ಗುರುವಾರ , ಫೆಬ್ರವರಿ 25, 2021
31 °C

ಐಎಂಎ: ಎಸ್‌ಎಫ್‌ಐಒ ತನಿಖೆ

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನ್ಸೂರ್‌ ಖಾನ್‌ ಒಡೆತನದ ಐಎಂಎ ಸಮೂಹ ಕಂಪನಿಗಳ ಬಹುಕೋಟಿ ವಂಚನೆ ಪ್ರಕರಣ ಕುರಿತು ಕೇಂದ್ರ ಕಾರ್ಪೊರೇಟ್‌ ಸಚಿವಾಲಯದ ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್‌ಎಫ್‌ಐಒ) ತನಿಖೆ ನಡೆಸಲಿದೆ.

ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ (ಆರ್‌ಒಸಿ) ಬೆಂಗಳೂರು ಕಚೇರಿಯ ಶಿಫಾರಸು ಆಧರಿಸಿ ಎಸ್‌ಎಫ್‌ಐಒ ತನಿಖೆ ನಡೆಯುತ್ತಿದೆ. ಒಮ್ಮೆ ಎಸ್‌ಎಫ್‌ಐಒ ತನಿಖೆ ಆರಂಭವಾದರೆ, ಈ ಪ್ರಕರಣ ಕುರಿತು ಕೇಂದ್ರ ಇಲ್ಲವೆ ರಾಜ್ಯ ಸರ್ಕಾರದ ಬೇರೆ ಯಾವ ತನಿಖಾ ಸಂಸ್ಥೆಗಳೂ ತನಿಖೆ ನಡೆಸುವಂತಿಲ್ಲ. ತನಿಖೆ ನಡೆಯುತ್ತಿರುವ ಪ್ರಕರಣಗಳನ್ನು ಎಸ್‌ಎಫ್‌ಐಒಗೆ ವರ್ಗಾಯಿಸಬೇಕಾಗುತ್ತದೆ.

ಐಎಂಎ ವಂಚನೆ ಕುರಿತು ರಾಜ್ಯ ಪೊಲೀಸ್‌ ವಿಶೇಷ ತನಿಖಾ ದಳ (ಎಸ್‌ಐಟಿ) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ಈಗಾಗಲೇ ನಡೆಯುತ್ತಿದೆ. ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ಸದ್ಯ ಎಸ್‌ಐಟಿ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಇದಕ್ಕೂ ಮೊದಲು ಇ.ಡಿ, ಬಂಧಿತ ಆರೋಪಿಯ ವಿಚಾರಣೆ ನಡೆಸಿತ್ತು.

’ಎಸ್‌ಐಟಿ, ಇ.ಡಿ ತನಿಖೆ ಜತೆಗೇ ಎಸ್‌ಎಫ್‌ಐಒ ತನಿಖೆ ನಡೆಯಲಿದೆ’ ಎಂದು ಮೂಲಗಳು ತಿಳಿಸಿದ್ದರೂ, ಕಂಪನಿ ಕಾಯ್ದೆ– 2013ರ ಸೆಕ್ಷನ್‌ 212 (2) ರ ಅನ್ವಯ ಇದಕ್ಕೆ ಅವಕಾಶವಿಲ್ಲ. ಈ ಕಂಪನಿ ವಂಚನೆ ಕುರಿತು ತನಿಖೆ ಆರಂಭವಾಗಿದೆಯೇ; ತನಿಖಾಧಿಕಾರಿಗಳು ನೇಮಕವಾಗಿದ್ದಾರೆಯೇ ಎಂದು ತಿಳಿಸಲು ದೆಹಲಿಯ ಎಸ್‌ಎಫ್‌ಐಒ ನಿರ್ದೇಶಕರ ಕಚೇರಿ ನಿರಾಕರಿಸಿದೆ.

ಎಸ್‌ಎಫ್‌ಐಎ 2003ರಲ್ಲೇ ಸ್ಥಾಪನೆಯಾಗಿದ್ದು, ಪ್ರತಿಷ್ಠಿತ ಕಾರ್ಪೊರೇಟ್‌ ಕಂಪನಿಗಳ ವಂಚನೆಯೂ ಸೇರಿದಂತೆ 350ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ನಡೆಸುತ್ತಿದೆ. ಹಣಕಾಸು, ಲೆಕ್ಕಪತ್ರ ತಪಾಸಣೆ, ಕಸ್ಟಮ್ಸ್‌, ತೆರಿಗೆ, ಕಾನೂನು, ಷೇರು ಮಾರುಕಟ್ಟೆ, ಹಾಗೂ ತನಿಖಾ ಕ್ಷೇತ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವನ್ನು ತನಿಖೆಗೆ ನೇಮಿಸಲಾಗುತ್ತದೆ. ತನಿಖಾಧಿಕಾರಿಗೆ ಇನ್‌ಸ್ಪೆಕ್ಟರ್‌ ಅಧಿಕಾರ ಇದ್ದು, ಆರೋಪಿಯನ್ನು ಬಂಧಿಸಬಹುದಾಗಿದೆ.

ಕಳೆದ ಅಕ್ಟೋಬರ್‌ ಮೊದಲ ವಾರ ಸೇರಿದ್ದ ರಾಜ್ಯ ಮಟ್ಟದ ಸಮನ್ವಯ ಸಮಿತಿಯ ಉಪ ಸಮಿತಿ (ಎಸ್‌ಎಸ್‌ಎಲ್‌ಸಿ– ಎಸ್‌ಸಿ) ಸಭೆಯಲ್ಲಿ, ಕಂಪನಿ ಕಾಯ್ದೆಯಲ್ಲಿರುವ ಕೆಲವು ಅಂಶಗಳನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಕಾರ್ಪೊರೇಟ್‌ ಸಚಿವಾಲಯದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವಂತೆ ಆರ್‌ಒಸಿಗೆ ಸೂಚಿಸಲಾಗಿತ್ತು. ಆನಂತರ ಪ್ರಕರಣವನ್ನು ಕಾರ್ಪೊರೇಟ್‌ ಸಚಿ ವಾಲಯದ ಗಮನಕ್ಕೆ ತರಲಾಗಿತ್ತು.

**

ವರ್ಷದ ಹಿಂದೆ ಆರ್‌ಒಸಿ ಆಗಿ ಬಂದಿದ್ದೇನೆ. ಆನಂತರ ಏನು ಮಾಡಬೇಕೋ ಎಲ್ಲವನ್ನೂ ಮಾಡಿದ್ದೇನೆ.
- ಸಿ.ವಿ. ಸಂಜೀವನ್‌, ಬೆಂಗಳೂರು ಆರ್‌ಒಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು