ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ: ಏಳು ನಿರ್ದೇಶಕರ ಸೆರೆ

20 ಸಾವಿರ ದೂರು ದಾಖಲು * ಡಿಐಜಿ ರವಿಕಾಂತೇಗೌಡ ಎಸ್‌ಐಟಿ ಮುಖ್ಯಸ್ಥ
Last Updated 13 ಜೂನ್ 2019, 1:01 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿ, ಜನರಿಗೆ ವಂಚಿಸಿರುವ ‘ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿ’ಯ ಏಳು ನಿರ್ದೇಶಕರನ್ನು ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಡಿಐಜಿ ಬಿ.ಆರ್. ರವಿಕಾಂತೇಗೌಡ ಅವರನ್ನು ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸಿದೆ.

ಕಂಪನಿಯಲ್ಲಿ ಹಣ ಹೂಡಿರುವ 20ಸಾವಿರಕ್ಕೂ ಹೆಚ್ಚು ಜನ ತಮಗೆ ಹಣ ಬರಬೇಕು ಎಂದು ದೂರು ದಾಖಲಿಸಿದ್ದಾರೆ. ಗುರುವಾರವೂ ದೂರು ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ. ನೆರೆಯ ರಾಜ್ಯಗಳು ಹಾಗೂ ಹೊರ ದೇಶಗಳವರೂ ಕಂಪನಿಯಲ್ಲಿ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದು, ಅವರೆಲ್ಲ ಕುಟುಂಬ ಸಮೇತವಾಗಿ ನಗರಕ್ಕೆ ಬಂದು ದೂರು ನೀಡುತ್ತಿದ್ದಾರೆ. ಮದುವೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ–ಹೀಗೆ ಹಲವು ಉದ್ದೇಶಕ್ಕಾಗಿ ಹಣ ಹೂಡಿಕೆ ಮಾಡಿದ್ದ ಜನ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ಸಾವಿರಾರು ದೂರುಗಳು ದಾಖಲಾಗುತ್ತಿದ್ದಂತೆ ಜಾಗೃತರಾದ ಪೊಲೀಸರು ಕಂಪನಿಯ ನಿರ್ದೇಶಕರಾದ ನಿಜಾಮುದ್ದೀನ್ ಖಾನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ಅರ್ಷದ್‌ ಖಾನ್, ಅನ್ಸರ್ ಪಾಷಾ, ವಾಸೀಂ, ದಾದಾಪೀರ್ ಅವರನ್ನು ಬಂಧಿಸಿದ್ದಾರೆ. ಕಂಪನಿ ಮಾಲೀಕ ಮಹಮದ್ ಮನ್ಸೂರ್‌ ಖಾನ್ ಬಳಸುತ್ತಿದ್ದರೇಂಜ್ ರೋವರ್ ಹಾಗೂ ಜಾಗ್ವಾರ್ ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಖಾನ್‌ ದುಬೈಯಲ್ಲಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಕೈ ವಾಕ್‌ ನಿರ್ಮಾಣದಲ್ಲಿ ಪಾಲುದಾರಿಕೆ: ವಿವಿಧ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿರುವ ಕಂಪನಿ ಬೆಂಗಳೂರು ನಗರದಲ್ಲಿ ಜಂಟಿ ಪಾಲುದಾರಿಕೆಯಲ್ಲಿ ನಡೆಯುತ್ತಿರುವ 14 ‘ಸ್ಕೈ ವಾಕ್‌’ ನಿರ್ಮಾಣ ಕಾಮಗಾರಿಯಲ್ಲೂ ಐಎಂಎ ಭಾಗಿಯಾಗಿದೆ. ಈಗಾಗಲೇ ಎರಡು ಸ್ಕೈ ವಾಕ್‌ಗಳು ಪೂರ್ಣಗೊಂಡಿವೆ. ನಿರ್ಮಾಣ, ನಿರ್ವಹಣೆ ಹಾಗೂ ವರ್ಗಾವಣೆ (ಬಿಒಟಿ) ಆಧಾರದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಹಣ‍ಪಡೆದಿಲ್ಲ: ಈ ಮಧ್ಯೆ, ವಂಚನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಶಿವಾಜಿ ನಗರದ ಕಾಂಗ್ರೆಸ್‌ ಶಾಸಕ ಆರ್‌. ರೋಷನ್‌ ಬೇಗ್‌, ‘ಕಂ‍ಪನಿ ಮಾಲೀಕ ಖಾನ್‌ ಅವರಿಂದ ತಾವಾಗಲೀ ಅಥವಾ ತಮ್ಮ ಮಗನಾಗಲೀ ಹಣ ಪಡೆದಿಲ್ಲ’ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.

‘ವಂಚನೆ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿರುವುದನ್ನು ಸ್ವಾಗತಿಸುತ್ತೇನೆ. ಸಿಬಿಐಗೆ ಒಪ್ಪಿಸಿದರೂ ಅಭ್ಯಂತರವಿಲ್ಲ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ’ ಎಂದರು.

ಚಿನ್ನ ಅಡವಿಟ್ಟಿರುವ 500ಕ್ಕೂ ಹೆಚ್ಚು ಜನ

ಹಣ ಹೂಡಿಕೆ ಮಾತ್ರವಲ್ಲದೇ 500ಕ್ಕೂ ಹೆಚ್ಚು ಮಂದಿ, ‘ಐಎಂಎ ಗೋಲ್ಡ್‌ ಲೋನ್’ ಮಳಿಗೆಯಲ್ಲಿ ಚಿನ್ನ ಅಡವಿಟ್ಟಿದ್ದಾರೆ. ಅವರಿಗೂ ವಂಚನೆಯಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

‘ವ್ಯಾಪಾರ ಮಾಡಲು ಹಣ ಬೇಕಿತ್ತು. 50 ಗ್ರಾಂ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದೆ. ಮಳಿಗೆಗೆ ಬೀಗ ಹಾಕಿದ್ದರಿಂದ ಆತಂಕವಾಗಿದೆ. ಪೊಲೀಸರು ನಮ್ಮ ಚಿನ್ನವನ್ನು ವಾಪಸ್ ಕೊಡಿಸಬೇಕು’ ಎಂದು ರಿಯಾಜ್ ಅಹ್ಮದ್ ಹೇಳಿದರು.

ದುಬೈನಲ್ಲಿ ಖಾನ್?

ಐಎಂಎ ಮಾಲೀಕ ಮನ್ಸೂರ್ ಖಾನ್ ಜೂನ್‌ 8ರಂದೇ ದುಬೈಗೆ ಹೋಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಜಯನಗರ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿ ಪಡೆದಿದ್ದ ಗನ್‌ ಲೈಸೆನ್ಸ್‌ನ್ನು ಕಳೆದ ತಿಂಗಳು ಖಾನ್ ವಾಪಸ್ ಕೊಟ್ಟಿದ್ದಾರೆ. ಕಂಪನಿ ಮುಚ್ಚುವ ಉದ್ದೇಶವಿತ್ತು ಎಂಬ ಸಂಗತಿ ಇದರಿಂದ ಗೊತ್ತಾಗುತ್ತದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ದುಬೈನ ಯಾವ ಸ್ಥಳದಲ್ಲಿ ಖಾನ್ ಇದ್ದಾರೆ ಎಂಬುದು ಗೊತ್ತಾಗಿಲ್ಲ. ವಿದೇಶಾಂಗ ಇಲಾಖೆ ಮೂಲಕ ದುಬೈ ಸರ್ಕಾರದಿಂದ ಮಾಹಿತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ’ ಎಂದರು ಅವರು.

ಅಲೆಮಾರಿಗಳ ₹70 ಲಕ್ಷ ವಂಚಕರ ಪಾಲು

ಜೇನು ಕೀಳುವ ಕಾಯಕ ನಂಬಿ ಬದುಕು ಕಟ್ಟಿಕೊಂಡಿದ್ದ ಒಡಿಶಾದ ಅಲೆಮಾರಿಗಳು, ತಮ್ಮೂರಿನಲ್ಲಿದ್ದ ಜಮೀನು ಮಾರಿ ಬಂದಿದ್ದ ₹ 70 ಲಕ್ಷ ಹಣವನ್ನು ‘ಐಎಂಎ’ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಹಣ ವಂಚಕರ ಪಾಲಾಗಿದೆ.

‘ಒಡಿಶಾದಲ್ಲಿ ನೆರೆಹಾವಳಿಗೆ ಮನೆ ಹಾಗೂ ಬೆಳೆಯೆಲ್ಲ ನಾಶವಾಯಿತು. ಅಲ್ಲಿಯ ಜಮೀನು ಮಾರಿ ನಗರಕ್ಕೆ ಬಂದೆವು. ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಆಸೆಯಿಂದ ₹ 70 ಲಕ್ಷವನ್ನು 2014ರಲ್ಲಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದೆವು’ ಎಂದು ಅಲೆಮಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.

‘ಪ್ರತಿ ತಿಂಗಳ ಬದಲು ಐದು ವರ್ಷದ ನಂತರ ಹಣ ವಾಪಸ್ ಪಡೆದರೆ ₹ 1.40 ಕೋಟಿ ಬರುತ್ತದೆ ಎಂದು ಕಂಪನಿಯ ಪ್ರತಿನಿಧಿಗಳು ಹೇಳಿದ್ದರು. ಅದನ್ನು ನಂಬಿ 5 ವರ್ಷದ ಒಪ್ಪಂದ ಮಾಡಿಕೊಂಡಿದ್ದೆವು. ಜೂನ್ 15ರಂದು ಹಣ ಬರಬೇಕಿತ್ತು’ ಎಂದು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT