ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಗೆ ನೀರು ಬಂದರೆ ಶಾಲೆಗೆ ಗೈರು!

ಮಲಪ್ರಭೆ ದಡದ ಚಿಕ್ಕಮಾಗಿ ಗ್ರಾಮದ ಮಕ್ಕಳ ಸಂಕಷ್ಟ ಸ್ಥಿತಿ; ಇದ್ದೂ ಇಲ್ಲದಂತಾದ ಸೇತುವೆ
Last Updated 16 ಡಿಸೆಂಬರ್ 2018, 19:13 IST
ಅಕ್ಷರ ಗಾತ್ರ

ಬಾಗಲಕೋಟೆ: ಮಲಪ್ರಭೆಯಲ್ಲಿ ನೀರು ಹರಿದರೆ, ಹುನಗುಂದ ತಾಲ್ಲೂಕಿನ ಚಿಕ್ಕಮಾಗಿ ಗ್ರಾಮದ 23 ಮಕ್ಕಳು ಶಾಲೆಗೆ ಗೈರು ಹಾಜರಾಗುತ್ತಾರೆ.ಪಕ್ಕದ ಹಿರೇಮಾಗಿಯ ಸರ್ಕಾರಿ ಪ್ರೌಢಶಾಲೆಗೆ ಹೋಗುವ ಈ ಮಕ್ಕಳು ನಿತ್ಯ ನದಿ ದಾಟಿಕೊಂಡೇ ಶಾಲೆಗೆ ಹೋಗಬೇಕು.

ಸರ್ಕಾರ, ನದಿಗೆ ಅಡ್ಡಲಾಗಿ 10 ವರ್ಷಗಳ ಹಿಂದೆ ಸೇತುವೆ (ಬ್ರಿಜ್‌ ಕಮ್ ಬ್ಯಾರೇಜ್) ನಿರ್ಮಿಸಿದೆ. ಅದನ್ನು ದಾಟಿದರೂ ಅಲ್ಲಿಂದ ಮುಂದೆ ಹಿರೇಮಾಗಿಗೆ ಹೋಗಲು ರಸ್ತೆ ಇಲ್ಲ. ಹಾಗಾಗಿ ಅಲ್ಲಿಂದ ಒಂದು ಕಿ.ಮೀ ದೂರದ ಗ್ರಾಮಕ್ಕೆಹೊಲಗಳ ನಡುವೆ ಕಾಲು ಹಾದಿಯಲ್ಲಿ ಸಾಗಬೇಕು.

‘ಪೀಕು (ಬೆಳೆ) ಹಾಳಾಗುತ್ತದೆ ಎಂದು ಹೊಲದ ಮಾಲೀಕರೂ ಅಲ್ಲಿ ಅಡ್ಡಾಡಲು ಬಿಡುವುದಿಲ್ಲ. ಮುಳ್ಳಿನ ಬೇಲಿ ಹಾಕುತ್ತಾರೆ. ಇದರಿಂದ ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ. ನದಿಯಲ್ಲಿ ನೀರು ಬತ್ತಿದಾಗ, ಬೇಸಿಗೆಯಲ್ಲಿ ಮಾತ್ರ ಎರಡೂ ಊರುಗಳ ನಡುವೆ ಸರಾಗ ಸಂಪರ್ಕ ಸಾಧ್ಯವಾಗುತ್ತದೆ’ ಎಂದು ಚಿಕ್ಕಮಾಗಿಯ ಶಂಕರಪ್ಪ ಸಜ್ಜನ ಹೇಳುತ್ತಾರೆ.

ಸಂಪರ್ಕದ ಹಾದಿ: ಹೊಳೆ ಆಚೆಯ ಎಂಟತ್ತು ಹಳ್ಳಿಯವರು, ಅಮೀನಗಡ ಪಟ್ಟಣ, ಹುನಗುಂದ, ಇಳಕಲ್‌ಗೆ ಹೋಗಬೇಕೆಂದರೆ ಅವರಿಗೆ ಸಂಪರ್ಕ ಕೊಂಡಿ ಆಗಿರುವುದು ಇದೇ ಬ್ರಿಜ್ ಕಮ್ ಬ್ಯಾರೇಜ್.

ಹೊಲದವರ ದಿಗ್ಭಂದನದ ಕಾರಣ ಅವರೆಲ್ಲಾ 30 ಕಿ.ಮೀ ಸುತ್ತು ಬಳಸಿ ಕಮತಗಿ ಮೂಲಕ ಅಮೀನಗಡಕ್ಕೆ ಹೋಗುತ್ತಾರೆ. ಹಳ್ಳಿಯವರೇನೊ ಸುತ್ತಿಕೊಂಡು ಹೋಗುತ್ತಾರೆ. ಆದರೆ ಶಾಲಾ ಮಕ್ಕಳಿಗೆ ಮಾತ್ರ ಹೊಲದ ಹಾದಿಯೇ ಅನಿವಾರ್ಯ.

‘ಬ್ರಿಜ್‌ ಕಟ್ಟಿದ ನಂತರವೂ ಎರಡೂ ಗ್ರಾಮಗಳ ನಡುವೆ ದೋಣಿ ವ್ಯವಸ್ಥೆ ಇತ್ತು. ಆಗ ಮಕ್ಕಳು ಶಾಲೆಗೆ ಬರಲು ತೊಂದರೆ ಇರಲಿಲ್ಲ. ನಾಲ್ಕು ವರ್ಷಗಳ ಹಿಂದೆ ಅದು ಬಂದ್ ಆಗಿದೆ ಎನ್ನುತ್ತಾರೆ ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ ಮೇಟಿ.

‘ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ’

‘ಮಕ್ಕಳಿಗೆ ಅಡ್ಡಾಡಲು ಬಿಟ್ಟರೆ ಅವರೊಟ್ಟಿಗೆ ಊರವರೂ ಓಡಾಡುತ್ತಾರೆ; ಪೀಕು ಹಾಳಾಗುತ್ತೆ ಅನ್ನೋದು ಹೊಲದ ಮಾಲೀಕರ ವಾದ. ರಸ್ತೆ ಸಮಸ್ಯೆ ಕಾರಣ ಚಿಕ್ಕಮಾಗಿಯಿಂದ ಬರುವ ಮಕ್ಕಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅನುಕೂಲ ಇದ್ದವರು ಪಟ್ಟಣಕ್ಕೆ ಕಳಿಸುತ್ತಾರೆ. ಉಳಿದವರು ಶಾಲೆ ಬಿಡಿಸುತ್ತಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಡಿ.ಎಸ್. ಶಿರೂರ ಹೇಳುತ್ತಾರೆ.

‘ವರ್ಷಕ್ಕಿಷ್ಟು ಬೆಳೆ ಪರಿಹಾರ ಎಂದು ಹೊಲದವರೊಂದಿಗೆ ಮಾತಾಡಿ ಎಸ್‌ಡಿಎಂಸಿಯಿಂದ ಊರಿನಲ್ಲಿ ದೇಣಿಗೆ ಎತ್ತಿ ಕೊಡುತ್ತಿದ್ದೆವು. ಆದರೆ ಕೊಡುವವರು ಎಷ್ಟು ಸಾರಿ ಕೊಡುತ್ತಾರೆ? ಈಗ ಅದೂ ನಿಂತಿದೆ. ರಸ್ತೆ ನಿರ್ಮಾಣ ಮಾತ್ರ ಅದಕ್ಕೆ ಶಾಶ್ವತ ಪರಿಹಾರ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT