ಐಎಂಎ: ಬಿಡಿಎ ಎಂಜಿನಿಯರ್ ಬಂಧನ

ಸೋಮವಾರ, ಜೂಲೈ 22, 2019
27 °C
ಮನ್ಸೂರ್ ಖಾನ್‌ರಿಂದ ₹ 4 ಕೋಟಿ ಪಡೆದ ಆರೋಪ * ಮನೆ ಮೇಲೆ ಎಸ್‌ಐಟಿ ಅಧಿಕಾರಿಗಳ ದಾಳಿ

ಐಎಂಎ: ಬಿಡಿಎ ಎಂಜಿನಿಯರ್ ಬಂಧನ

Published:
Updated:
Prajavani

ಬೆಂಗಳೂರು: ‘ಐಎಂಎ ಸಮೂಹ’ ಕಂಪನಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಡಿ. ಕುಮಾರ್ ಅವರನ್ನು ಸೋಮವಾರ ಬಂಧಿಸಿದ್ದಾರೆ.

ಜಯನಗರದ 5ನೇ ಹಂತದಲ್ಲಿರುವ ಕುಮಾರ್ ಅವರಿಗೆ ಸೇರಿದ್ದ ಫ್ಲ್ಯಾಟ್‌ ಮೇಲೆ ಸೋಮವಾರ ಬೆಳಿಗ್ಗೆ ದಾಳಿ ಮಾಡಿದ ಎಸ್‌ಐಟಿ ಅಧಿಕಾರಿಗಳ ತಂಡ, ಕೆಲ ದಾಖಲೆಗಳನ್ನು ಜಪ್ತಿ ಮಾಡಿತು. ದಾಳಿ ವೇಳೆಯೇ ಕುಮಾರ್‌ ಅವರನ್ನು ವಶಕ್ಕೆ ಪಡೆದು ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿತು.

‘ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮನ್ಸೂರ್ ಖಾನ್ ಅವರಿಂದ ₹ 4 ಕೋಟಿ ಪಡೆದಿರುವ ಆರೋಪ ಕುಮಾರ್  ಮೇಲಿದೆ. ಹೀಗಾಗಿ, ಅವರ ಮನೆಯ ಮೇಲೆ ದಾಳಿ ಮಾಡಲಾಯಿತು. ಕೆಲ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಸಮೂಹ ಕಂಪನಿ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದ ಮನ್ಸೂರ್‌ ಖಾನ್, ಆಡಿಯೊ ಹಾಗೂ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ‘ಬಿಡಿಎ ಕುಮಾರ್‌ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆದುಕೊಂಡಿದ್ದಾನೆ. ಅದರಿಂದ ನಾನು ನಷ್ಟ ಅನುಭವಿಸಿದೆ’ ಎಂದು ಮನ್ಸೂರ್ ಆರೋಪಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ಆಡಿಯೊ ಹಾಗೂ ವಿಡಿಯೊ ಪರಿಶೀಲನೆ ನಡೆಸಿದಾಗ ಕೆಲವು ಪುರಾವೆಗಳು ಸಿಕ್ಕಿದ್ದವು. ಅದನ್ನು ಆಧರಿಸಿ ನ್ಯಾಯಾಲಯದ ಅನುಮತಿ ಪಡೆದು ಮನೆ ಮೇಲೆ ದಾಳಿ ಮಾಡಲಾಗಿದೆ. ಈಗ ಕುಮಾರ್ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರಲಿದ್ದೇವೆ’ ಎಂದು ಮೂಲಗಳು ತಿಳಿಸಿವೆ.

₹ 70 ಲಕ್ಷ ಮೊತ್ತದ ಔಷಧಿ ಜಪ್ತಿ

‘ಐಎಂಎ ಸಮೂಹ’ ಕಂಪನಿ ಒಡೆತನದ ಫ್ರಂಟ್‌ಲೈನ್ ಫಾರ್ಮಾ ಹೆಸರಿನ ಮೂರು ಮಳಿಗೆಗಳ ಮೇಲೆ ಸೋಮವಾರ ದಾಳಿ ಮಾಡಿದ ಎಸ್‌ಐಟಿ ಅಧಿಕಾರಿಗಳು, ₹ 70 ಲಕ್ಷ ಮೊತ್ತದ ಔಷಧಿಗಳು ಹಾಗೂ ₹ 4.40 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

‘ಬೆಂಗಳೂರಿನ ಕ್ವೀನ್ಸ್ ರಸ್ತೆ, ಸೆಪಿಂಗ್ ರಸ್ತೆ ಹಾಗೂ ವಸಂತನಗರದಲ್ಲಿರುವ ಫ್ರಂಟ್‌ಲೈನ್ ಫಾರ್ಮಾ ಮಳಿಗೆಗಳ ಮೇಲೆ ದಾಳಿ ಮಾಡಲಾಯಿತು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !