸ್ತನ್ನು ಮೀರುವ ಬೆಳವಣಿಗೆಯನ್ನು ಸಹಿಸಲಾಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಶಾಸಕಿ ಲಕ್ಷ್ಮೀ‌ ಹೆಬ್ಬಾಳಕರ್, ಸಚಿವರಾದ ರಮೇಶ ಜಾರಕಿಹೊಳಿ, ಡಿ.ಕೆ.‌ ಶಿವಕುಮಾರ್ ಅವರ‌ ಜೊತೆ ಶುಕ್ರವಾರ ಮಾತುಕತೆ‌ ನಡೆಸಿ ವಿವಾದ ಬಗೆಹರಿಸಲು‌ ಯತ್ನಿಸುತ್ತೇನೆ ಎಂದು ಅವರು ತಿಳಿಸಿದರು.

ಇದೇ 10ರಂದು ಭಾರತ್ ಬಂದ್

ಪೆಟ್ರೋಲ್, ಡೀಸೆಲ್‌ ದರ ಏರಿಕೆ, ರೂಪಾಯಿ ಅಪಮೌಲ್ಯ ವಿರೋಧಿಸಿ ಕಾಂಗ್ರೆಸ್ ಪಕ್ಷವು ಇದೇ 10ರಂದು ಭಾರತ್ ಬಂದ್‌ಗೆ ಕರೆ‌ ನೀಡಿದೆ. ಕರ್ನಾಟಕದಲ್ಲೂ ಪಕ್ಷದ‌ ವತಿಯಿಂದ ಬಂದ್ ಬೆಂಬಲಿಸಿ ಪ್ರತಿಭಟನೆ‌ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ದರ‌ ಏರಿಕೆಯಿಂದ ದೇಶದಾದ್ಯಂತ ಬಡ ಜನತೆ ತೀವ್ರ ಸಮಸ್ಯೆ ಎದುರಿಸುತ್ತಿದ್ದರೂ‌ ಪ್ರಧಾನಿ‌ ನರೇಂದ್ರ ಮೋದಿ ಅವರು ಹೃದಯವೇ ಇಲ್ಲದಂತೆ, ಕರುಣೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಅವರು ಬಾಯಿ ಬಿಚ್ಚುತ್ತಿಲ್ಲ. ಈ ಬೆಳವಣಿಗೆ ತೀರ ಸಹಜ‌‌ ಎಂದು ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆ‌ ನೀಡುತ್ತಿದ್ದಾರೆ‌. ಪ್ರಧಾನಿ ಉತ್ತರ ನೀಡುವಂತೆ ಕೋರಿ ದೇಶದಾದ್ಯಂತ ಉಗ್ರ ಹೋರಾಟ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಲೋಕಸಭೆ ಚುನಾವಣೆ ಕಾರ್ಯತಂತ್ರದ ಕುರಿತೂ ಅಹ್ಮದ್ ಪಟೇಲ್ ನಡೆಸಿದ‌ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ದಿನೇಶ ಗುಂಡೂರಾವ್ ಹೇಳಿದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !