ಜೈಲಿಗೆ ಕಳುಹಿಸಿದರೂ ಹೆದರಲ್ಲ: ಸಂಸದ ಡಿ.ಕೆ ಸುರೇಶ್

7

ಜೈಲಿಗೆ ಕಳುಹಿಸಿದರೂ ಹೆದರಲ್ಲ: ಸಂಸದ ಡಿ.ಕೆ ಸುರೇಶ್

Published:
Updated:

ಬೆಂಗಳೂರು: 'ನಮಗೆ ಕಾನೂನು ಮೇಲೆ ನಂಬಿಕೆ ಇದೆ. ನಮ್ಮನ್ನು ಜೈಲಿಗೆ ಕಳುಹಿಸಿದರೂ ಹೆದರಲ್ಲ' ಎಂದು ಸಂಸದ ಡಿ.ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಜಂಟಿ ಮಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು 'ಬಿಜೆಪಿ ಮುಖಂಡರು ಪಕ್ಷಕ್ಕೆ ಬರುವಂತೆ ಆಮಿಷ ನೀಡುತ್ತಿದ್ದಾರೆ. ಬಿಜೆಪಿಗೆ ಹೋದರೆ ಯಾವ ಇಡಿ, ಸಿಬಿಐ, ಐಟಿ ಪ್ರಕರಣಗಳು ಇರುವುದಿಲ್ಲ ಎಂದಿದ್ದಾರೆ. ನಾವು ಕಾಂಗ್ರೆಸ್‌ನ ಕಟ್ಟಾಳುಗಳು. ನಮ್ಮನ್ನು ಜೈಲಿಗೆ ಹಾಕಿದರೂ ನಾವು ಕಾಂಗ್ರೆಸ್ ಬಿಡುವುದಿಲ್ಲ' ಎಂದರು.

'ಡಿಕೆಶಿ ಜೈಲಿಗೆ ಶಾಂತಾ ದೆಹಲಿಗೆ ಎಂದು ಶ್ರೀರಾಮುಲು ಹೇಳಿದ್ದರು. ಇದು ಶ್ರೀರಾಮುಲು ಹೇಳಿಕೆಯಲ್ಲ. ಬದಲಿಗೆ ಕೇಂದ್ರವೇ ಇವರ ಮೂಲಕ ಹೇಳಿಸಿರುವಂತಿದೆ. ಸಿಬಿಐ ಮೋರ್ಚಾ, ಇಡಿ ಮೋರ್ಚಾ ಆಗಿ ಕೆಲಸ ಮಾಡುತ್ತಿವೆ' ಎಂದರು.

'ಸ್ವತಂತ್ರ ತನಿಖಾ ಸಂಸ್ಥೆಗಳು ಬಿಜೆಪಿ ಅಣತಿಯಂತೆ ನಡೆಯುತ್ತಿವೆ. ಬಿಜೆಪಿ ರಾಷ್ಟ್ರೀಯ ನಾಯಕರು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿವೆ'

'ಯಾರು ಪ್ರಬಲವಾಗಿರುತ್ತಾರೋ ಅಂಥವರೇ ಟಾರ್ಗೆಟ್. ಡಿ.ಕೆ ಶಿವಕುಮಾರ್ ರನ್ನ ಈಗ ಟಾರ್ಗೆಟ್ ಮಾಡಲಾಗುತ್ತಿದೆ. ನಾವು ಸಂವಿಧಾನಕ್ಕೆ ಗೌರವ ಕೊಡುತ್ತೇವೆ.‌ ಆದರೆ ತನಿಖಾ ಸಂಸ್ಥೆಗಳ ಅಧಿಕಾರಿಗಳು ಯಾವುದೋ ಒಂದು ಪಕ್ಷದ ಪರ ಕೆಲಸ ಮಾಡುತ್ತಿವೆ' ಎಂದು ದೂರಿದರು.

'ಈಗಾಗಲೇ ಪ್ರಧಾನಿ ಭೇಟಿಗೆ ಅವಕಾಶ ಕೇಳಿದರೂ ಸಿಕ್ಕಿಲ್ಲ. ಅಧಿಕಾರಿಗಳಿಗೆ ನೇರವಾಗಿ ಹೇಳುತ್ತೇನೆ..‌ಯಾವುದೇ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಲಿ' ಎಂದು ಆಗ್ರಹಿಸಿದರು.

ಸಂಸದ ಕೆ.ಸಿ. ರಾಮಮೂರ್ತಿ ಮಾತನಾಡಿ, 'ಜಾರಿ ನಿರ್ದೇಶನಾಲಯದ ನಿರ್ದೇಶಕರ ಭೇಟಿಗೆ ಒಂದೂವರೆ ತಿಂಗಳಿನಿಂದ ಪ್ರಯತ್ನಿಸಿದರೂ ಅವಕಾಶ ನೀಡಲಿಲ್ಲ. ಬಹುಶಃ ಅಧಿಕಾರಿಗಳಿಗೆ ಯಾರದ್ದೋ ಒತ್ತಡ ಇರುವಂತಿದೆ' ಎಂದರು.

'ಈಗ ಹೊಸದಾಗಿ ಇಡಿ ಡೈರೆಕ್ಟರ್ ಬಂದಿದ್ದಾರೆ. ಇವರಾದರೂ ಅವಕಾಶ ನೀಡಲಿ. ನಮ್ಮ ಕೆಲವೊಂದು ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಳ್ಳಬೇಕು. ಮತ್ತೆ ಇನ್ನೊಂದು ಬಾರಿ ಅವರ ಭೇಟಿಗೆ ಪ್ರಯತ್ನಿಸುತ್ತೇವೆ' ಎಂದರು.

'ಮುಂದೆ ಹೀಗೆ ನಡೆದರೆ ದೊಡ್ಡಮಟ್ಟದ ಹೋರಾಟ ಮಾಡುತ್ತೇವೆ' ಎಂದು ಸಂಸದ ಧ್ರುವ ನಾರಾಯಣ್ ಎಚ್ಚರಿಕೆ ನೀಡಿದರು.

'ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದಿದೆ. ಆದರೆ, ಯಾವುದೇ ಜನಪರ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಹೀಗಾಗಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆ. ಕಾಂಗ್ರೆಸ್ ಸಚಿವರು, ಶಾಸಕರ ನಿವಾಸಗಳ ಮೇಲೆ ದಾಳಿ ನಡೆಯುತ್ತಿದೆ.‌ ಕರ್ನಾಟಕ ಮಾತ್ರವಲ್ಲ ದೇಶದ ಬೇರೆ ರಾಜ್ಯಗಳಲ್ಲೂ ದಾಳಿಗಳು ನಡೆಯುತ್ತಿವೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಸದೆಬಡಿಯಲಾಗುತ್ತಿದೆ. ಅಮಿತ್ ಶಾ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ' ಎಂದು ದೂರಿದರು.

ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಮಾತನಾಡಿ, 'ಜನರಿಗೆ ಸಿಬಿಐ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ. ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಇವರು ಏನೂ ಮಾಡಲು ಸಾಧ್ಯವಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ' ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 6

  Angry

Comments:

0 comments

Write the first review for this !