ಮಂಗಳವಾರ, ಅಕ್ಟೋಬರ್ 15, 2019
25 °C

ಅಕ್ರಮ ಕಟ್ಟಡ ತೆರವು: ವರದಿಗೆ ಸೂಚನೆ

Published:
Updated:

ಬೆಂಗಳೂರು: ‘ಶಾಲೆ, ಉದ್ಯಾನ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳನ್ನು ಅಕ್ರಮಿಸಿ ನಿರ್ಮಿಸಲಾಗಿರುವ ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವಿಗೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಪಾಲನೆ ಮಾಡಿರುವ ಬಗ್ಗೆ ಇದೇ 25ರೊಳಗೆ ವರದಿ ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರತಿವಾದಿಯಾದ ಸಾಯಿಬಾಬಾ ಸಾರ್ವಜನಿಕ ಗಣಪತಿ ದೇವಾಲಯ ಟ್ರಸ್ಟ್‌ ಪರ ಪರ ವಕೀಲರು, ‘ಮಾಗಡಿ ರಸ್ತೆಯ ಪೊಲೀಸ್ ವಸತಿ ನಿಲಯ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಸಾಯಿಬಾಬಾ ದೇವಸ್ಥಾನದ ಮುಂದಿನ ಭಾಗವನ್ನು ತೆರವುಗೊಳಿಸುವುದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ’ ಎಂದು ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

‘ಈ ಪ್ರಕರಣದಲ್ಲಿ ಅಡ್ವೊಕೇಟ್‌ ಜನರಲ್‌ ಅಗತ್ಯ ಸಹಕಾರ ನೀಡಬೇಕು’ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಿದೆ.

‘ಸುಪ್ರೀಂ ಕೋರ್ಟ್‌ 2009ರ ಸೆಪ್ಟೆಂಬರ್‌ 29ರಂದು ನೀಡಿರುವ ತೀರ್ಪಿನ ಅನುಸಾರ ಸಾರ್ವಜನಿಕ ಪ್ರದೇಶಗಳಲ್ಲಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ದಿಸೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ವರದಿ ಸಲ್ಲಿಸಿ’ ಎಂದು ನ್ಯಾಯಪೀಠ 2019ರ ಸೆಪ್ಟೆಂಬರ್‌ 5ರಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು.

Post Comments (+)