ಶುಕ್ರವಾರ, ಸೆಪ್ಟೆಂಬರ್ 20, 2019
21 °C
ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಐಎಫ್‌ಎಸ್ ಅಧಿಕಾರಿ ಅವತಾರ್ ಸಿಂಗ್ ಆತ್ಮಹತ್ಯೆ

Published:
Updated:
Prajavani

ಬೆಂಗಳೂರು: ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್‌) ಅವತಾರ್ ಸಿಂಗ್ (52) ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರಿಯಾಣದ ಅವತಾರ್ ಸಿಂಗ್, 1990ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ. ಮಲ್ಲೇಶ್ವರದ ಅರಣ್ಯ ಭವನದಲ್ಲಿರುವ ‘ಅರಣ್ಯ ಸಂಪನ್ಮೂಲ ನಿರ್ವಹಣೆ’ ವಿಭಾಗದಲ್ಲಿ ಎಪಿಸಿಸಿಎಫ್‌ ಆಗಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಯಲಹಂಕ ನ್ಯೂಟೌನ್ ಬಳಿಯ ‘ಪ್ರೆಸ್ಟೀಜ್ ಮಾಂಟೆಕಾರ್ಲೊ’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಾಸವಿದ್ದರು.

ಆತ್ಮಹತ್ಯೆ ಸಂಬಂಧ ಯಲಹಂಕ ನ್ಯೂಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಕೆಲಸ ಮಾಡಿದ್ದ ಇವರನ್ನು ಜುಲೈ 23ರಂದು ‘ಅರಣ್ಯ ಸಂಪನ್ಮೂಲ ನಿರ್ವಹಣೆ’ ವಿಭಾಗಕ್ಕೆ ವರ್ಗ ಮಾಡಲಾಗಿತ್ತು.

‘ಭಾನುವಾರ ನಸುಕಿನಲ್ಲಿ ವಾಯುವಿಹಾರಕ್ಕೆ ಹೋಗಿದ್ದ ಅವರು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆಗೆ ಬಂದು ತಿಂಡಿ ತಿಂದು ತಮ್ಮ ಕೊಠಡಿಗೆ ಹೋಗಿದ್ದರು. ಬೆಡ್‌ಶೀಟ್‌ ಹಾಗೂ ವೈರ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 10.30ರ ಸುಮಾರಿಗೆ ಪತ್ನಿ ಕೊಠಡಿಗೆ ಹೋದಾಗ ವಿಷಯ ಗೊತ್ತಾಯಿತು. ಈ ಸಂಬಂಧ ಪತ್ನಿ ಹೇಳಿಕೆ ನೀಡಿದ್ದಾರೆ’ ಎಂದು ಯಲಹಂಕ ನ್ಯೂಟೌನ್ ಪೊಲೀಸರು ತಿಳಿಸಿದರು.

‘ಕೊಠಡಿಯಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅವತಾರ್ ಸಿಂಗ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು ಎಂಬುದು ಗೊತ್ತಾಗಿದೆ. ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

Post Comments (+)