ಸೋಮವಾರ, ಸೆಪ್ಟೆಂಬರ್ 16, 2019
27 °C

ಬೈಲಹೊಂಗಲದಲ್ಲಿನ ಇಂಚಲದ ಪ್ರತಿ ಮನೆಯಲ್ಲೂ ಶಿಕ್ಷಕರೇ!

Published:
Updated:
Prajavani

ಬೈಲಹೊಂಗಲ: ಶೈಕ್ಷಣಿಕ ಭೂಪಟದಲ್ಲಿ ತನ್ನ ಛಾಪು ಎತ್ತಿ ಹಿಡಿದು ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಪರಂಪರೆಗೆ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವ ತಾಲ್ಲೂಕಿನ ಸುಕ್ಷೇತ್ರ ಇಂಚಲ ಗ್ರಾಮ ‘‌ಶಿಕ್ಷಕರ ತವರೂರು’ ಎಂದೇ ಹೆಸರುವಾಸಿಯಾಗಿದೆ.

ಪಟ್ಟಣದಿಂದ 6 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿ 8ಸಾವಿರ ಜನಸಂಖ್ಯೆ ಇದೆ. 500ಕ್ಕೂ ಹೆಚ್ಚು ಶಿಕ್ಷಕರು, ಉಪನ್ಯಾಸಕರು ಸರ್ಕಾರಿ, ಅನುದಾನಿತ ಶಾಲೆ, ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲೂ ಕೆಲಸ ಕಂಡುಕೊಂಡಿರುವುದು ವಿಶೇಷ.

ಶೈಕ್ಷಣಿಕವಾಗಿ ಹಿಂದುಳಿದಿದ್ದ ಗ್ರಾಮಸ್ಥರಿಗೆ ಅಕ್ಷರ ಜ್ಞಾನ ಕಲಿಸಿದ ಗ್ರಾಮದ ಶಿಯೋಗೀಶ್ವರ ಸಾಧು ಸಂಸ್ಥಾನಮಠದ ಶಿವಾನಂದ ಭಾರತಿ ಸ್ವಾಮೀಜಿ 1957ರಲ್ಲಿ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು. ಆಗ 8 ಜನ ಶಿಕ್ಷಕರಿದ್ದರು. 1984ರಲ್ಲಿ ಗ್ರಾಮೀಣ ಶಿಕ್ಷಕರ ತರಬೇತಿ ಕೇಂದ್ರ (ಟಿಸಿಎಚ್ ಕಾಲೇಜು) ಆರಂಭಿಸಿದರು. ಗ್ರಾಮದ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಉಚಿತ ಶಿಕ್ಷಣ ನೀಡಿದರು. ಉಚಿತ ಪ್ರಸಾದ ನಿಲಯ ಕಲ್ಪಿಸಿದರು. ಶ್ರೀಗಳ ವಿಶೇಷ ಪ್ರಯತ್ನದಿಂದಾಗಿ ಗ್ರಾಮವು ಶೈಕ್ಷಣಿಕವಾಗಿ ಸಾಧನೆ ತೋರಿದೆ.

ಪುಟ್ಟ ಗ್ರಾಮವಾದರೂ ನೂರಾರು ಶಿಕ್ಷಕರನ್ನು ಹೊಂದಿದೆ. ಪ್ರತಿ ಮನೆಯಲ್ಲೂ ಶಿಕ್ಷಕರಿದ್ದಾರೆ. ಐದಾರು ಶಿಕ್ಷಕರಿರುವ ಹಲವು ಕುಟುಂಬಗಳಿವೆ.

‘ಗ್ರಾಮದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ಹೀಗಾಗಿ ಗ್ರಾಮದಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಅಧ್ಯಕ್ಷ ಡಿ.ಬಿ. ಮಲ್ಲೂರ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)