ಸೋಮವಾರ, ಸೆಪ್ಟೆಂಬರ್ 27, 2021
28 °C
ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಾಲಕೃಷ್ಣನ್

ಚುನಾವಣೆ ಸಂದರ್ಭದಲ್ಲಿ ₹ 32 ಕೋಟಿ ನಗದು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಲೋಕಸಭಾ ಚುನಾವಣೆ ವೇಳೆ ರಾಜ್ಯದ ಹಲವೆಡೆ ದಾಳಿ ನಡೆಸಿ ₹ 32 ಕೋಟಿ ಅಕ್ರಮ ನಗದು ಹಾಗೂ ₹ 7 ಕೋಟಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ’ ಎಂದು ಆದಾಯ ತೆರಿಗೆ ಇಲಾಖೆ ಕರ್ನಾಟಕ, ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್. ಬಾಲಕೃಷ್ಣನ್ ತಿಳಿಸಿದರು.

‘2014ರ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ತೆರಿಗೆ ಪಾವತಿಸದೆ ವಂಚಿಸಿದವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ₹ 3 ಕೋಟಿ ಕಪ್ಪು ಹಣ ವಶ ಪಡಿಸಿಕೊಳ್ಳಲಾಗಿತ್ತು. ಈ ಬಾರಿ ನಗದು, ಚಿನ್ನಾಭರಣ ಸೇರಿ ಒಟ್ಟು ₹ 39 ಕೋಟಿ ವಶಕ್ಕೆ ಪಡೆಯಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಾದಕವಸ್ತು, ಜೂಜು ಸೇರಿ ಅಕ್ರಮ ಚಟುವಟಿಕೆಯಲ್ಲಿ ಹಣ ತೊಡಗಿಸಿ ದ್ವಿಗುಣ ಮಾಡಿಕೊಂಡು ಕಪ್ಪು ಹಣ ಸಂಗ್ರಹಿಸಿಟ್ಟುಕೊಳ್ಳುವ ಮತ್ತು ತೆರಿಗೆ ವಂಚಿಸುವವರ ಮೇಲೂ ನಿಗಾ ವಹಿಸಲಾಗಿದೆ. ಬೇನಾಮಿ ಹೆಸರಿನಲ್ಲಿ ಕೃಷಿ ಭೂಮಿ ಖರೀದಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೊಬೈಲ್‌ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಕರ್ನಾಟಕ ಮತ್ತು ಗೋವಾದಲ್ಲಿ ಜೂನ್‌ ತಿಂಗಳೊಳಗೆ ಇದರ ಸೇವೆ ಆರಂಭಿಸಲಾಗುವುದು. ಟಿಡಿಎಸ್‌ ಕಡಿತದ ಬಗ್ಗೆ ತೆರಿಗೆದಾರರಿಗೆ ಈ ಆ್ಯಪ್‌ನಲ್ಲೇ ಮಾಹಿತಿ ಲಭಿಸಲಿದೆ’ ಎಂದು ತಿಳಿಸಿದರು.

ತೆರಿಗೆ ಸಂಗ್ರಹದಲ್ಲಿ ಶೇ 17 ಏರಿಕೆ

ದಾವಣಗೆರೆ: ‘2018–19ನೇ ಸಾಲಿನಲ್ಲಿ ರಾಜ್ಯದಲ್ಲಿ ₹ 1.21 ಲಕ್ಷ ಕೋಟಿ ಆದಾಯ ತೆರಿಗೆ ಸಂಗ್ರಹಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 17ರಷ್ಟು ಏರಿಕೆಯಾಗಿದೆ. ಜಿಡಿಪಿ ಹೆಚ್ಚಿರುವ ರಾಜ್ಯಗಳ ಪೈಕಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಮುಂದಿದೆ’ ಎಂದು ಬಿ.ಆರ್‌. ಬಾಲಕೃಷ್ಣನ್‌ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಆದಾಯ ತೆರಿಗೆ ಪಾವತಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಮುಂಬೈ ಹಾಗೂ ದೆಹಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಈ ವರ್ಷ ಎಷ್ಟು ತೆರಿಗೆ ಸಂಗ್ರಹಿಸಬೇಕು ಎಂಬ ಗುರಿ ನಿಗದಿಯಾಗಿರುವ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು