ಅಕ್ರಮ ಅದಿರು: ವರ್ಷ ಕಳೆದರೂ ವಸೂಲಾಗದ ದಂಡ

7
ಮಾರ್ಚ್‌ನಲ್ಲೂ ಏಳು ಪ್ರಕರಣಗಳಲ್ಲಿ ನೋಟಿಸ್‌

ಅಕ್ರಮ ಅದಿರು: ವರ್ಷ ಕಳೆದರೂ ವಸೂಲಾಗದ ದಂಡ

Published:
Updated:
Deccan Herald

ಬೆಂಗಳೂರು: 50 ಸಾವಿರ ಟನ್‌ಗಿಂತ ಕಡಿಮೆ ಪ್ರಮಾಣದ ಅದಿರನ್ನು ಅಕ್ರಮವಾಗಿ ಸಾಗಿಸಿದ ಆರೋಪಕ್ಕೆ ಒಳಗಾಗಿರುವ ಗಣಿ ಉದ್ಯಮಿಗಳಿಂದ ದಂಡ ಕಟ್ಟಿಸಿಕೊಳ್ಳಲು ರಾಜ್ಯ ಸರ್ಕಾರ ವರ್ಷದ ಹಿಂದೆ ಪ್ರಕ್ರಿಯೆ ಆರಂಭಿಸಿದ್ದರೂ ಇದುವರೆಗೆ ನಯಾಪೈಸೆ ವಸೂಲಾಗಿಲ್ಲ.

ಅದಿರು ಅಕ್ರಮವಾಗಿ ಸಾಗಿಸಿರುವ 73 ಪ್ರಕರಣಗಳಲ್ಲಿ ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆ ನಡೆಸುತ್ತಿದ್ದು, 24ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. 

2017ರ ಮಾರ್ಚ್‌ನಲ್ಲಿ 17 ಪ್ರಕರಣಗಳಲ್ಲಿ, ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಏಳು ಪ್ರಕರಣಗಳಲ್ಲಿ ನೋಟಿಸ್‌ ಜಾರಿಯಾಗಿವೆ. ‘ಇದು ಸಿವಿಲ್‌ ಸ್ವರೂಪದ್ದಾಗಿದ್ದು, ಆರೋಪಿಗಳ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಮೊಕದ್ದಮೆಗಳಿಗೆ ಹೊರತಾಗಿರುತ್ತದೆ’ ಎಂದು ಮೂಲಗಳು ತಿಳಿಸಿವೆ.

ಶಾಸಕರಾದ ಆನಂದ್‌ಸಿಂಗ್‌, ನಾಗೇಂದ್ರ ಮತ್ತು ಈ ವ್ಯವಹಾರದಲ್ಲಿ ಭಾಗಿಯಾಗಿರುವ ಸ್ವಸ್ತಿಕ್‌ ನಾಗರಾಜ್‌, ಖಾರದಪುಡಿ ಮಹೇಶ, ಕೆ. ನಾಗರಾಜ್‌ ಸೇರಿದಂತೆ ಅನೇಕರು ದಂಡ ತೆರಬೇಕಿದೆ. ಆದರೆ, ‘ತಮ್ಮ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದಂತೆ ಕೆಲವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಅದನ್ನು ತೆರವುಗೊಳಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ. ತಡೆಯಾಜ್ಞೆ ತೆರವು ಮಾಡದಂತೆ ತೆರೆಮರೆಯಲ್ಲಿ ಒತ್ತಡ ಹೇರಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ಅಕ್ರಮ ಗಣಿಗಾರಿಕೆ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ 2013ರ ಸೆಪ್ಟೆಂಬರ್‌ ತಿಂಗಳಲ್ಲಿ, 50 ಸಾವಿರ ಟನ್‌ಗಿಂತ ಕಡಿಮೆ ಪ್ರಮಾಣದ ಅದಿರು ಅಕ್ರಮ ಸಾಗಣೆ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿ ಆದೇಶಿಸಿತ್ತು. ಅಲ್ಲದೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆಯೂ ಹೇಳಿತ್ತು.

1.82ಕೋಟಿ ಟನ್‌ ಅದಿರನ್ನು ಅಕ್ರಮವಾಗಿ ಸಾಗಿಸಲಾಗಿದ್ದು, ಇದರ ಮೌಲ್ಯ ₹ 133 ಕೋಟಿ ಎಂದು ಅಂದಾಜಿಸಲಾಗಿದೆ. ಗಣಿಗಳಿಂದ ತೆಗೆದ ಅದಿರಿನ ಪ್ರಮಾಣ ಆಧರಿಸಿ ‘ಅದಿರು ಮೌಲ್ಯಮಾಪನ ಸಮಿತಿ’ ನಷ್ಟ ಅಂದಾಜು ಮಾಡಿದೆ. ಈ ಹಣವನ್ನು 2017ರ ಏಪ್ರಿಲ್ ಅಂತ್ಯದೊಳಗೆ ವಸೂಲು ಮಾಡಬೇಕಿತ್ತು. ಈ ಸಂಬಂಧ ಎಸ್‌ಐಟಿಯೂ ಸರ್ಕಾರಕ್ಕೆ ಪತ್ರ ಬರೆದಿತ್ತು.

ರಾಜ್ಯದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ನಡೆದ ಅಕ್ರಮ ಗಣಿ ಹಗರಣ ದೇಶಾದ್ಯಂತ ಸದ್ದು ಮಾಡಿತ್ತು. ಇಂತಹದೇ ಪ್ರಕರಣಗಳಲ್ಲಿ ಒಡಿಶಾ ಸರ್ಕಾರ ಗಣಿ ಉದ್ಯಮಿಗಳ ಆಸ್ತಿ ಮುಟ್ಟುಗೋಲಿಗೆ ಪ್ರಕ್ರಿಯೆ ಆರಂಭಿಸಿದ್ದು, ದಂಡ ವಸೂಲಿಗೆ ಸುಪ್ರೀಂ ಕೋರ್ಟ್‌ ಅಲ್ಲಿನ ಸರ್ಕಾರಕ್ಕೆ ಡಿಸೆಂಬರ್‌ ಅಂತ್ಯದವರೆಗೆ ಗಡುವು ನೀಡಿದೆ. ರಾಜ್ಯಕ್ಕೂ ಈ ಮಾನದಂಡ ಅನ್ವಯ ಆಗುವುದೇ ಎಂಬುದನ್ನು ಪರಿಶೀಲಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಗಳು ತಿಳಿಸಿವೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !