ಮೈಸೂರಿನಲ್ಲಿ ಹೆಚ್ಚಿದ ವನ್ಯಜೀವಿ ಮಾರಾಟ

7
ಒಂದೇ ತಿಂಗಳಲ್ಲಿ ಐದು ಪ್ರಕರಣಗಳನ್ನು ಭೇದಿಸಿದ ಅರಣ್ಯ ಸಂಚಾರ ದಳ

ಮೈಸೂರಿನಲ್ಲಿ ಹೆಚ್ಚಿದ ವನ್ಯಜೀವಿ ಮಾರಾಟ

Published:
Updated:
Deccan Herald

ಮೈಸೂರು: ಜಿಲ್ಲೆಯಲ್ಲಿ ವನ್ಯಜೀವಿ ಮತ್ತು ಅವುಗಳ ಅವಯವಗಳ ಮಾರಾಟ ಪ್ರಕರಣಗಳು ಹೆಚ್ಚುತ್ತಿದ್ದು, ಅರಣ್ಯ ಸಂಚಾರ ದಳವು ಒಂದೇ ತಿಂಗಳಲ್ಲಿ 5 ಪ್ರಕರಣಗಳನ್ನು ಬೇಧಿಸಿದೆ.

ಈ ಅವಧಿಯಲ್ಲಿ 11 ಮಂದಿ ಕಳ್ಳಸಾಗಾಣಿಕೆದಾರರನ್ನು ಬಂಧಿಸಿದ್ದು, ಹುಲಿ ಚರ್ಮ, ಗೂಬೆ, ಆನೆ ದಂತ ಹಾಗೂ ಚಿಪ್ಪುಹಂದಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧನಕ್ಕೆ ಒಳಗಾಗಿರುವ ಎಲ್ಲರೂ ಕೆಳಹಂತದಲ್ಲಿ ಕಾರ್ಯಾಚರಣೆ ಮಾಡುವವರೇ ಆಗಿದ್ದಾರೆ ಎಂಬುದು ಪ್ರಾಥಮಿಕತನಿಖೆ ವೇಳೆ ಗೊತ್ತಾಗಿದೆ.

ಇವರಿಗಿಂತ ಮೇಲಿನ ಹಂತದಲ್ಲಿ ಕಾರ್ಯಾಚರಣೆ ಎಸಗುತ್ತಿರುವ ಜಾಲ ಪತ್ತೆ ಆಗಿಲ್ಲ. ವನ್ಯಜೀವಿ ಹಾಗೂ ಅವುಗಳ ಅವಯವ ಖರೀದಿಸುವ ಮತ್ತೊಂದು ದೊಡ್ಡ ಜಾಲವೇ ಇದೆ ಎಂಬುದು ತಿಳಿದುಬಂದಿದೆ.

ನಾಗರಹೊಳೆ ಹಾಗೂ ಬಂಡೀಪುರ ಅಭಯಾರಣ್ಯಗಳನ್ನು ಹೊಂದಿರುವ ಮೈಸೂರಿಗೆ ವನ್ಯಜೀವಿ ಮಾರಾಟ ದಂಧೆ ಹೊಸತಲ್ಲ. ಇದು ಹಿಂದಿನಿಂದಲೂ ಇಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ಈಗ ಪತ್ತೆ ಕಾರ್ಯ ಚುರುಕಾಗಿರುವುದರಿಂದ ಪ್ರಕರಣಗಳು ಹೆಚ್ಚು ಬಯಲಿಗೆ ಬರುತ್ತಿವೆ.

ಅರಣ್ಯ ಸಂಚಾರ ದಳವು ಚಿಪ್ಪುಹಂದಿಯನ್ನು ಬಿಟ್ಟರೆ ಏಕ ಪ್ರಕಾರವಾದ ವನ್ಯಜೀವಿ ಮಾರಾಟ ಪ್ರಕರಣವನ್ನು ದಾಖಲಿಸಿಲ್ಲ. ಎಲ್ಲವೂ ಒಂದೊಂದು ಬಗೆಯದು. ಇಲವಾಲ ಬಳಿ ಹುಲಿ ಚರ್ಮದ ಮಾರಾಟ ಪ್ರಕರಣ ಬೇಧಿಸಿದರೆ, ನಗರದಲ್ಲಿ ಗೂಬೆ ಹಾಗೂ ಆನೆದಂತ ಪ್ರಕರಣ ಪತ್ತೆ ಹಚ್ಚಿದೆ. ಮಂಡ್ಯ ಜಿಲ್ಲೆಯಲ್ಲಿ ಅ.28ರಂದು ಮೈಸೂರಿಗೆ ಸಾಗಣೆ ಮಾಡುತ್ತಿದ್ದ ಚಿಪ್ಪುಹಂದಿಯನ್ನು ವಶಪಡಿಸಿಕೊಂಡಿದೆ. ಇವೆಲ್ಲವನ್ನು ಖರೀದಿಸುವ ಏಜೆಂಟರು ಮೈಸೂರಿನಲ್ಲಿ ಇದ್ದಾರೆ ಎಂಬ ಗುಮಾನಿ ಬಲವಾಗತೊಡಗಿದೆ.

ಚಿಪ್ಪುಹಂದಿಗೆ ಚೀನಾದಲ್ಲಿ ಬಹುಬೇಡಿಕೆ ಇದೆ. ಇವು ಮೈಸೂರಿನಿಂದ ಉತ್ತರ ಪ್ರದೇಶ, ನೇಪಾಳ, ಟಿಬೆಟ್‌, ಚೀನಾಕ್ಕೆ ಹಾಗೂ ಮೈಸೂರಿನಿಂದ ಕೋಲ್ಕತ್ತ, ಮಿಜೋರಾಂ, ಚೀನಾಕ್ಕೆ ಎರಡು ಹಾದಿಗಳಲ್ಲಿ ಏಜೆಂಟರಿಂದ ಕಳ್ಳ ಸಾಗಣೆ ಆಗುತ್ತಿವೆ ಎಂದು ಮೂಲಗಳು ತಿಳಿಸಿವೆ.

‘ಟ್ರಾಫಿಕ್’ ಎಂಬ ಸಂಸ್ಥೆಯು 2009ರಿಂದ ಇಲ್ಲಿಯವರೆಗೆ ಇಡೀ ದೇಶದಲ್ಲಿ 6 ಸಾವಿರ ಚಿಪ್ಪುಹಂದಿ ಬೇಟೆ ಪ್ರಕರಣಗಳು ನಡೆದಿವೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಮೈಸೂರಿನ ಆಸುಪಾಸಿನ ಅರಣ್ಯದಲ್ಲೂ ಇದೀಗ ಇಂತಹ ಚಿಪ್ಪುಹಂದಿಯನ್ನು ಹಿಡಿಯುವ ಕಳ್ಳರ ಗುಂಪು ಸಕ್ರಿಯವಾಗಿವೆ ಎಂಬುದಕ್ಕೆ ಸದ್ಯ ಪತ್ತೆಯಾಗಿರುವ ಪ್ರಕರಣಗಳು ಪುಷ್ಟಿ ನೀಡಿವೆ.

ವಿದೇಶಗಳಲ್ಲಿ ಭಾರಿ ಬೇಡಿಕೆ ಇರುವ ಆನೆ ದಂತ, ಹುಲಿ ಚರ್ಮ, ಚಿಪ್ಪುಹಂದಿಗಳ ಮಾರಾಟ ಯತ್ನ ಅರಣ್ಯ ಸಂಚಾರ ದಳವು ತಡೆಯುವುದರ ಜತೆಗೆ ಸ್ಥಳೀಯವಾಗಿ ವಿವಿಧ ಉದ್ದೇಶಗಳಿಗೆ ಭಾರಿ ಬೇಡಿಕೆಯುಳ್ಳ ಗೂಬೆ ಹಾಗೂ ಉಡಗಳಂತಹ ಜೀವಿಗಳ ಮಾರಾಟವನ್ನೂ ತಡೆದಿದೆ.

ಗೂಬೆಯನ್ನು ಬಲಿ ನೀಡಿ ಮಾಡುವ ‘ಗೂಬೆ ಮಾಟ’ದಿಂದಾಗಿ ಗೂಬೆಗಳಿಗೆ ಕಾಳಸಂತೆಯಲ್ಲಿ ಬೇಡಿಕೆ ಹೆಚ್ಚಿದೆ. ಇದೇ ರೀತಿ ಉಡದ ಮಾಂಸ, ಎಣ್ಣೆ ಔಷಧೀಯ ಮಹತ್ವವುಳ್ಳದ್ದು ಎಂಬ ಮೂಢನಂಬಿಕೆಯಿಂದಾಗಿ ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಇವುಗಳನ್ನು ಹಿಡಿಯಲು ಕಾಳಸಂತೆಕೋರರು ಆದಿವಾಸಿಗಳನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ನಂಜನಗೂಡಿನಲ್ಲಿ 2 ಜೀವಂತ ಉಡಗಳನ್ನು ರಕ್ಷಿಸಲಾಗಿತ್ತು.

**

ತಿಂಗಳಲ್ಲಿ ಪತ್ತೆಯಾದ ಪ್ರಕರಣಗಳು

* ಅ. 4: ಮೈಸೂರು ತಾಲ್ಲೂಕಿನ ಇಲವಾಲ ಸಮೀಪ ಹುಲಿ ಚರ್ಮ ಮಾರಾಟ ಮಾಡಲು ಯತ್ನಿಸಿದ ಪಿರಿಯಾಪಟ್ಟಣ ತಾಲ್ಲೂಕು ಚೌತಿ ಗ್ರಾಮದ ಗೋವಿಂದೇಗೌಡ ಎಂಬಾತನ ಬಂಧನ. ದೊಡ್ಡ ಗಾತ್ರದ ಹುಲಿ ಚರ್ಮ ವಶ. ಮೂವರು ಆರೋಪಿಗಳು ಪರಾರಿ.

* ಅ. 23: ಮೈಸೂರು– ಬೆಂಗಳೂರು ರಸ್ತೆಯಲ್ಲಿ ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ‘ಇಂಡಿಯನ್ ಈಗಲ್’ ತಳಿಯ ಗೂಬೆ ವಶ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಶಿಕಾರಿಪುರದ ಎಸ್.ಆರ್.ಶ್ರೀಧರ್ ಹಾಗೂ ವಿರಾಜಪೇಟೆ ತಾಲ್ಲೂಕಿನ ಬಿಳಗುಂದ ಗ್ರಾಮದ ಬಿ.ಎ.ರವೀಶರಾವ್ ಎಂಬುವರ ಬಂಧನ.

* ಅ. 25: ಮೈಸೂರಿನ ಸುಭಾಷ್‌ನಗರದಲ್ಲಿ ಆನೆ ದಂತ ಮಾರಾಟ ಮಾಡಲು ಯತ್ನ. ಕೆ.ಆರ್.ನಗರದ ಶನೌಜ್‌ಕುಮಾರ್‌ ಎಂಬಾತನ ಬಂಧನ. ಆನೆದಂತ ವಶ.

* ಅ. 28: ಮೈಸೂರಿಗೆ ತರುತ್ತಿದ್ದ ಚಿಪ್ಪುಹಂದಿ ರಕ್ಷಣೆ. ಇಬ್ಬರ ಬಂಧನ.

* ನ. 03: ನಂಜನಗೂಡಿನಲ್ಲಿ ಚಿಪ್ಪುಹಂದಿ ಸಾಗಣೆ. ಇಬ್ಬರ ಬಂಧನ. ಚಿಪ್ಪುಹಂದಿ ರಕ್ಷಣೆ.

**

ಅರಣ್ಯ ಸಂಚಾರ ದಳವು ತನ್ನ ಕಾರ್ಯ ನಿಭಾಯಿಸುತ್ತಿದೆ. ವನ್ಯಜೀವಿ ಹಾಗೂ ಅದರ ಅವಯವಗಳ ಮಾರಾಟವನ್ನು ಯಶಸ್ವಿಯಾಗಿ ತಡೆಯುವ ವಿಶ್ವಾಸವಿದೆ.
– ಪೂವಯ್ಯ, ಡಿಸಿಎಫ್, ಅರಣ್ಯ ಸಂಚಾರ ದಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !