ಐ.ಟಿ ಕಚೇರಿಯಲ್ಲಿ ಯಶ್‌ ವಿಚಾರಣೆ

7

ಐ.ಟಿ ಕಚೇರಿಯಲ್ಲಿ ಯಶ್‌ ವಿಚಾರಣೆ

Published:
Updated:
Prajavani

ಬೆಂಗಳೂರು: ಕಳೆದ ವಾರ ಆದಾಯ ತೆರಿಗೆ ಇಲಾಖೆ ದಾಳಿಗೆ ಗುರಿಯಾಗಿದ್ದ ನಟ ಯಶ್‌ ಹಾಗೂ ಅವರ ತಾಯಿ ಎಚ್‌. ಪುಷ್ಪಾ ಅವರನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಲಾಗಿತ್ತು.

ಬೆಳಿಗ್ಗೆ 11.30ರ ಸುಮಾರಿಗೆ ಕನಿಂಗ್‌ಹ್ಯಾಂ ರಸ್ತೆಯಲ್ಲಿರುವ ಐ.ಟಿ ಕಚೇರಿಗೆ ತಾಯಿ ಜೊತೆ ಬಂದಿದ್ದ ಯಶ್‌ ಅವರನ್ನು ಮಧ್ಯಾಹ್ನ 2 ಗಂಟೆವರೆಗೂ ವಿಚಾರಣೆ ನಡೆಸಲಾಯಿತು. ಇನ್ನೊಂದೆಡೆ, ನಿರ್ಮಾಪಕ ಜಯಣ್ಣ ಅವರ ವಿಚಾರಣೆಯೂ ನಡೆಯಿತು.

ಆನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಯಶ್‌, ‘ಇಂದೇ ವಿಚಾರಣೆಗೆ ಹಾಜರಾಗುವಂತೆ ಐ.ಟಿ ಅಧಿಕಾರಿಗಳು ನನಗೆ ಹೇಳಿದ್ದರು. ಹೀಗಾಗಿ ಬಂದಿದ್ದೇನೆ. ವಿಚಾರಣೆಗೆ ಹಾಜರಾಗಲು ಸಮಯಾವಕಾಶ ನೀಡುವಂತೆ ನಾನು ಕೇಳಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಿವಿಧ ಬ್ಯಾಂಕುಗಳಿಂದ ನಾನು ₹ 16 ಕೋಟಿ ಸಾಲ ಪಡೆದಿದ್ದೇನೆ. ಆದಾಯ ತೆರಿಗೆ ಸರಿಯಾಗಿ ಪಾವತಿಸಿದ್ದೇನೆ. ಎಲ್ಲ ಲೆಕ್ಕ ಇಟ್ಟಿದ್ದೇನೆ. ಹೀಗಾಗಿಯೇ ಬ್ಯಾಂಕ್‌ನವರು ನನಗೆ ಸಾಲ ನೀಡಿದ್ದಾರೆ’ ಎಂದು ಅವರು ವಿವರಿಸಿದರು.

‘ಇದು ಒಂದೆರಡು ದಿನಗಳಲ್ಲಿ ಮುಗಿಯುವ ವಿಚಾರಣೆ ಅಲ್ಲ. ಸುಮಾರು ಎರಡು ವರ್ಷ ನಡೆಯಬಹುದು. ವಿಚಾರಣೆಗೆ ಯಾವಾಗ ಕರೆದರೂ ಬರುತ್ತೇನೆ. ಐ.ಟಿ ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ’ ಎಂದೂ ಅವರು ತಿಳಿಸಿದರು.

ನಟರಾದ ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್ ಅವರನ್ನು ಈ ವಾರದ ಆರಂಭದಲ್ಲಿ ಐ.ಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಬರುವ ವಾರ ನಟ ಸುದೀಪ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಸಿ.ಆರ್. ಮನೋಹರ್ ಹಾಗೂ ವಿಜಯ್‌ ಕಿರಗಂದೂರು ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಇಲಾಖೆಯ ಸುಮಾರು 180 ಅಧಿಕಾರಿಗಳ ತಂಡ ಕಳೆದ ವಾರ ನಾಲ್ವರು ಸ್ಟಾರ್‌ ನಟರು ಹಾಗೂ ನಾಲ್ವರು ಅಧಿಕ ಬಜೆಟ್‌ ಸಿನಿಮಾ ನಿರ್ಮಾಪಕರ ಮನೆಗಳ ಮೇಲೆ ದಾಳಿ ಮಾಡಿ ₹ 109 ಕೋಟಿ ಮೌಲ್ಯದ ಅಘೋಷಿತ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದರು. 25 ಕೆ.ಜಿ ಚಿನ್ನ ಹಾಗೂ ₹ 2.8 ಕೋಟಿ ನಗದನ್ನೂ ವಶಪಡಿಸಿಕೊಂಡಿದ್ದರು.

ಶೇಷಾದ್ರಿಪುರದಲ್ಲಿರುವ ಯಶ್‌ ಅವರ ಆಡಿಟರ್‌ ಮನೆಯ ಮೇಲೆ ಐ.ಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ಶೋಧನೆ ನಡೆಸಿದ್ದಾರೆ. ದಾಳಿ ಸಮಯದಲ್ಲಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. 

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !