ಭಾನುವಾರ, ಸೆಪ್ಟೆಂಬರ್ 22, 2019
27 °C
ಸಿಬಿಐ ತನಿಖೆ ನಡೆಸುವ ನಿರ್ಧಾರ

ಐಎಂಎ ಸಮೂಹ ಕಂಪನಿಗಳ ವಂಚನೆ ಪ್ರಕರಣ l ಅಧಿಕಾರಿಗಳ ಸಲಹೆಗೆ ಕಿವಿಗೊಡದ ಸರ್ಕಾರ?

Published:
Updated:

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿಗಳ ಬಹುಕೋಟಿ ವಂಚನೆ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುವ ಮೂಲಕ ಕೆಲವು ಹಿರಿಯ ಅಧಿಕಾರಿಗಳ ಸಲಹೆಯನ್ನು ಕಡೆಗಣಿಸಿರುವ ಸಂಗತಿ ಬಯಲಾಗಿದೆ.

ರಾಜ್ಯದ ಬಹುದೊಡ್ಡ ಹಗರಣ ಎಂದೇ ಭಾವಿಸಲಾಗಿರುವ ವಂಚನೆ ಪ್ರಕರಣದ ತನಿಖೆಯನ್ನು ಯಾವ ಸಂಸ್ಥೆಯಿಂದ ನಡೆಸಬೇಕು; ಯಾವ ಕಾಯ್ದೆಯಡಿ ಕೈಗೊಳ್ಳಬೇಕು ಎಂಬ ಬಗ್ಗೆ ಸುದೀರ್ಘವಾದ ಚರ್ಚೆ ನಡೆದು, ‘ಕರ್ನಾಟಕ ಠೇವಣಿದಾರರ ಹಿತ ಸಂರಕ್ಷಣಾ ಕಾಯ್ದೆಯಡಿ (ಕೆಪಿಐಡಿ) ತನಿಖೆ ನಡೆಯಬೇಕು’ ಎಂದು ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದರು. ಈ ಸಲಹೆಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತೂ ನೀಡಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಣಕಾಸು, ಗೃಹ ಮತ್ತು ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹೆಚ್ಚುಕಡಿಮೆ ಒಂದು ತಿಂಗಳು ಚರ್ಚೆ ನಡೆಸಿದ್ದರು. ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಅನಿಯಂತ್ರಿತ ಠೇವಣಿ ಸಂಗ್ರಹ ನಿಷೇಧ ಕಾಯ್ದೆ (ಬಿಯುಡಿಎಸ್‌) ಅಥವಾ ಕರ್ನಾಟಕ ಹೂಡಿಕೆದಾರರ ಹಿತ ಸಂರಕ್ಷಣಾ ಕಾಯ್ದೆ– ಇವೆರಡರಲ್ಲಿ ಯಾವುದರಡಿ ತನಿಖೆ ನಡೆಯಬೇಕು ಎಂಬ ಗೊಂದಲ ತಲೆದೋರಿತ್ತು.

‘ಬಿಯುಡಿಎಸ್‌ ಜುಲೈ 31ರಂದು ಕಾಯ್ದೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಮೊದಲು ಇದು ಸುಗ್ರೀವಾಜ್ಞೆ ರೂಪದಲ್ಲಿತ್ತು. ಹೊಸ ಕಾಯ್ದೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇನ್ನೂ ನಿಯಮಾವಳಿ ರೂಪಿಸಿಲ್ಲ. ರಾಜ್ಯದಲ್ಲಿ ಈಗಾಗಲೇ ಕೆಪಿಐಡಿ ಕಾಯ್ದೆಯಡಿ ಕೆಲವು ಪ್ರಕರಣಗಳನ್ನು ದಾಖಲಿಸಿ, ಪರಿಣಾಮಕಾರಿಯಾಗಿ ತನಿಖೆ ನಡೆಸಲಾಗಿದೆ. ರಾಜ್ಯದ ಅಧಿಕಾರಿಗಳೂ ಇಂಥ ಪ್ರಕರಣಗಳ ನಿರ್ವಹಣೆಯಲ್ಲಿ ಸಾಕಷ್ಟು ಪರಿಣತಿ ಹೊಂದಿದ್ದಾರೆ’ ಎಂಬ ನಿಲುವು ವ್ಯಕ್ತವಾಗಿತ್ತು.

ಅಲ್ಲದೆ, ರಾಜ್ಯದ ತನಿಖಾಧಿಕಾರಿಗಳು ‘ಐಎಂಎ ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ಅವರನ್ನು ದುಬೈನಿಂದ ಕರೆತಂದು ಬಂಧಿಸಿ, ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ತನಿಖೆಯಲ್ಲೂ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಈ ಹಂತದಲ್ಲಿ ಸಿಬಿಐಗೆ ಒಪ್ಪಿಸುವುದು ಸರಿಯಲ್ಲ’ ಎಂಬ  ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದರು.

ಅಧಿಕಾರಿಗಳ ಸುದೀರ್ಘ ಚರ್ಚೆ ನಡುವೆಯೇ, ಸರ್ಕಾರ ಆಗಸ್ಟ್‌ 19ರಂದು ಐಎಂಎ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ತೀರ್ಮಾನ ಕೈಗೊಂಡಿತು. ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಿತು. ಇದಾದ ಬಳಿಕ, ತನಿಖೆಯನ್ನು ಯಾವ ಕಾಯ್ದೆಯಡಿ ನಡೆಸಬೇಕೆಂಬ ತೀರ್ಮಾನವನ್ನು ತನಿಖಾ ಸಂಸ್ಥೆಗೆ ಬಿಡುವುದು ಸೂಕ್ತ ಎಂದು ಗೃಹ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದರು.

ಈ ಪ್ರಕರಣದ ತನಿಖೆಯನ್ನು ಮಾತ್ರ ಸಿಬಿಐಗೆ ಒಪ್ಪಿಸಲಾಗಿದೆ. ಆದರೆ, ಕಂಪನಿಯ ಲಭ್ಯವಿರುವ ಆಸ್ತಿಪಾಸ್ತಿ ಹಾಗೂ ಹಣವನ್ನು ವಶಪಡಿಸಿಕೊಂಡು ಠೇವಣಿದಾರರಿಗೆ ಹಿಂತಿರುಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿವರವಾದ ಟಿಪ್ಪಣಿ ಸಿದ್ಧಪಡಿಸಿ, ಹಣಕಾಸು ಇಲಾಖೆಗೆ ಕಳುಹಿಸುವಂತೆ ಗೃಹ ಇಲಾಖೆಯ ಮತ್ತೊಬ್ಬ ಹಿರಿಯ ಅಧಿಕಾರಿ ಸೂಚಿಸಿದ್ದರು.

 

Post Comments (+)