ಶುಕ್ರವಾರ, ಡಿಸೆಂಬರ್ 6, 2019
20 °C

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ:ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‘ಯಾವುದೇ ಚುನಾವಣೆಯಲ್ಲೂ ನಾನು ಹಣ, ಹೆಂಡ ಹಂಚಿಲ್ಲ. ಮತದಾರರಿಗೆ ಹಣ ಹಂಚಿರುವುದನ್ನು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ’ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಆರೋಪ ಸಾಬೀತು ಮಾಡಿದರೆ, ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ತಿಳಿಸಿದರು.

‘ನನ್ನ ಕಾರಿನ ಚಾಲಕನಿಗೆ ಹಣ ಕೊಟ್ಟಿದ್ದನ್ನೇ ಚಿತ್ರೀಕರಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ನನ್ನ ಮೇಲೆ ಆರೋಪ ಮಾಡಿದವರ ಹಿನ್ನೆಲೆ ಏನೆಂಬುದು ಗೊತ್ತಿದೆ. ನಾನು ತಪ್ಪು ಮಾಡಿದ್ದೇನೆ ಎಂದು ಚುನಾವಣಾ ಆಯೋಗ ಹೇಳಿದರೆ ಕಾನೂನಿನ ಪ್ರಕಾರ ಶಿಕ್ಷೆ ಅನುಭವಿಸಲು ಸಿದ್ಧ’ ಎಂದು ಹೇಳಿದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲಾ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸುಳ್ಳು ವಿಚಾರಗಳನ್ನೇ ಹಬ್ಬಿಸುತ್ತಿದ್ದಾರೆ. ಅನರ್ಹ ಶಾಸಕರು ದುಡ್ಡು ತೆಗೆದುಕೊಂಡಿರುವುದಕ್ಕೆ ಸಾಕ್ಷ್ಯ ಇದ್ದರೆ ಅವರು ಮುಂದಿಡಲಿ. ಪುಕ್ಕಟೆ ಅಪಪ್ರಚಾರ ಮಾಡುವುದನ್ನು ಇನ್ನಾದರೂ ನಿಲ್ಲಿಸಲಿ’ ಎಂದು ಕಾರಜೋಳ ತಿಳಿಸಿದರು.

ಚುನಾವಣೆ ಬಳಿಕ ಸಿದ್ದರಾಮಯ್ಯ ಅವರ ವಿರೋಧ ಪಕ್ಷದ ನಾಯಕ ಸ್ಥಾನಕ್ಕೇ ಕುತ್ತು ಬರಲಿದೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ಸಂಸದ ಎ.ನಾರಾಯಣಸ್ವಾಮಿ, ಶಾಸಕ ಎಂ.ಪಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್‌.ಆನಂದ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು