ಬುಧವಾರ, ಸೆಪ್ಟೆಂಬರ್ 18, 2019
25 °C
ತತ್ವ, ಸಿದ್ಧಾಂತಕ್ಕೆ ಬದ್ಧನಾಗಿ ಉಳಿಯಬೇಕಿದ್ದರೆ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು.

‘ಸರ್ಕಾರ, ಶಾಸಕರಿಂದ ಒತ್ತಡ ಇರಲಿಲ್ಲ‘– ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್

Published:
Updated:

ಮಂಗಳೂರು: ' ನನ್ನ ರಾಜೀನಾಮೆಗೆ ಸ್ಥಳಿಯವಾದ ಯಾವ ವಿಷಯಗಳೂ ಕಾರಣವಲ್ಲ. ರಾಜ್ಯ ಸರ್ಕಾರ ಅಥವಾ ಶಾಸಕರಿಂದ ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಇರಲಿಲ್ಲ' ಎಂದು ಐಎಎಸ್‌ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ದೂರವಾಣಿ ಮೂಲಕ 'ಪ್ರಜಾವಾಣಿ' ಜೊತೆ ಮಾತನಾಡಿದ ಅವರು, 'ಪ್ರಸಕ್ತ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳೊಂದಿಗೆ ರಾಜಿ ಮಾಡಿಕೊಳ್ಳಲು ಆಗದೆ ರಾಜೀನಾಮೆ ನೀಡಿದ್ದೇನೆ. ನಾನು ಒಂದಷ್ಟು ಆದರ್ಶಗಳನ್ನು ಇರಿಸಿಕೊಂಡು ಬದುಕುತ್ತಿದ್ದೇನೆ. ತತ್ವ, ಸಿದ್ಧಾಂತ ನಂಬಿದ್ದೇನೆ. ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಅವಕ್ಕೆ ವಿರುದ್ಧವಾಗಿ. ಈ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯಲು ನನ್ನಿಂದ ಸಾಧ್ಯ ಆಗುತ್ತಿಲ್ಲ' ಎಂದರು.

'ಹುದ್ದೆಯಲ್ಲಿ ಮುಂದುವರಿಯಬೇಕಾದರೆ ನಾನು ನಂಬಿದ ತತ್ವ, ಸಿದ್ಧಾಂತಗಳಿಗೆ ವಿರುದ್ಧವಾಗಿ ರಾಜಿ ಮಾಡಿಕೊಳ್ಳಬೇಕಿತ್ತು. ತತ್ವ, ಸಿದ್ಧಾಂತಕ್ಕೆ ಬದ್ಧನಾಗಿ ಉಳಿಯಬೇಕಿದ್ದರೆ ಐಎಎಸ್‌ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು. ಎರಡನೆಯದ್ದನ್ನೇ ಆಯ್ಕೆ ಮಾಡಿಕೊಂಡಿದ್ದೇನೆ' ಎಂದು ತಿಳಿಸಿದರು.

'ವರ್ಗಾವಣೆ ವಿಚಾರದಲ್ಲಿ ಬೇಸರದಿಂದ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು. ಅಧಿಕಾರಿಗಳು ಕೆಲಸ ಮಾಡಲು ಕರ್ನಾಟಕಕ್ಕಿಂತ ಉತ್ತಮ ರಾಜ್ಯ ಸಿಗುವುದಿಲ್ಲ. ನನ್ನ ಸೇವಾ ಅವಧಿಯಲ್ಲಿ ಯಾವತ್ತೂ, ಯಾರಿಂದಲೂ ತೊಂದರೆ ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತೊಂದರೆ ಆಗಿಲ್ಲ' ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ 

ಜಿಲ್ಲೆಯ ಎಲ್ಲ ಶಾಸಕರು ಎಲ್ಲ ಸಂದರ್ಭಗಳಲ್ಲೂ ತಮ್ಮ ಬೆಂಬಲಕ್ಕೆ ನಿಂತಿದ್ದರು. ತಮ್ಮನ್ನು ವರ್ಗಾವಣೆ ಮಾಡದಂತೆಯೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಈ ಹಂತದಲ್ಲಿ ರಾಜೀನಾಮೆ ನೀಡಿರುವುದರಿಂದ ಅವರಿಗೆ ಬೇಸರ ಮಾಡಿದಂತಾಗಿದೆ. ಈ ಕಾರಣಕ್ಕಾಗಿ ರಾಜೀನಾಮೆ ಪತ್ರದಲ್ಲೇ ಎಲ್ಲರ ಕ್ಷಮೆ ಕೋರಲಾಗಿದೆ ಎಂದರು.

'ರಾಜೀನಾಮೆ ವಿಷಯ ಆತುರದಲ್ಲಿ ಕೈಗೊಂಡ ನಿರ್ಧಾರವಲ್ಲ. ಸಾಕಷ್ಟು ದಿನಗಳಿಂದಲೇ ಈ ಬಗ್ಗೆ ಯೋಚಿಸುತ್ತಿದ್ದೆ. ಈಗ ಕೈಗೊಂಡಿರುವ ನಿರ್ಧಾರವನ್ನು ಪುನರ್ ಪರಿಶೀಲಿಸುವ ಪ್ರಶ್ನೆಯೇ ಇಲ್ಲ' ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಮಂಗಳೂರಿನಿಂದ‌ ತೆರಳಿರುವ ಸೆಂಥಿಲ್
ಐಎಎಸ್‌ ಅಧಿಕಾರಿಯ ಹುದ್ದೆಗೆ ರಾಜೀನಾಮೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಮಂಗಳೂರಿನಿಂದ ಹೊರ ಹೋಗಿದ್ದಾರೆ. ವಾರದ ಹಿಂದೆಯೇ ಕುಟುಂಬದವರನ್ನು ಸ್ವಗ್ರಾಮಕ್ಕೆ ಕಳಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ವಾರದಿಂದ ಸೆಂಥಿಲ್ ರಜೆಯಲ್ಲಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಆರ್. ಸೆಲ್ವಮಣಿ ಅವರಿಗೆ ಜಿಲ್ಲಾಧಿಕಾರಿ ಹುದ್ದೆಯ ಪ್ರಭಾರ ವಹಿಸಿದ್ದರು. ರಾಜೀನಾಮೆ ವಿಚಾರವನ್ನು ಗೋಪ್ಯವಾಗಿ ಇರಿಸಿಕೊಂಡಿದ್ದರು.

Post Comments (+)