ಸೋಮವಾರ, ಮಾರ್ಚ್ 8, 2021
22 °C
ಎಸ್‌ಐಟಿ ಕಸ್ಟಡಿಯಲ್ಲಿರುವ ನಾಗರಾಜ್ | ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರತ್ಯೇಕ ಎಫ್‌ಐಆರ್‌

ಐಎಂಎ ಸಮೂಹ ಕಂಪನಿಯಿಂದ ಲಂಚ ಪಡೆದ ಆರೋಪ | ಉಪವಿಭಾಗಾಧಿಕಾರಿ ಬಂಧನ;

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿರುವ ‘ಐಎಂಎ ಸಮೂಹ’ ಕಂಪನಿ ಪರವಾಗಿ ವರದಿ ನೀಡಲು ಲಂಚ ಪಡೆದ ಆರೋಪದಡಿ ಬಂಧಿಸಿರುವ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ವಿರುದ್ಧ ‘ಭ್ರಷ್ಟಾಚಾರ ತಡೆ ಕಾಯ್ದೆ’ ಅಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

‘ರಾಜ್ಯ ಸರ್ಕಾರದ ಸೂಚನೆಯಂತೆ ಕಂಪನಿ ವ್ಯವಹಾರದ ಬಗ್ಗೆ ಎಲ್‌.ಸಿ. ನಾಗರಾಜ್‌ ವಿಚಾರಣೆ ನಡೆಸಿದ್ದರು. ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್ ಅವರಿಂದ ₹ 4.5 ಕೋಟಿ ಲಂಚ ಪಡೆದು, ಕಂಪನಿಗೆ ಅನುಕೂಲ ಆಗುವ ರೀತಿಯಲ್ಲಿ 2019ರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ವರದಿ ನೀಡಿದ್ದರು. ಆ ಬಗ್ಗೆ ಪುರಾವೆ ಕಲೆಹಾಕಿ ನಾಗರಾಜ್‌ ಹಾಗೂ ಲಂಚ ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದ ಗ್ರಾಮ ಲೆಕ್ಕಿಗ ಮಂಜುನಾಥ್‌ ಅವರನ್ನು ಇತ್ತೀಚೆಗೆ ಬಂಧಿಸಲಾಗಿದೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿ ವಿರುದ್ಧ ಲಂಚ ಪಡೆದ ಆರೋಪವಿದ್ದು, ಇದು ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಎಸಿಬಿಗೆ ವಹಿಸಲು ತೀರ್ಮಾನಿಸಲಾಗಿದೆ. ಸೋಮವಾರವೇ ಎಸಿಬಿ ಅಧಿಕಾರಿಗಳಿಗೆ ಎಲ್ಲ ದಾಖಲೆಗಳನ್ನು ಹಸ್ತಾಂತರಿಸಲಿದ್ದೇವೆ’ ಎಂದು ಹೇಳಿದರು.

‘ನಾಗರಾಜ್‌ ಸದ್ಯ ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ಎಸಿಬಿ ಅಧಿಕಾರಿಗಳು, ಎಫ್‌ಐಆರ್‌ ದಾಖಲಿಸಿದ ಬಳಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅವರನ್ನು ಕಸ್ಟಡಿಗೆ ಪಡೆಯಲಿದ್ದಾರೆ’ ಎಂದರು.

‘ನಾಗರಾಜ್ ವಿರುದ್ಧ ಹಲವರಿಂದ ದೂರು’
’ಉಪವಿಭಾಗಾಧಿಕಾರಿ ಆಗಿರುವ ನಾಗರಾಜ್ ವಿರುದ್ಧ ಹಲವು ದೂರು ಗಳು ಕೇಳಿ ಬರುತ್ತಿವೆ. ಎಸ್‌ಐಟಿ ತಂಡವು ಐಎಂಎ ವಿರುದ್ಧದ ಪ್ರಕರಣದ ತನಿಖೆಯನ್ನು ಮಾತ್ರ ನಡೆಸುತ್ತಿದ್ದು, ಸಂಬಂಧ ಪಟ್ಟ ಠಾಣೆಗೆ ಅಥವಾ ಎಸಿಬಿಗೆ ಹೋಗಿ ದೂರು ನೀಡುವಂತೆ ಅವರಿಗೆ ಹೇಳಿ ಕಳುಹಿಸುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದರು.

ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಶಾಮೀಲು
‘ಐಎಂಎ ಸಮೂಹ ಕಂಪನಿಯ ವಂಚನೆ ಸುಳಿವು ರಾಜ್ಯ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು. ಅದೇ ಕಾರಣಕ್ಕೆ ಉಪವಿಭಾಗಾಧಿಕಾರಿಗೆ ವಿಚಾರಣೆ ನಡೆಸಲು ಹೇಳಿತ್ತು. ಆದರೆ, ಉಪವಿಭಾಗಾಧಿಕಾರಿ ಸರಿಯಾಗಿ ವಿಚಾರಣೆ ನಡೆಸದಿದ್ದರಿಂದ ಸಾವಿರಾರು ಜನರಿಗೆ ಇದೀಗ ವಂಚನೆಯಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಪ್ರಕರಣದಲ್ಲಿ ಮತ್ತಷ್ಟು ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಶಾಮೀಲಾಗಿರುವ ಮಾಹಿತಿ ಇದೆ. ಅವರೆಲ್ಲರಿಗೂ ನೋಟಿಸ್‌ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು