ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಪ್ರಕರಣ | ಶಾಸಕ ಜಮೀರ್‌ ವಿಚಾರಣೆ

ಐಪಿಎಸ್‌ ಅಧಿಕಾರಿ ಅಜಯ್‌ ಹಿಲೋರಿಗೆ ನೋಟಿಸ್‌
Last Updated 31 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಂಎ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ಅವರ ಜೊತೆ ತಾವು ಯಾವುದೇ ಅಕ್ರಮ ವ್ಯವಹಾರ ನಡೆಸಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಮನ್ಸೂರ್‌ ಖಾನ್‌ ಒಡೆತನದ ಕಂಪನಿಯ ವಂಚನೆ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿಯು ಜಮೀರ್‌ ಅವರನ್ನು ಬುಧವಾರ ಸುದೀರ್ಘವಾಗಿ ವಿಚಾರಣೆ ನಡೆಸಿತು. ಆದರೆ, ತನಿಖಾಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಅವರು ನಕಾರಾತ್ಮಕವಾಗಿ ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ.

ಶಿವಾಜಿನಗರ ಮಾಜಿ ಶಾಸಕ ಆರ್‌. ರೋಷನ್‌ ಬೇಗ್‌ ಅವರೂ ಬುಧವಾರ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಗೈರಾದರು. ಅವರು ಕಾಲಾವಕಾಶ ಕೇಳಿದ್ದಾರೆ.

‘ರಿಚ್ಮಂಡ್‌ ಟೌನ್‌ನ ಸರ್ಪಂಟೈನ್‌ ರಸ್ತೆಯಲ್ಲಿರುವ ನಿವೇಶನವೊಂದನ್ನು ಮನ್ಸೂರ್‌ ಖಾನ್‌ಗೆ 2017ರ ಡಿಸೆಂಬರ್‌ನಲ್ಲಿ ಮಾರಾಟ ಮಾಡಿದ್ದೇನೆ. ಈ ವ್ಯವಹಾರ ಅತ್ಯಂತ ಪಾರದಶರ್ಕವಾಗಿದೆ. ಆರ್‌ಟಿಜಿಎಸ್‌ ಮೂಲಕವೇ ಅವರಿಂದ ಹಣ ಪಡೆದಿ ದ್ದೇನೆ. ಇದನ್ನು ಬಿಟ್ಟು ಬೇರೆ ಯಾವುದೇ ಹಣ ಪಡೆದಿಲ್ಲ’ ಎಂದೂ ಅವರು ತಿಳಿಸಿ ದ್ದಾರೆ. ‘ತಾವು ನಡೆಸಿದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಲು ಸಿದ್ಧ. ಈಗಾಗಲೇ ಜಾರಿ ನಿರ್ದೇಶನಾಲಯವೂ ತಮ್ಮ ವಿಚಾರಣೆ ನಡೆಸಿದೆ. ಅದಕ್ಕೂ ದಾಖಲೆ ನೀಡಿದ್ದೇನೆ. 2018ರ ವಿಧಾನಸಭೆ ಚುನಾವಣೆ ವೇಳೆ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರ ಹಾಗೂ ಲೋಕಾಯುಕ್ತ ನೀಡಿರುವ ಆಸ್ತಿ ವಿವರದಲ್ಲೂ ನಿವೇಶನ ಮಾರಾಟ ವ್ಯವಹಾರ ಕುರಿತು ಪ್ರಸ್ತಾಪಿಸಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಮೀರ್‌ಗೆ ಮನ್ಸೂರ್‌ ಅಕ್ರಮವಾಗಿ ಹಣ ನೀಡಿದ್ದಾರೆಯೇ ಎಂಬ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ.

ನಾಳೆ ಕೋರ್ಟ್‌ಗೆ ಮನ್ಸೂರ್ ಖಾನ್‌

ಜಾರಿ ನಿರ್ದೇಶನಾಲಯದ (ಇ.ಡಿ) ವಶದಲ್ಲಿರುವ ಮನ್ಸೂರ್‌ ಖಾನ್‌ನನ್ನು ಗುರುವಾರ ಇಲ್ಲಿನ ಸಿಸಿಎಚ್‌– 1 ಕೋರ್ಟ್‌ ಮುಂದೆ ಹಾಜರುಪಡಿಸಲಾಗುತ್ತಿದೆ. ಬಳಿಕ, ಈತನನ್ನು ಎಸ್‌ಐಟಿ ತನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮನ್ಸೂರ್‌ ಖಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕರನ್ನು ಪ್ರಶ್ನಿಸಲಾಗುವುದು. ಜಮೀರ್‌ ಖಾನ್ ಹಾಗೂ ರೋಷನ್‌ ಬೇಗ್‌ ಅವರನ್ನು ಮತ್ತೊಮ್ಮೆ ಕರೆಸಲಾಗುವುದು ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಐಪಿಎಸ್‌ ಅಧಿಕಾರಿ ಅಜಯ್‌ ಹಿಲೋರಿಗೆ ನೋಟಿಸ್‌

ಪೂರ್ವ ವಲಯದ ಡಿಸಿಪಿ ಆಗಿದ್ದ ಅಜಯ್‌ ಹಿಲೋರಿ ಅವರನ್ನು ಎಸ್‌ಐಟಿ ಅಧಿಕಾರಿಗಳು ಐಎಂಎ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಿದ್ದಾರೆ.

ಈ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಯೊಬ್ಬರ ವಿಚಾರಣೆ ನಡೆಯುತ್ತಿರುವುದು ಇದೇ ಮೊದಲು. ಸದ್ಯ, ನಗರ ಸಶಸ್ತ್ರ ಪಡೆಯ ಒಂದನೇ ಬೆಟಾಲಿಯನ್‌ ಕಮಾಂಡೆಂಟ್‌ ಆಗಿರುವ ಹಿಲೋರಿ ಅವರಿಗೆ ಆಗಸ್ಟ್‌ 2ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.

ಅಲ್ಲದೆ, ಪುಲಕೇಶಿ ನಗರದ ಎಸಿಪಿ ಆಗಿದ್ದ ಎಸ್‌. ರಮೇಶ್‌ ಕುಮಾರ್‌ ಹಾಗೂ ಕಮರ್ಷಿಯಲ್‌ ಸ್ಟ್ರೀಟ್‌ ‍ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ಎಂ.ರಮೇಶ್‌ ಅವರಿಗೂ ನೋಟಿಸ್‌ ಕೊಟ್ಟಿದ್ದು, ಕ್ರಮವಾಗಿ ಆಗಸ್ಟ್ 4 ಹಾಗೂ 6ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.

ಐಎಂಎ ಅಕ್ರಮ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಮಾರುಕಟ್ಟೆ ಗುಪ್ತಚರ ವಿಭಾಗ ಕೆಲವು ದಾಖಲೆ ನೀಡಿದ್ದರೂ, ಡಿಸಿಪಿ (ಪೂರ್ವ ವಲಯ) ಸರಿಯಾಗಿ ವಿಚಾರಣೆ ನಡೆಸದೆ ಆರೋಪಿ ಕಂಪನಿಗೆ ಕ್ಲೀನ್‌ ಚಿಟ್‌ ಕೊಟ್ಟು, ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.

ಅಲ್ಲದೆ, ‘ಮನ್ಸೂರ್‌ ಖಾನ್‌ ಒಡೆತನದ ಕಂಪನಿಗಳ ವ್ಯವಹಾರ ಕಾನೂನುಬದ್ಧವಾಗಿ ನಡೆಯುತ್ತಿದೆ’ ಎಂದು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರೂ ಹೇಳಿದ್ದರು. ಈ ಬಗ್ಗೆ ಆರ್‌ಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಸರ್ಕಾರ ಪ್ರಕರಣದ ಮರು ವಿಚಾರಣೆಗೆ ಆದೇಶಿಸಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ್ದ ಅಜಯ್‌ ಹಿಲೋರಿ ವಂಚಕ ಕಂಪನಿಗೆ ‘ಕ್ಲೀನ್‌ ಚಿಟ್‌’ ನೀಡಿ, ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ) ಅವರಿಗೆ ವರದಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT