‘ಆರೋಪ ಸತ್ಯವಾಗಿದ್ದರೆ ಆಡಳಿತ ವೈಫಲ್ಯ’

7
‘ದೋಸ್ತಿ’ ಸರ್ಕಾರಕ್ಕೆ ಚಾಟಿ ಬೀಸಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌

‘ಆರೋಪ ಸತ್ಯವಾಗಿದ್ದರೆ ಆಡಳಿತ ವೈಫಲ್ಯ’

Published:
Updated:

ಬೆಂಗಳೂರು: ‘ಯಶಸ್ವಿನಿ ಯೋಜನೆ ಮತ್ತು ಆರೋಗ್ಯ ಕರ್ನಾಟಕ ಅನುಷ್ಠಾನ ವಿಷಯದಲ್ಲಿ ಲೋಪ ಆಗಿದೆ ಎಂಬ ಶಾಸಕರ ಆರೋಪ ಸತ್ಯವಾಗಿದ್ದರೆ, ಇದು ಆಡಳಿತ ವೈಫಲ್ಯ’ ಎಂದು ಸರ್ಕಾರದ ವಿರುದ್ಧವೇ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಚಾಟಿ ಬೀಸಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ, ‘ಯಶಸ್ವಿನಿ ಯೋಜನೆಯನ್ನು ಮೂರು ತಿಂಗಳು ಮುಂದುವರಿಸಿರುವ ಬಗ್ಗೆ ಮುಖ್ಯಮಂತ್ರಿಯೇ ಹೇಳಿಕೆ ನೀಡಿದ್ದಾರೆ. ಆರೋಗ್ಯ ಕಾರ್ಡ್‌ ಸಂಪೂರ್ಣ ವಿತರಣೆಗೆ ಇನ್ನೂ ನಾಲ್ಕು ತಿಂಗಳು ಬೇಕಾಗಬಹುದು’ ಎಂದು ವಿವರಿಸಿದರು.

ಆಗ ಮಧ್ಯಪ್ರವೇಶಿಸಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ‘ಇದು ಗಂಭೀರ ವಿಷಯ. ಸರ್ಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಕಾರ್ಡ್ ವಿತರಣೆಯಲ್ಲಿ ಜನರು ಭೀತಿಗೆ ಒಳಗಾಗುವಂತೆ ಮಾಡಬಾರದು. ನಾಲ್ಕು ತಿಂಗಳಿಗಿಂತ ಮೊದಲೇ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಆರೋಗ್ಯ ಕರ್ನಾಟಕ ಕಾರ್ಡ್ ಬಗ್ಗೆ ಬಿಜೆಪಿ‌ಯ ಜಗದೀಶ ಶೆಟ್ಟರ್ ವಿಷಯ ಪ್ರಸ್ತಾಪ ಮಾಡಿದರು. ಈ ವೇಳೆ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ‘ಯಶಸ್ವಿನಿ ಯೋಜನೆ ಸ್ಥಗಿತಗೊಳಿಸಿರುವುದರಿಂದ ತೊಂದರೆಗೆ ಒಳಗಾಗಿರುವ ಜನ ನೇರವಾಗಿ ದೂರು ನೀಡುತ್ತಿದ್ದಾರೆ’ ಎಂದು ದೂರಿದರು.

‘ಆರೋಗ್ಯ ಕಾರ್ಡ್‌ ಇನ್ನೂ ವಿತರಣೆ ಆಗಿಲ್ಲ. ಬಿಪಿಎಲ್‌ ಕಾರ್ಡ್‌ ತೋರಿಸಿ ಚಿಕಿತ್ಸೆ ಪಡೆಯಬಹುದೆಂಬ ಸರ್ಕಾರದ ಜಾಹೀರಾತಿಗೆ ಖಾಸಗಿ ಆಸ್ಪತ್ರೆಗಳು ಕ್ಯಾರೇ ಅನ್ನುತ್ತಿಲ್ಲ’ ಎಂದು ಬಿಜೆಪಿ, ಜೆಡಿಎಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಯಶಸ್ವಿನಿ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ಕೋಟ್ಯಂತರ ಹಣ ಪಾವತಿ ಬಾಕಿ ಇದೆ’ ಎಂದು ಬಿಜೆಪಿಯ ಕೆ.ಎಸ್‌. ಈಶ್ವರಪ್ಪ ಆರೋಪಿಸಿದಾಗ, ‘ಈ ಯೋಜನೆಯಡಿ ₹ 9 ಕೋಟಿ ಮಾತ್ರ ಪಾವತಿ ಬಾಕಿ ಇದೆ. ಆದರೆ, ಈ ಮೊತ್ತ ಹೆರಿಗೆ ಮತ್ತು ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದ 40 ಸಾವಿರ ಪ್ರಕರಣಗಳಿಗೆ ಸಂಬಂಧಿಸಿದ್ದು. ಈ ಬಿಲ್‌ಗಳ ಬಗ್ಗೆ ಸಂದೇಹ ಇರುವುದರಿಂದ ಪಾವತಿ ವಿಳಂಬವಾಗಿದೆ’ ಎಂದು ಆರೋಗ್ಯ ಸಚಿವರು ಸ್ಪಷ್ಟನೆ ನೀಡಿದರು.

‘ಯಶಸ್ವಿನಿ ಯೋಜನೆ ಉತ್ತಮವಾಗಿತ್ತು. ಅದನ್ನು ರದ್ದು ಮಾಡಿದ್ದು ಸರಿಯಲ್ಲ’ ಎಂದು ಜೆಡಿಎಸ್‌ನ ಎಚ್. ವಿಶ್ವನಾಥ್ ಹೇಳಿದಾಗ, ಸಭಾಧ್ಯಕ್ಷ ರಮೇಶ್‌ ಕುಮಾರ್‌ ಗರಂ ಆದರು.

‘ಯಶಸ್ವಿನಿ ಯೋಜನೆಯ ಲೋಪದೋಷ ಸರಿಪಡಿಸುವ ಸಲುವಾಗಿಯೇ ಯೂನಿವರ್ಸಲ್ ಹೆಲ್ತ್ ಕಾರ್ಡ್ ಜಾರಿಗೊಳಿಸಲಾಗಿದೆ. ಸರ್ಕಾರದ ಆರೋಗ್ಯ ಯೋಜನೆಗಳಿಂದ ಯಾರಿಗೆ ಅತಿ ಹೆಚ್ಚು ಲಾಭವಾಗುತ್ತಿದೆ ಎಂಬುದನ್ನು ಗಮನಿಸಿ, ಫಲಾನುಭವಿಗಳು ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗುವುದನ್ನು ಕಡ್ಡಾಯಗೊಳಿಸಲಾಗಿದೆ. ಹೊಸ ಯೋಜನೆ ಜಾರಿ ಆಗುವವರೆಗೆ ಯಶಸ್ವಿನಿ ಯೋಜನೆ ಮುಂದುವರಿಸಲು ಆದೇಶಿಸಲಾಗಿದೆ’ ಎಂದು ರಮೇಶ್ ಕುಮಾರ್ ತಿಳಿಸಿದರು.

**

ಸಿದ್ದರಾಮಯ್ಯ ತೆರೆ, ಪಾಟೀಲ ಸುಳಿ!

‘ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ, ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು...’ –ಡಿವಿಜಿಯವರ ‘ಮಂಕುತಿಮ್ಮ ಕಗ್ಗ’ದಲ್ಲಿರುವ ಸಾಲುಗಳನ್ನು ಪ್ರಸಕ್ತ ಸರ್ಕಾರಕ್ಕೆ ಹೋಲಿಸಿದ ಬಿಜೆಪಿಯ ಪಿ. ರಾಜೀವ್‌, ‘ ಸರ್ಕಾರದ ಹರಿಗೋಲಿಗೆ ಸಿದ್ದರಾಮಯ್ಯ ದೊಡ್ಡ ತೆರೆ, ಎಂ.ಬಿ. ಪಾಟೀಲ ಸುಳಿ, ಅದಕ್ಕೆ ಕುಮಾರಸ್ವಾಮಿ ಮತ್ತು ಜಿ. ಪರಮೇಶ್ವರ ಹುಟ್ಟು ಹಾಕುತ್ತಿದ್ದಾರೆ’ ಎಂದು ಬಣ್ಣಿಸಿದರು!

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಈ ಹರಿಗೋಲು ಮುಳುಗುವುದೊ ಇಲ್ಲಾ ದಡ ಸೇರುವುದೋ ಯಾರಿಗೆ ಗೊತ್ತು’ ಎಂದು ಸಂದೇಹ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !