ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿನ ಸ್ಟೆಪ್ನಿಯಲ್ಲಿ ₹2.30 ಕೋಟಿ; ವಿವಿಧೆಡೆ ಐ.ಟಿ ದಾಳಿ ₹ 4.5 ಕೋಟಿ ವಶ

ಬಾಗಲಕೋಟೆಯಲ್ಲಿ ₹1 ಕೋಟಿ ಪತ್ತೆ
Last Updated 20 ಏಪ್ರಿಲ್ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಮತದಾನಕ್ಕೆ ಮೂರು ದಿನ ಉಳಿದಿರುವ ಹೊತ್ತಿನಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ‘ಭರ್ಜರಿ ಶಿಕಾರಿ’ ಮಾಡಿದ್ದು, ಕಾರಿನಲ್ಲಿ ಸಾಗಿಸುತ್ತಿದ್ದ ₹ 2.3 ಕೋಟಿ ಒಳಗೊಂಡಂತೆ ಒಟ್ಟು ₹ 4.5 ಕೋಟಿ ನಗದು ವಶಪಡಿಸಿಕೊಂಡಿದೆ.

ಬೆಂಗಳೂರಿನಿಂದ ಶಿವಮೊಗ್ಗ ಹೊರಟಿದ್ದ ಕಾರನ್ನು ಶನಿವಾರ ಐ.ಟಿ ಅಧಿಕಾರಿಗಳು ಅಡ್ಡಗಟ್ಟಿ ₹ 2 ಸಾವಿರ ಮುಖಬೆಲೆಯ ₹ 2.3 ಕೋಟಿ ಹಣವನ್ನು ವಶಕ್ಕೆ ಪಡೆದರು. ಕಾರಿನ ಸ್ಟೆಪ್ನಿಯಲ್ಲಿ ಹಣ ತುಂಬಿ ಸಾಗಿಸಲಾಗುತಿತ್ತು. ಈ ಹಣವನ್ನು ಮತದಾನದ ವೇಳೆ ಮತದಾರರಿಗೆ ಹಂಚಲು ಒಯ್ಯಲಾಗುತಿತ್ತು ಎಂದು ಮೂಲಗಳು ತಿಳಿಸಿವೆ.

ಕಾರಿನ ಚಾಲಕನನ್ನು ಪ್ರಶ್ನಿಸಲಾಗುತ್ತಿದೆ. ಈ ಹಣ ಯಾರಿಗೆ ಸೇರಿದ್ದು ಎಂಬುದನ್ನು ಐ.ಟಿ ಬಹಿರಂಗಪಡಿಸಿಲ್ಲ. ಭದ್ರಾವತಿಯಲ್ಲೂ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ₹ 60 ಲಕ್ಷ ಹಣ ಸಿಕ್ಕಿದೆ. ಇನ್ನೂ ಶೋಧನೆ ನಡೆಯುತ್ತಿದೆ.

ಬಾಗಲಕೋಟೆ ನವನಗರದ ಡಿಸಿಸಿ ಬ್ಯಾಂಕ್‌ ಸಿಬ್ಬಂದಿಯೊಬ್ಬರ ಮನೆಯಲ್ಲಿ ₹ 1ಕೋಟಿ ಹಣ ಜಪ್ತಿ ಮಾಡಲಾಗಿದೆ. ಬ್ಯಾಂಕ್‌ನ ಹಿರಿಯ ಪರಿವೀಕ್ಷಕ ಆರ್‌.ಎಸ್‌. ಕರ್ಣೇಕರ್ (ಈಗ ಇವರು ಎರವಲು ಸೇವೆ ಮೇಲೆ ಶಿವಾನಂದ ಪಾಟೀಲರ ಆಪ್ತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ) ಹಾಗೂ ಪ್ರಥಮ ದರ್ಜೆ ಸಹಾಯಕ ಯಾಸಿನ್‌ ತುಂಬರಮಟ್ಟಿ ಅವರ ಮನೆಯನ್ನು ಶೋಧಿಸಲಾಗಿದೆ.

ಮತದಾನದ ಸಮಯದಲ್ಲಿ ಹಂಚಿಕೆ ಮಾಡಲು ಈ ಹಣ ಸಂಗ್ರಹಿಸಲಾಗಿತ್ತು. ಪಕ್ಕದ ವಿಜಯಪುರ ಜಿಲ್ಲೆಯ ಜೆಡಿಎಸ್‌ ಅಭ್ಯರ್ಥಿ ಸುನೀತಾ ದೇವಾನಂದ ಚವ್ಹಾಣ ಹಾಗೂ ನಾಗಠಾಣ ಶಾಸಕ ದೇವಾನಂದ ಚವ್ಹಾಣರ ಆಪ್ತರಾಗಿರುವ ರಾಮಚಂದ್ರ ದೊಡಮನಿ ಮತ್ತು ದೇವಪ್ಪ ತದ್ದೇವಾಡಿ ಅವರ ಮನೆಗಳನ್ನು ಶೋಧಿಸಲಾಗಿದೆ. ಮನೆಯೊಂದರಲ್ಲಿ ₹ 10ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಗೋವಾ ಆಭರಣ ವ್ಯಾಪಾರಿ ಸಹೋದರಿಬ್ಬರ ಅಂಗಡಿ ಹಾಗೂ ಮನೆಗಳನ್ನೂ ಶೋಧಿಸಲಾಗಿದ್ದು, ₹ 30 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಅವರು ನಗದಿನಲ್ಲಿ ವ್ಯವಹಾರ ನಡೆಸುತ್ತಿದ್ದರು ಎಂದೂ ಮೂಲಗಳು ತಿಳಿಸಿವೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ದಾಳಿಗಳು ನಡೆಯುವ ಸಂಭವವಿದೆ.

ಹಣದ ಕಂತೆಗಳಿಂದಲೂ ನೋಟುಗಳನ್ನು ಎಳೆದಿದ್ದ!
ಕಾರಿನ ಸ್ಟೆಪ್ನಿಯಲ್ಲಿ ತುಂಬಿದ್ದ ₹2 ಸಾವಿರ ಮುಖಬೆಲೆಯ ನೂರು ನೋಟುಗಳ ಪ್ರತಿ ಕಂತೆಯಿಂದ ಸರಾಸರಿ 4 ನೋಟುಗಳನ್ನು ಹಣ ಸಾಗಿಸಿ, ವಿತರಣೆ ಮಾಡುವ ವ್ಯಕ್ತಿ ಎಳೆದಿದ್ದ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಅಕ್ರಮವಾಗಿ ಹಣ ಸಾಗಿಸಿ, ಹಂಚಿಕೆ ಮಾಡುವ ವ್ಯವಹಾರದಲ್ಲೂ ನೋಟುಗಳು ಸೋರಿಕೆಯಾದ ಕುರಿತು ತಪಾಸಣೆ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಅಧಿಕಾರಿಗಳು ತಮಾಷೆ ಮಾಡಿ ನಗಾಡಿದರು ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT