ಮತ್ತೆ ಆಪರೇಷನ್ ಕಮಲವಾದರೆ ಜನ ದಂಗೆ ಏಳ್ತಾರೆ: ದಿನೇಶ್ ಗುಂಡೂರಾವ್

ಹೊಸಪೇಟೆ: 'ರಾಜ್ಯದಲ್ಲಿ ಬಿಜೆಪಿಯಿಂದ ಎರಡನೇ ಹಂತದ ’ಆಪರೇಷನ್ ಕಮಲ’ವಾದರೆ ಈ ಸಲ ರಾಜ್ಯದ ಜನರೇ ಅವರ ವಿರುದ್ಧ ದಂಗೆ ಏಳ್ತಾರೆ' ಎಂದು ಕೆ.ಪಿ.ಸಿ.ಸಿ.ಅಧ್ಯಕ್ಷ ದಿನೇಶ ಗುಂಡೂರಾವ್ ಭವಿಷ್ಯ ನುಡಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಬಿ.ನಾಗೇಂದ್ರ ಅವರು ಅನಾರೋಗ್ಯದ ನಿಮಿತ್ತ ಪ್ರಚಾರಕ್ಕೆ ಬಂದಿಲ್ಲ. ಅವರೂ ಸೇರಿದಂತೆ ಯಾರು ಕೂಡ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟಪಡಿಸಿದರು.
'ಬಿಜೆಪಿಯ ಅನೈತಿಕ ರಾಜಕಾರಣ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವ ಕೃತ್ಯ ನೋಡಿ ಜನರಿಗೆ ಹೇಸಿಗೆ ಬಂದಿದೆ. ಚುನಾವಣೆ ನಂತರ ಒಂದುವೇಳೆ ಪುನಃ ‘ಆಪರೇಷನ್ ಕಮಲ’ಕ್ಕೆ ಕೈಹಾಕಿದರೆ ಜನರೇ ದಂಗೆ ಏಳ್ತಾರೆ. ಆಗ ನಾವೇನೂ ಮಾಡುವುದು ಬೇಕಿಲ್ಲ' ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಗೆ ಜನ ಬಹುಮತ ಕೊಟ್ಟಿದ್ದಲ್ಲ, ಸೃಷ್ಟಿಸಿಕೊಂಡಿದ್ದು: ದಿನೇಶ್ ಗುಂಡೂರಾವ್
'ಡಿ. 9ರ ನಂತರ ರಾಜ್ಯದಲ್ಲಿ ಮಹತ್ತರ ರಾಜಕೀಯ ಬದಲಾವಣೆಗಳು ಆಗಲಿವೆ. ಪುನಃ ಜೆ.ಡಿ.ಎಸ್.ನೊಂದಿಗೆ ಮೈತ್ರಿ ಬಗ್ಗೆ ನಾನೇನೂ ಹೇಳಲಾರೆ. ಅದರ ಬಗ್ಗೆ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ, ಬದಲಾವಣೆಯಂತೂ ಖಚಿತ' ಎಂದರು.
'ವಾಮಮಾರ್ಗದಿಂದ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಈಗ ಬಿಜೆಪಿಯೊಂದಿಗೆ ಯಾರು ಮೈತ್ರಿಗೆ ಮುಂದಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಸರ್ವಾಧಿಕಾರ ಧೋರಣೆಯಿಂದ ಮಿತ್ರ ಪಕ್ಷಗಳು ಅವರಿಂದ ದೂರವಾಗುತ್ತಿವೆ' ಎಂದು ಹೇಳಿದರು.