ಶನಿವಾರ, ಜೂನ್ 19, 2021
23 °C
ನ್ಯಾಯಾಲಯಕ್ಕೆ ಯು.ವಿ. ಸಿಂಗ್‌ ವರದಿ ಅನುಷ್ಠಾನದ ಮಾಹಿತಿ ನೀಡಲು ಸರ್ಕಾರದ ಸಿದ್ಧತೆ

ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಗಣಿಗಾರಿಕೆ ಅಸ್ತ್ರ ಪ್ರಯೋಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಿಹಾರ್‌ ಜೈಲಿನಿಂದ ಬುಧವಾರ ಬಿಡುಗಡೆ ಆಗಿರುವ ಶಾಸಕ ಡಿ.ಕೆ. ಶಿವಕುಮಾರ್‌ ಮೇಲೆ ರಾಜ್ಯ ಬಿಜೆಪಿ ಸರ್ಕಾರ ಅಕ್ರಮ ಗಣಿಗಾರಿಕೆ ಅಸ್ತ್ರ ಪ್ರಯೋಗಿಸಲಿದೆಯಾ?

ಇಂತಹದ್ದೊಂದು ಸುದ್ದಿ ಸದ್ಯ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ರಾಮನಗರ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಯು.ವಿ. ಸಿಂಗ್ ನೀಡಿದ ವರದಿ ಅನುಷ್ಠಾನ ಮಾಡಿರುವ ಬಗ್ಗೆ ನವೆಂಬರ್‌ 30ರ ಒಳಗೆ ಮಾಹಿತಿ ನೀಡುವಂತೆ ಹೈಕೋರ್ಟ್‌ ಈಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದಕ್ಕೆ ಸರ್ಕಾರ ಉತ್ತರ ಇಲ್ಲವೇ ಆಕ್ಷೇಪ ಸಲ್ಲಿಸಬೇಕಿದೆ. ಸರ್ಕಾರ ಸೂಕ್ತ ಉತ್ತರ ನೀಡದೇ ಹೋದಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ದೂರುದಾರರು ಒತ್ತಾಯಿಸುವ ಸಾಧ್ಯತೆಯೂ ಇದೆ.

ಯು.ವಿ. ಸಿಂಗ್‌ ವರದಿ ಅನುಷ್ಠಾನಕ್ಕೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕನಕಪುರದ ಸಾಮಾ ಜಿಕ ಹೋರಾಟಗಾರ ಎ.ಸಿ. ಶಿವರಾಜು ಹಾಗೂ ರೈತ ಮುಖಂಡ ಬಿ.ಸಿ. ನಾರಾಯಣಸ್ವಾಮಿ ಎಂಬುವರು 2013ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಏನಿದು ವರದಿ?: ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಸಂದ ರ್ಭದಲ್ಲಿ ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ಕುರಿತ ತನಿಖೆಗಾಗಿ ಐಎಫ್‌ಎಸ್ ಅಧಿಕಾರಿ ಯು.ವಿ. ಸಿಂಗ್ ನೇತೃತ್ವದ ತಂಡವನ್ನು ರಚನೆ ಮಾಡಿತ್ತು.

ಯು.ವಿ. ಸಿಂಗ್‌ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತಕ್ಕೆ ಎರಡು ವರದಿಗಳನ್ನು ನೀಡಿದ್ದರು. 2006–07ರಲ್ಲಿ ನೀಡಲಾದ ವರದಿ ಯಲ್ಲಿ ರಾಮನಗರ ಜಿಲ್ಲೆಯಲ್ಲಿ ನಡೆ ದಿರುವ ಅಕ್ರಮ ಗ್ರಾನೈಟ್ ಮತ್ತು ಕಲ್ಲು ಗಣಿಗಾರಿಕೆ, ಅದರಿಂದ ಆಗುತ್ತಿರುವ ಅನಾಹುತ, ಪ್ರಾಕೃತಿಕ ಸಂಪತ್ತಿನ ನಷ್ಟವನ್ನು ಉಲ್ಲೇಖಿಸಿದ್ದರು.

ಸುಮಾರು 487 ಕಡೆಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದು ಕಂಡು ಬಂದಿತ್ತು. ಅದರಲ್ಲೂ 189 ಕಡೆ ಅರಣ್ಯದ ಅಂಚಿನಲ್ಲಿಯೇ ಗಣಿಗಾರಿಕೆ ನಡೆಯುತ್ತಿರುವುದಾಗಿ ಉಲ್ಲೇಖಿಸಲಾಗಿತ್ತು. 65 ಕಂಪೆನಿಗಳು ಇದರಲ್ಲಿ ಭಾಗಿಯಾಗಿರುವುದಾಗಿ ಹೇಳಲಾಗಿತ್ತು.

ಡಿ.ಕೆ. ಶಿವಕುಮಾರ್ ಮತ್ತವರ ಕುಟುಂಬದ ಸದಸ್ಯರ ಒಡೆತನದ ಕಂಪನಿಗಳೂ ಇದರಲ್ಲಿ ಸೇರಿವೆ ಎಂದು ವರದಿ ಹೇಳಿತ್ತು. ವರದಿ ಆಧರಿಸಿ 146 ಎಫ್‌ಐಆರ್‌ ಹಾಗೂ 46 ಚಾರ್ಜ್‌ಶೀಟ್‌ಗಳು ದಾಖಲಾಗಿದ್ದವು.

ಆದರೆ ನಂತರ ಬಂದ ಸರ್ಕಾರಗಳು ಯು.ವಿ. ಸಿಂಗ್‌ ವರದಿ ಅನುಷ್ಠಾನಕ್ಕೆ ಆಸಕ್ತಿ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ವರದಿ ಅನುಷ್ಠಾನಕ್ಕೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಆಗಿತ್ತು.

ಯೋಗೇಶ್ವರ್‌ ಉತ್ಸುಕ?

ಡಿಕೆಶಿ ಕುಟಂಬದ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪಗಳ ಬಗ್ಗೆ ನ್ಯಾಯಾಲಯಕ್ಕೆ ದಾಖಲೆಗಳ ಸಲ್ಲಿಕೆಗೆ ಚನ್ನಪಟ್ಟಣದ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಪರೋಕ್ಷವಾಗಿ ನೆರವಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಿಂದೆ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಸಿ.ಪಿ. ಯೋಗೇಶ್ವರ್‌ ಕನಕಪುರದಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಬಂದ್ ಮಾಡಿಸಿದ್ದರು. ಇದು ಸಿಪಿವೈ ಹಾಗೂ ಡಿಕೆಶಿ ನಡುವೆ ತಿಕ್ಕಾಟಕ್ಕೂ ಕಾರಣವಾಗಿತ್ತು. ಅರಣ್ಯ ಸಚಿವರಾಗಿದ್ದಾಗ ತಾವು ಸಂಗ್ರಹಿಸಿದ್ದ ಅಕ್ರಮ ಗಣಿಗಾರಿಕೆಯ ಮಹತ್ವದ ದಾಖಲೆಗಳನ್ನು ಯೋಗೇಶ್ವರ್‌ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಅವರು ಆಗಾಗ್ಗೆ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸುಳಿವು ನೀಡುತ್ತಿದ್ದರಾದರೂ ಯಾವುದೇ ದಾಖಲೆ ಬಿಡುಗಡೆ ಮಾಡಿರಲಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿಯೇ ಹೋರಾಟ ಮಾಡುವುದಾಗಿಯೂ ಹಿಂದೊಮ್ಮೆ ಹೇಳಿದ್ದರು.

***

ಯು.ವಿ. ಸಿಂಗ್ ವರದಿ ಅನು ಷ್ಠಾನಕ್ಕೆ ಆಗ್ರಹಿಸಿ 2013ರಲ್ಲಿ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿ ಸಲಾಗಿತ್ತು. ನ. 30ರ ಒಳಗೆ ವರದಿ ನೀಡುವಂತೆ ಸೂಚಿಸಲಾಗಿದೆ

– ಅಚ್ಚಲು ಶಿವರಾಜು, ದೂರುದಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು