ಶನಿವಾರ, ಫೆಬ್ರವರಿ 27, 2021
28 °C
ಜಲ ಶಕ್ತಿ ಸಚಿವಾಲಯದ ಪ್ರಸ್ತಾವ ತಿರಸ್ಕಾರ: ಪ್ರಬಲ ವೈಜ್ಞಾನಿಕ ಪುರಾವೆಗಳು ಹಾಗೂ ದತ್ತಾಂಶ ಇಲ್ಲ

ಕೋವಿಡ್-19‌ ಚಿಕಿತ್ಸೆಗೆ ಗಂಗಾಜಲ ಅಧ್ಯಯನಕ್ಕೆ ಐಸಿಎಂಆರ್‌ ನಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19 ರೋಗಿಗಳಿಗೆ ಗಂಗಾ ನದಿ ನೀರನ್ನು ಬಳಸಿ ಚಿಕಿತ್ಸೆ ನೀಡುವ ಬಗ್ಗೆ ಅಧ್ಯಯನ ನಡೆಸುವಂತೆ ಜಲಶಕ್ತಿ ಸಚಿವಾಲಯ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ಗೆ (ಐಸಿಎಂಆರ್‌)  ಪ್ರಸ್ತಾವ ಸಲ್ಲಿಸಿದೆ. ಆದರೆ, ಈ ಸಂಬಂಧ ಯಾವುದೇ ಅಧ್ಯಯನ ಕೈಗೊಳ್ಳದಿರಲು ಐಸಿಎಂಆರ್‌ ನಿರ್ಧರಿಸಿದೆ.

‘ಕೊರೊನಾ ವೈರಸ್‌ ಸೋಂಕಿಗೆ ಗಂಗಾಜಲ ಬಳಸಿ ಚಿಕಿತ್ಸೆ ನೀಡುವ ಸಂಬಂಧ ಅಧ್ಯಯನ ನಡೆಸಲು ಪೂರಕವಾದ ಪ್ರಬಲ ವೈಜ್ಞಾನಿಕ ಪುರಾವೆಗಳು ಹಾಗೂ ದತ್ತಾಂಶ ಇಲ್ಲ. ಹೀಗಾಗಿ ಈ ವಿಷಯ ಕುರಿತು ಅಧ್ಯಯನ ಕೈಗೊಳ್ಳದಿರಲು ನಿರ್ಧರಿಸಲಾಗಿದೆ’ ಎಂದು ಐಸಿಎಂಆರ್‌ನ ಸಂಶೋಧನಾ ಪ್ರಸ್ತಾವಗಳ ಮೌಲ್ಯಮಾಪನ ವಿಭಾಗದ ಮುಖ್ಯಸ್ಥ ಡಾ.ವೈ.ಕೆ.ಗುಪ್ತ ಸ್ಪಷ್ಟಪಡಿಸಿದ್ದಾರೆ.

ಗಂಗಾ ನದಿ ಶುದ್ಧೀಕರಣ ಹಾಗೂ ಪುನಶ್ಚೇತನಕ್ಕಾಗಿ ಜಲಶಕ್ತಿ ಸಚಿವಾಲಯ ‘ನ್ಯಾಷನಲ್‌ ಮಿಷನ್‌ ಫಾರ್‌ ಕ್ಲೀನ್‌ ಗಂಗಾ’ (ಎನ್‌ಎಂಸಿಜಿ) ಎಂಬ ಕಾರ್ಯಕ್ರಮ ರೂಪಿಸಿದೆ. ಎನ್‌ಎಂಸಿಜಿಯೇ ಪ್ರಸ್ತಾವವನ್ನು ಐಸಿಎಂಆರ್‌ಗೆ ಕಳುಹಿಸಿದೆ.

‘ಕೋವಿಡ್‌ ರೋಗಿಗಳಿಗೆ ಗಂಗಾ ಜಲ ಬಳಸಿ ಚಿಕಿತ್ಸೆ ನೀಡಲುಕ್ಲಿನಿಕಲ್‌ ಅಧ್ಯಯನ ನಡೆಸಬೇಕು ಎಂದು ಹಲವರಿಂದ ಹಾಗೂ ಎನ್‌ಜಿಒಗಳಿಂದ ಎನ್‌ಎಂಸಿಜಿಗೆ ಪ್ರಸ್ತಾವ ಬಂದಿದ್ದವು. ಈ ಎಲ್ಲ ಪ್ರಸ್ತಾವಗಳನ್ನು ಯಥಾವತ್ತಾಗಿ ಐಸಿಎಂಆರ್‌ಗೆ ಕಳುಹಿಸಲಾಗಿದೆ’ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

‘ಗಂಗಾ ನದಿ ನೀರಿನ ಗುಣಮಟ್ಟ ಹಾಗೂ ಅದು ಹೊಂದಿರಬಹುದಾದ ವಿಶೇಷ ಗುಣಗಳನ್ನು ತಿಳಿಯಲು ಅಧ್ಯಯನ ಕೈಗೊಂಡಿದ್ದ ನ್ಯಾಷನಲ್‌ ಎನ್ವಿರಾನ್‌ಮೆಂಟಲ್‌ ಎಂಜಿನಿಯರಿಂಗ್‌ ಆ್ಯಂಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ (ಎನ್‌ಇಇಆರ್‌ಐ) ವಿಜ್ಞಾನಿಗಳೊಂದಿಗೆ ನಮಗೆ ಬಂದಿದ್ದ ಪ್ರಸ್ತಾವಗಳ ಕುರಿತು ಚರ್ಚಿಸಿದ್ದೇವೆ. ಆದರೆ, ಈ ನದಿ ನೀರಿನಲ್ಲಿ ವೈರಸ್‌ ನಿರೋಧಕ ಗುಣ ಇಲ್ಲ ಎಂದು ಸಂಸ್ಥೆಯ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು