ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀತ, ಕೆಮ್ಮು ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ

ಹಗಲು, ರಾತ್ರಿ ಸಂಚರಿಸುತ್ತಿರುವ ಆಂಬ್ಯುಲೆನ್ಸ್; ಟೈರ್ ಶಾಪ್, ವರ್ಕ್ ಶಾಪ್ ತೆರೆಯಲು ಮನವಿ
Last Updated 17 ಏಪ್ರಿಲ್ 2020, 12:32 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಶೀತ, ನೆಗಡಿ, ಜ್ವರ, ಕೆಮ್ಮು ಎಂದು ಹೇಳಿಕೊಂಡು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳ ಸಂಖ್ಯೆ ವಿಪರೀತವಾಗುತ್ತಿದೆ. ಇವರಲ್ಲಿ ಹೆಚ್ಚಿನ ಮಂದಿ ಕೆಮ್ಮಿನಿಂದ ನರಳುತ್ತಿದ್ದಾರೆ.

ವೈದ್ಯಾಧಿಕಾರಿಗಳಾದ ಎಚ್.ವಿ.ಸುರೇಶ್, ಗ್ರೀಷ್ಮಾ ಗಂಗಮ್ಮ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.ಯಾವುದೇ ಹೊತ್ತಿನಲ್ಲಿ ಬಂದರೂ ಆಸ್ಪತ್ರೆಯಲ್ಲೇ ಇದ್ದು ಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಡಾ.ಗ್ರೀಷ್ಮಾ ಗಂಗಮ್ಮ ಪ್ರಸೂತಿ ತಜ್ಞೆಯಾಗಿದ್ದು, ಇದರ ಜತೆಗೆ ಸಾಮಾನ್ಯ ರೋಗಿಗಳನ್ನು ನೋಡುತ್ತಿದ್ದಾರೆ. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಕ್ಷೇತ್ರ ಕಾರ್ಯದೊಂದಿಗೆ ಕೋವಿಡ್– 19 ಸೋಂಕಿತರ ತಪಾಸಣೆಯಲ್ಲಿದ್ದಾರೆ.

ವೈದ್ಯರೂ, ಬೆಳಿಗ್ಗೆ 6ಗಂಟೆಗೆ ಮನೆಬಿಟ್ಟರೆ ಮತ್ತೆ ಮನೆ ಸೇರುವುದು ರಾತ್ರಿ 10 ಗಂಟೆಯಾಗುತ್ತಿದೆ. ಕಳೆದ ವಾರ ಎರಡು ದಿನಗಳ ಕಾಲ ಬಿದ್ದ ಸಾಧಾರಣ ಮಳೆ ಹವಾಮಾನದ ಮೇಲೆ ಪರಿಣಾಮ ಬೀರಿತು. ಇದರಿಂದ ವಾತಾವರಣ ಬದಲಾಗಿ ಕೆಮ್ಮು ಶೀತಕ್ಕೆ ಕಾರಣವಾಗಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಒಳಪಡುವ ಸಮುದಾಯ ಆರೋಗ್ಯಕೇಂದ್ರಕ್ಕೆ ಬಾಳೆಲೆ, ಹುದಿಕೇರಿ, ತಿತಿಮತಿ, ದೇವರಪುರ, ಪಾಲಿಬೆಟ್ಟ, ಹಾತೂರು, ಪೊನ್ನಂಪೇಟೆ ಮೊದಲಾದ ಭಾಗದ ಜನರು ಬರುತ್ತಾರೆ. ಈಗಂತೂ ತುಸು ಕೆಮ್ಮಿದರೂ ಸಾಕು. ಅಕ್ಕಪಕ್ಕದ ಜನತೆ ಅನುಮಾನದಿಂದ ನೋಡುತ್ತಾರೆ. ಜ್ವರ ಎಂದು ಹೇಳಿದರೆ ಸಾಕು ಊರಿನ ಜನರೇ ಭಯಭೀತರಾಗುತ್ತಾರೆ. ಈಗ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ.

ಈ ಕಾರಣಕ್ಕೆ ಸ್ವಲ್ಪ ಶೀತವಾದರೂ ಸಾಕು, ಆಸ್ಪತ್ರೆಗೆ ದೌಡಾಯಿಸುವವರ ಸಂಖ್ಯೆ ಹೆಚ್ಚಿದೆ. ಹಳ್ಳಿಗಳಿಂದ ಬರುವುದಕ್ಕೆ ಬಸ್ ಸೌಲಭ್ಯವಿಲ್ಲ. ಆಟೊ ಕೂಡ ಸಿಗುತ್ತಿಲ್ಲ. ತೀವ್ರ ಹುಷಾರಿಲ್ಲದವರೂ, 104 ಅಥವಾ 108 ಗೆ ಫೋನ್ ಮಾಡಿದರೆ ಸಾಕು. ತಕ್ಷಣವೇ, ಆಂಬ್ಯುಲೆನ್ಸ್ ಚಾಲಕರು ಹೊರಡುತ್ತಾರೆ.

ಸಾಮಾನ್ಯವಾಗಿ ಮಧ್ಯಾರಾತ್ರಿಯಲ್ಲಿಯೇ ಹೆಚ್ಚಾಗಿ ಫೋನ್ ಬರುವುದು. ಕಗ್ಗತ್ತಲೆ ದಾರಿಯಲ್ಲಿ ಕಾಫಿ ತೋಟದ ನಡುವೆ ಆನೆ ಕಾಟದಲ್ಲಿ ಮನೆ ಹುಡುಕುತ್ತಾ ಸಾಗುವುದೇ ದೊಡ್ಡ ಹಿಂಸೆ. ಮನೆ ಗೊತ್ತಾಗದೆ ಫೋನ್ ಮಾಡೋಣವೆಂದರೆ ನೆಟ್‌ವರ್ಕ್ ಇರುವುದಿಲ್ಲ. ಇದಲ್ಲಕಿಂತ ಹೆಚ್ಚಾಗಿ ಕಾಡು ದಾರಿಯಲ್ಲಿ ಟೈರ್ ಪಂಕ್ಚರ್ ಆದರೆ ಕಥೆ ಮುಗಿದಂತೆಯೆ. ಇಂತಹ ಘಟನೆ ಎಷ್ಟೋ ಸಂಭವಿಸಿದೆ.ಈಗಂತೂ ಬಹಳ ಕಷ್ಟವಾಗಿದೆ. ಸ್ಟೆಪ್ನಿ ಬದಲಾಯಿಸುವುದಕ್ಕೂ ಆಗದಂತಹ ಸಂದರ್ಭ ಎದುರಾಗಿದೆ. ಎಲ್ಲ ಅಂಗಡಿಗಳ ಬಂದ್‌ನಿಂದ ನಾವು ಪಡಬಾರದ ಕಷ್ಟ ಅನುಭವಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡರು ಆಂಬುಲೆನ್ಸ್ ಚಾಲಕ ರಘು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಗು–ಮಗು ಸೇರಿದಂತೆ ಮೂರು ಆಂಬ್ಯುಲೆನ್ಸ್‌ಗಳಿವೆ. ಆದರೆ ಕೊರೊನಾ ವೈರಸ್‌ನಿಂದ ವರ್ಕ್‌ಶಾಪ್ ಹಾಗೂ ಟೈರ್‌ಶಾಪ್ ಮುಚ್ಚಿರುವುದರಿಂದ ರೋಗಿಗಳ ಬಳಿಗೆ ಸಕಾಲಕ್ಕೆ ತಲುಪಲು ಕಷ್ಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT