ಗುರುವಾರ , ಆಗಸ್ಟ್ 22, 2019
23 °C
ಹೈಕೋರ್ಟ್‌ಗೆ ಸರ್ಕಾರದ ಹೇಳಿಕೆ

ಐಎಂಎ ವಂಚನೆ ಪ್ರಕರಣ: ‘ಆಸ್ತಿಯ ವಿಧಿವಿಜ್ಞಾನ ಲೆಕ್ಕ ಪರಿಶೋಧನೆಗೆ ಸಿದ್ಧ’

Published:
Updated:

ಬೆಂಗಳೂರು: ‘ಐಎಂಎ ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಐಎಂಎ ಸುಪರ್ದಿಯಲ್ಲಿರುವ ಸ್ಥಿರ–ಚರಾಸ್ತಿ ಮತ್ತು ನಗದನ್ನು ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆಗೆ ಒಳಪಡಿಸಲು ಸಿದ್ಧ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.‌

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಪತ್ರದಲ್ಲೇನಿದೆ?: ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದೆ-2004 (ಕೆಪಿಐಡಿ) ಅನ್ವಯ ಕ್ರಮ ಕೈಗೊಳ್ಳಲಾಗುತ್ತಿದೆ. ಅನಿಯಂತ್ರಿತ ಠೇವಣಿ ಯೋಜನೆಗಳಿಗೆ ಹೇಗೆ ಹಣ ಹರಿದು ಬರುತ್ತಿತ್ತು ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಸರ್ಕಾರ ಸಿದ್ಧವಿದೆ. ಮುಂದಿನ 15 ದಿನಗಳಲ್ಲಿ ಈ ದಿಸೆಯಲ್ಲಿನ ಆಡಳಿತಾತ್ಮಕ ಪ್ರಕ್ರಿಯೆ ‍ಪೂರ್ಣಗೊಳಿಸಿ 90 ದಿನಗಳಲ್ಲಿ ಮುಕ್ತಾಯಗೊಳಿಸಲಾಗುವುದು’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಪ್ರಕರಣದ ತನಿಖೆ ನಡೆಸುತ್ತಿರುವ ‘ವಿಶೇಷ ತನಿಖಾ ತಂಡ’ (ಎಸ್‌ಐಟಿ) ಈವರೆಗಿನ ತನಿಖಾ ಪ್ರಗತಿಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿತು.

ನೋಟಿಸ್‌: ‘ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮತ್ತು ಹಗರಣದ ಆರೋಪಿ ಬಿ.ಎಂ ವಿಜಯ ಶಂಕರ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಸಮನ್ವಯತೆ ಇರಲಿ: ‘ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಎಸ್‌ಐಟಿ ಪರಸ್ಪರ ಸಮನ್ವಯತೆಯಿಂದ ತನಿಖೆ ನಡೆಸಬೇಕು. ಆಸ್ತಿ ಜಪ್ತಿ ವಿವರಗಳನ್ನು ವಿನಿಮಯ ಮಾಡಿಕೊಳ್ಳಬೇಕು’ ಎಂದು ನ್ಯಾಯಪೀಠ ಸಲಹೆ ನೀಡಿದೆ.

ಪ್ರಕಟಣೆ ನೀಡಿ: ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಹೂಡಿಕೆದಾರರ ಬಳಿ ಯಾವುದಾದರೂ ಮಾಹಿತಿ ಇದ್ದಲ್ಲಿ, ಅದನ್ನು ಒದಗಿಸುವಂತೆ ರಾಜ್ಯದ ಪ್ರಮುಖ ಕನ್ನಡ ಹಾಗೂ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿ’ ಎಂದು ನ್ಯಾಯಪೀಠವು ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿದೆ. ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಲಾಗಿದೆ.

ಮನ್ಸೂರ್ ಖಾನ್ ನ್ಯಾಯಾಂಗ ಬಂಧನಕ್ಕೆ
ಐಎಂಎ ಬಹುಕೋಟಿ ವಂಚನೆ ಹಗರಣದ ಪ್ರಮುಖ ಆರೋಪಿ ಮೊಹಮ್ಮದ್‌ ಮನ್ಸೂರ್ ಖಾನ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇ.ಡಿ ವಶದಲ್ಲಿದ್ದ ಮನ್ಸೂರ್ ಖಾನ್‌ನನ್ನು ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಮುಂದೆ ಗುರುವಾರ ಹಾಜರುಪಡಿಸಲಾಯಿತು.

ವಿಚಾರಣೆ ವೇಳೆ ಮನ್ಸೂರ್ ಖಾನ್ ಪರ ವಕೀಲರು, ‘ಆರೋಪಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು’ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಎಸ್‌ಐಟಿ ಪರ ವಕೀಲರು, ‘ಹೃದಯ ಸಂಬಂಧಿ ಕಾಯಿಲೆಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದೇ ಉತ್ತಮ‌. ವಿಕ್ಟೋರಿಯಾ ಆಸ್ಪತ್ರೆ ಬೇಡ’ ಎಂದು ಪ್ರತಿಪಾದಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ‘ಅಗತ್ಯ ಬಿದ್ದಲ್ಲಿ ಜಯದೇವ ಆಸ್ಪತ್ರೆಗೆ ದಾಖಲು ಮಾಡಿ’ ಎಂದು ಜೈಲು ಅಧಿಕಾರಿಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿದರು.

‘ಆರೋಪಿಯನ್ನು ಎಸ್‌ಐಟಿ ವಶಕ್ಕೆ ನೀಡಬೇಕು. ಇಲ್ಲದೇ ಹೋದರೆ ಇನ್ನುಳಿದ ಆರೋಪಿಗಳ ಸಂವಿಧಾನಬದ್ಧ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದೆ’ ಎಂದು ಈ ಹಿಂದಿನ ವಿಚಾರಣೆ ವೇಳೆ ಪ್ರತಿಪಾದಿಸಿದ್ದ ಎಸ್ಐಟಿ ಪರ ವಕೀಲರು ಈ ಬಾರಿ, ‘ಆರೋಪಿಯನ್ನು ಎಸ್‌ಐಟಿ ವಶಕ್ಕೆ ನೀಡಬೇಕು’ ಎಂಬ ಮನವಿ ಮಾಡದೇ ಇದ್ದುದು ಗಮನಾರ್ಹವಾಗಿತ್ತು.

Post Comments (+)