ಕೆಎಸ್‌ಆರ್‌ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ; ದುಬಾರಿ ಆಯ್ತು ಖಾಸಗಿ ಬಸ್ ದರ

ಶನಿವಾರ, ಏಪ್ರಿಲ್ 20, 2019
24 °C

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ; ದುಬಾರಿ ಆಯ್ತು ಖಾಸಗಿ ಬಸ್ ದರ

Published:
Updated:

ಬೆಂಗಳೂರು: ಲೋಕಸಭಾ ಮೊದಲ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನ ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಿಗಮ ತಿಳಿಸಿದೆ. ಹೀಗಾಗಿ ಮತದಾನಕ್ಕಾಗಿ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಖಾಸಗಿ ಬಸ್‌ನಲ್ಲಿ ಹೋಗುವ ಮತದಾರರು, ದುಬಾರಿ ದರ ಕೊಟ್ಟು ಪ್ರಯಾಣಿಸುವಂತಾಗಿದೆ.

ನಿಗಮದಲ್ಲಿ ಒಟ್ಟು 8,705 ಬಸ್‌ಗಳಿದ್ದು, ಅವುಗಳಲ್ಲಿ 3,314 ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಮತ್ತು ಪೊಲೀಸ್ ಇಲಾಖೆಗೆ ನೀಡಲಾಗಿದೆ. ಹೀಗಾಗಿ ಇದೇ 16ರಿಂದ 18ರವರೆಗೆ ಬಸ್‌ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಇದೇ 18ರಂದು 14 ಕ್ಷೇತ್ರಗಳಲ್ಲಿ ಚುನಾವಣೆ ಇದ್ದು, ಇದರ ಹಿಂದಿನ ಮತ್ತು ಮುಂದಿನ ದಿನಗಳಲ್ಲಿ ರಜೆ ಇದೆ. ಹೀಗಾಗಿ ಹೊರ ಊರುಗಳಿಗೆ ಹೋಗುವರ ಸಂಖ್ಯೆ ಹೆಚ್ಚಾಗಿದೆ.

‘ಬೆಂಗಳೂರಿನಿಂದ ಉಡುಪಿಗೆ ಸಾಮಾನ್ಯ ದಿನಗಳಲ್ಲಿ ₹600ರಿಂದ ₹750 ದರ ಇರುತ್ತದೆ. ಇದೇ 17ರಂದು ಹೊರಡುವ ಬಸ್‌ಗಳಿಗೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದರೆ  ₹1,500ರಿಂದ ₹2,550ರವರೆಗೆ ದರವಿದೆ. ಮಂಗಳೂರಿಗೆ ಸಾಮಾನ್ಯವಾಗಿ ₹800ರಿಂದ ₹900 ಇದ್ದರೆ, ಈಗ ₹1,600ರಿಂದ ₹2,550 ದರವಿದೆ. ‌ಹಾವೇರಿಗೆ ಸಾಮಾನ್ಯವಾಗಿ ₹500–₹700 ಇದ್ದರೆ, ಈಗ ₹1,000ದಿಂದ ₹3,000ವರೆಗೆ ದರವಿದೆ.

ಕೆಎಸ್‌ಆರ್‌ಟಿಸಿ ಕೂಡ ಬಸ್‌ ದರ ಏರಿಕೆ ಮಾಡಿದೆ. ಆದರೆ, ಖಾಸಗಿ ಬಸ್‌ಗಳಿಗೆ ಹೊಲಿಸಿದರೆ ಕಡಿಮೆ ಇದೆ. ಬೆಂಗಳೂರಿನಂದ ಮಂಗಳೂರಿಗೆ ಹವಾನಿಯಂತ್ರಿತ ಸ್ಲೀಪರ್ ಬಸ್‌ಗಳಲ್ಲಿ ₹1,137 ದರ ಇದೆ.

ಚುನಾವಣೆ ಸಂದರ್ಭದಲ್ಲಿ ಎಗ್ಗಿಲ್ಲದೆ ದರ ಏರಿಕೆ ಮಾಡಿದರೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ದರ ಏರಿಸಲಾಗಿದೆ. ಊರಿಗೆ ಹೋಗಿ ಮತ ಹಾಕಬೇಕೆಂದು ಅಂದುಕೊಂಡಿದ್ದೆ. ಇಷ್ಟು ಹಣ ಕೊಟ್ಟು ಪ್ರಯಾಣ ಮಾಡುವುದು ಹೇಗೆ ಎಂದು ಹಾವೇರಿಯ ವಿಶಾಲಾಕ್ಷಿ ಪ್ರಶ್ನಿಸಿದರು.

ಖಾಸಗಿ ಬಸ್ ಮಾಲೀಕರ ಸಭೆ ನಡೆಸಿ ಚುನಾವಣೆ ಸಂದರ್ಭದಲ್ಲಿ ಬಸ್ ದರ ಏರಿಸದಂತೆ ಸೂಚನೆ ನೀಡಲಾಗಿದೆ. ಈಗ ಏರಿಕೆ ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !