ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ವೇಳೆ ಸುಳ್ಳು ಮಾಹಿತಿ: ಡಿಕೆಶಿಯ ತನಿಖೆ ನಡೆಸುವಂತೆ ಆಯೋಗಕ್ಕೆ ಪತ್ರ

ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವ ಆರೋಪ
Last Updated 22 ಫೆಬ್ರುವರಿ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಯು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವೃತ್ತದ ಪ್ರಧಾನ ನಿರ್ದೇಶಕ (ತನಿಖೆ) ಪರವಾಗಿ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಶಿವಕುಮಾರ್‌ ಮತ್ತು ಅವರ ಕುಟುಂಬದ ಸದಸ್ಯರು ಹೊಂದಿರುವ ಆಸ್ತಿಪಾಸ್ತಿ ಕುರಿತಂತೆ ಸರಿಯಾದ ಮಾಹಿತಿ ಕೊಟ್ಟಿಲ್ಲ ಎಂದು ಆರೋಪಿಸಲಾಗಿದೆ.

2008ರ ಚುನಾವಣೆ ಸಮಯದಲ್ಲಿ ಶಿವಕುಮಾರ್‌ ₹ 75 ಕೋಟಿ ಮೊತ್ತದ ಆಸ್ತಿ ಹೊಂದಿದ್ದರು. 2018ರಲ್ಲಿ ಈ ಮೌಲ್ಯ ₹ 840 ಕೋಟಿ ಆಗಿದೆ. ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಇಷ್ಟೊಂದು ಆಸ್ತಿ ಸಂಪಾದಿಸಲು ಸಾಧ್ಯವೇ ಇಲ್ಲ. ಶಿವಕುಮಾರ್‌ ತಾಯಿ ಗೌರಮ್ಮನವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ. ವಿಜಯಾ ಬ್ಯಾಂಕ್‌ ಪ್ಯಾಲೇಸ್‌ ಆರ್ಚರ್ಡ್ಸ ಶಾಖೆಯಲ್ಲಿ ಭಾರಿ ಪ್ರಮಾಣದ ನಗದು ಮತ್ತು ನಗದೇತರ ವ್ಯವಹಾರಗಳು ನಡೆದಿವೆ. ಈ ಖಾತೆಯನ್ನು ಶಿವಕುಮಾರ್‌ ಅವರೇ ನಿರ್ವಹಿಸಿದ್ದಾರೆ. ಇದಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ.

ಗೌರಮ್ಮ ಅವರ ಹೆಸರಿನಲ್ಲಿ ಭಾರಿ ಬೆಲೆಬಾಳುವ ಆಸ್ತಿ ಖರೀದಿಸಲಾಗಿದೆ. ಈ ಆಸ್ತಿ ಖರೀದಿಗೆ ಶಿವಕುಮಾರ್‌ ಅವರೇ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದಾರೆ. ಆನಂತರ ಈ ಆಸ್ತಿಗಳನ್ನು ಸಚಿವರು ತಮ್ಮ ಹೆಸರಿಗೆ, ಪತ್ನಿ ಉಷಾ ಮತ್ತು ಪುತ್ರಿ ಐಶ್ವರ್ಯಾ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಶಿವಕುಮಾರ್‌ ₹ 22 ಕೋಟಿಯನ್ನು ತಮ್ಮ ತಾಯಿಗೆ ಸಾಲವಾಗಿ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಇಲ್ಲಿನ ಸದಾಶಿವನಗರದಲ್ಲಿರುವ ತಮ್ಮ ಮನೆಯ ನಿರ್ಮಾಣಕ್ಕೆ ₹ 8.5 ಕೋಟಿ ಸಾಲ ಪಡೆದಿರುವುದಾಗಿ ಶಿವಕುಮಾರ್‌ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ₹ 15 ಕೋಟಿ ವೆಚ್ಚವಾಗಿದೆ. ಶೋಭಾ ಲಿ. ಕಂಪನಿಯಿಂದ ವಶಪಡಿಸಿಕೊಂಡ ದಾಖಲೆಗಳಲ್ಲಿ ಈ ಮನೆಗೆ ₹ 10 ಕೋಟಿ ನೀಡಿರುವುದಾಗಿ ಮಾಹಿತಿ ಇದೆ. ಉಳಿದ ₹ 5 ಕೋಟಿ ಎಲ್ಲಿಂದ ಬಂತು ಎಂಬ ಬಗ್ಗೆ ವಿವರಗಳಿಲ್ಲ ಎಂದು ‍ಪತ್ರದಲ್ಲಿ ವಿವರಿಸಲಾಗಿದೆ. ಶಿವಕುಮಾರ್‌ಗೆ ಶೋಭಾ ಲಿ. ಅಕ್ರಮ ಲಾಭ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಾಣುವಂತಿದೆ. ಸಚಿವರು ಈ ಹಣದಲ್ಲಿ ಇದುವರೆಗೆ ಕೇವಲ ₹ 1.85 ಕೋಟಿ ಮಾತ್ರ ಮರುಪಾವತಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೆ ಪ್ರತಿಯಾಗಿ ಗೌರಮ್ಮ ಹಾಗೂ ಸಚಿವರ ಸೋದರ ಡಿ.ಕೆ. ಸುರೇಶ್‌ ಜೊತೆ ಶೋಭಾ ಲಿ. ಜಂಟಿಯಾಗಿ ಜಮೀನು ಅಭಿವೃದ್ಧಿಪಡಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು ಕಂಪನಿಯಿಂದ ₹ 11 ಕೋಟಿ ರೀಫಂಡಬಲ್‌ ಡಿಪಾಸಿಟ್‌ ಪಡೆದಿದ್ದಾರೆ. ಜಮೀನಿನ ಮೌಲ್ಯ ಎಕರೆಗೆ ₹ 1.5 ಕೋಟಿ ಆಗಿದ್ದು, ಒಟ್ಟು ಮೌಲ್ಯ ₹ 6 ಕೋಟಿ ಆಗಲಿದೆ. ಆದರೆ, ₹ 5ಕೋಟಿಯನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ ಎಂದೂ ಪತ್ರದಲ್ಲಿ ವಿವರಿಸಲಾಗಿದೆ. ಒಪ್ಪಂದ ಏರ್ಪಟ್ಟ ದಿನಾಂಕ ಹಾಗೂ ಹಣಕಾಸು ವಹಿವಾಟು ನಡೆಸಿದ ವಿವರಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಗೌರಮ್ಮ ಅವರಿಗೆ ನೀಡಿರುವ ಹೆಚ್ಚುವರಿ ಹಣ ಕುರಿತು ಸುರೇಶ್‌ ಸರಿಯಾದ ಮಾಹಿತಿ ನೀಡಿಲ್ಲ. ಅಲ್ಲದೆ, ಶೋಭಾ ಲಿ. ಕಂಪನಿಯು ಸಚಿವರು ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿಗೆ ಭಾರಿ ಹಣ ವರ್ಗಾವಣೆ ಮಾಡಿದೆ. ಅದನ್ನು ಶಿವಕುಮಾರ್‌ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಲಾಗಿದೆ.

ಈ ರೀತಿಯ ಲೆಕ್ಕಕ್ಕೆ ಸಿಗದ ಹಣಕಾಸು ವಹಿವಾಟುಗಳನ್ನು ಸಚಿವರು ಮತ್ತು ಅವರ ಕುಟುಂಬದ ಸದಸ್ಯರು ನಡೆಸಿದ್ದಾರೆ. 2008–09ನೇ ಸಾಲಿನಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ₹ 75.50 ಕೋಟಿ ಆಸ್ತಿ ಹೊಂದಿರುವುದಾಗಿ ಶಿವಕುಮಾರ್‌ ಘೋಷಿಸಿದ್ದಾರೆ. 2013–14ರಲ್ಲಿ ಇದು ₹ 251 ಕೋಟಿಗೆ ಏರಿಕೆಯಾಗಿದೆ. ಈಗ ಅವರ ಆಸ್ತಿ ಒಟ್ಟು ಮೌಲ್ಯ ₹ 840 ಕೋಟಿ ಎಂದು ಹೇಳಿದ್ದಾರೆ ಎಂದು ಐ.ಟಿ ಇಲಾಖೆ ಪತ್ರದಲ್ಲಿ ಸ್ಪಷ್ಟಪಡಿಸಿದೆ.

ಇ.ಡಿ. ಆಕ್ಷೇಪಣೆ ಸಲ್ಲಿಕೆ
ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರ ವಿರುದ್ಧದ ಆದಾಯ ತೆರಿಗೆ ಇಲಾಖೆ (ಐ.ಟಿ) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ.

‘ವಿಚಾರಣೆಗೆ ಹಾಜರಾಗಬೇಕು’ ಎಂದು ಇ.ಡಿ ನೀಡಿರುವ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಇ.ಡಿ ಪರ ವಕೀಲರು ನ್ಯಾಯಪೀಠಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು.

’ಹಣ ಲೇವಾದೇವಿ ಪ್ರಕರಣಗಳು ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿವೆ. ಈ ಪ್ರಕರಣದಲ್ಲಿ ಇನ್ನೂ ಸಮಗ್ರ ತನಿಖೆ ನಡೆದೇ‌ ಇಲ್ಲ. ಆಗಲೇ ಅರ್ಜಿದಾರರು ಸಮನ್ಸ್ ರದ್ದುಗೊಳಿಸಲು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವುದು ಸಮರ್ಥನೀಯವಲ್ಲ. ಅರ್ಜಿದಾರರ ಮನವಿಗೆ ಕಾನೂನು ಆಧಾರಿತ ಯೋಗ್ಯತೆ ಇಲ್ಲ. ಆದ್ದರಿಂದ ಅರ್ಜಿ ರದ್ದುಗೊಳಿಸಬೇಕು’ ಎಂದು ಆಕ್ಷೇಪಣೆಯಲ್ಲಿ ಕೋರಲಾಗಿದೆ.

ಪ್ರಕರಣವನ್ನು ಅಂತಿಮ ವಿಚಾರಣೆಗಾಗಿ ಮಾರ್ಚ್ 7ಕ್ಕೆ ಮುಂದೂಡಲಾಗಿದೆ.

ಏತನ್ಮಧ್ಯೆ, ‘ಈ ಹಿಂದೆ ನ್ಯಾಯಪೀಠ ತಿಳಿಸಿದಂತೆ ಅರ್ಜಿದಾರರು ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದರೆ ಅದನ್ನು ಪರಿಗಣಿಸಬೇಕು’ ಎಂದು ನ್ಯಾಯಪೀಠ ಪುನರುಚ್ಚರಿಸಿದೆ.

ಡಿ.ಕೆ. ಶಿವಕುಮಾರ್ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಇ.ಡಿ. ಮತ್ತು ಐ.ಟಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT