ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ ಮತಕ್ಷೇತ್ರ: ಯುಕೆಪಿ ಸಂತ್ರಸ್ತ ಕೂಸು

ಕೃಷ್ಣೆ–ಘಟಪ್ರಭಾ ಸಂಗಮಕ್ಷೇತ್ರ: ಸಕ್ಕರೆ ಖಣಜದಲ್ಲಿ ಟಿಕೆಟ್ ನಿರೀಕ್ಷೆಯಲ್ಲಿ ಘಟಾನುಘಟಿ ಅಭ್ಯರ್ಥಿಗಳು
Last Updated 13 ಏಪ್ರಿಲ್ 2018, 8:56 IST
ಅಕ್ಷರ ಗಾತ್ರ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತ ಕೂಸು ಬೀಳಗಿ ಕ್ಷೇತ್ರ. ಯೋಜನೆ ವ್ಯಾಪ್ತಿಯಲ್ಲಿ ಮುಳುಗಡೆಯಿಂದಾಗಿ ಊರು–ಕೇರಿ, ಮನೆ–ಮಠ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರ ತನ್ನ ವ್ಯಾಪ್ತಿಯಲ್ಲಿ ಬಾದಾಮಿ, ಜಮಖಂಡಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಒಳಗೊಂಡಿದೆ. ಗಲಗಲಿ, ಗಿರಿಸಾಗರ, ಸುನಗ, ಕುಂದರಗಿ, ಮುರನಾಳ, ಕಲಾದಗಿ, ಅನವಾಲ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಬೀಳಗಿ ತಾಲ್ಲೂಕಿಗೆ ಸೇರುತ್ತವೆ.

ಸ್ವಾತಂತ್ರ್ಯಾ ನಂತರ ಇಲ್ಲಿಯವರೆಗೆ ನಡೆದ 14 ಚುನಾವಣೆಯಲ್ಲಿ ಕೇವಲ ನಾಲ್ಕು ಬಾರಿ ಮಾತ್ರ ಬೇರೆ ಪಕ್ಷಗಳಿಗೆ ಒಲಿದು ಉಳಿದ ಎಲ್ಲ ಚುನಾವಣೆಯಲ್ಲೂ ಬೀಳಗಿ ಕಾಂಗ್ರೆಸ್‌ನ ಭದ್ರ ಕೋಟೆ ಎನಿಸಿದೆ. 2013ರ ಚುನಾವಣೆಯಲ್ಲೂ ಕಾಂಗ್ರೆಸ್‌ನ ಜೆ.ಟಿ.ಪಾಟೀಲ ಇಲ್ಲಿ ಗೆಲುವು ಸಾಧಿಸಿದ್ದಾರೆ. ಇದೀಗ 15ನೇ ಚುನಾವಣೆಗೆ ಸಿದ್ಧತೆ ನಡೆದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಹೆಸರು ಇನ್ನೂ ಅಂತಿಮಗೊಂಡಿಲ್ಲ. ಆದರೂ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

ನಾಲ್ಕು ಬಾರಿ ಆಯ್ಕೆ:

ಬೀಳಗಿ ಕ್ಷೇತ್ರದಲ್ಲಿ 1952ರಿಂದ 67ರವರೆಗಿನ ಸತತ ನಾಲ್ಕು ಚುನಾವಣೆಗಳಲ್ಲಿ ಯಡಹಳ್ಳಿಯ ಆರ್.ಎಂ.ದೇಸಾಯಿ ಶಾಸಕರಾಗಿ ಆಯ್ಕೆಯಾಗಿದ್ದರು. ಬೆಳಗಾವಿ ಜಿಲ್ಲೆ ಅಥಣಿ ಬಳಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಆರಂಭಿಸಲಾದ ಉಗಾರ ಸಕ್ಕರೆ ಕಾರ್ಖಾನೆ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ದೇಸಾಯಿ, ಕಾರ್ಖಾನೆ ನಿರ್ದೇಶಕರಾಗಿದ್ದರು. ಉಗಾರ ಕಾರ್ಖಾನೆ ಉತ್ತರ ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆ ಎಂಬ ಶ್ರೇಯ ತನ್ನದಾಗಿಸಿಕೊಂಡಿತ್ತು. ಜೊತೆಗೆ ಯಡಹಳ್ಳಿಯನ್ನು ಗಾಂಧೀಜಿ ಕನಸಿನ ಗ್ರಾಮವಾಗಿ ರೂಪಿಸುವ ಕಾರ್ಯಕ್ಕೆ ಆಗಿನಿಂದಲೇ ಚಾಲನೆ ನೀಡಿದ್ದರು.

1972ರಲ್ಲಿ ಜಿ.ಕೆ.ಮರಿತಮ್ಮಪ್ಪ ಇಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದರು. 1978ರಲ್ಲಿ ತುರ್ತುಪರಿಸ್ಥಿತಿ ವಿರೋಧಿ ಅಲೆಯಲ್ಲೂ ಕಾಂಗ್ರೆಸ್ ಇಲ್ಲಿ ಜಯಗಳಿಸಿತ್ತು. ಎಸ್.ಎಸ್.ಪಾಟೀಲ ಆ ಚುನಾವಣೆಯಿಂದ ಕ್ಷೇತ್ರದಲ್ಲಿ ತಮ್ಮ ಚೈತ್ರ ಯಾತ್ರೆ ಆರಂಭಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಜನತಾಪಕ್ಷದ ವಿ.ಎ.ಪಾಟೀಲ ಕೂಡ 23,485 ಮತಗಳಿಸಿ ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ 20 ಸಾವಿರಕ್ಕೂ ಹೆಚ್ಚು ಮತ ಗಳಿಕೆ ಮಾಡಿದ ಶ್ರೇಯ ಪಡೆದಿದ್ದರು.

1983ರಲ್ಲಿ ಎಸ್.ಎಸ್.ಪಾಟೀಲರ ವಿರುದ್ಧ ನಿಂತಿದ್ದ ಜನತಾಪಕ್ಷದ ಪಿ.ಆರ್.ಬೆಳಗಲಿ ಅಷ್ಟೊಂದು ಪ್ರತಿರೋಧ ತೋರಲಿಲ್ಲ. ಆದರೆ ಎರಡು ವರ್ಷಗಳ ಅಂತರದಲ್ಲಿಯೇ ನಡೆದ (1985) ಮತ್ತೊಂದು ಚುನಾವಣೆಯಲ್ಲಿ ಜನತಾಪಕ್ಷದ ಬಾಬುರಡ್ಡಿ ತುಂಗಳ ಭರ್ಜರಿ ಜಯಗಳಿಸುವ ಮೂಲಕ ಕ್ಷೇತ್ರದ ಮೊದಲ ಕಾಂಗ್ರೆಸ್ಸೇತರ ಶಾಸಕ ಎನಿಸಿದ್ದರು. ಮುಂದಿನ ಚುನಾವಣೆಯಲ್ಲಿ ಜನತಾದಳದಿಂದ ಆಯ್ಕೆಯಾಗಿದ್ದ ಜಿ.ಜಿ.ಯಳ್ಳಿಗುತ್ತಿ ಜನತಾ ಪರಿವಾರದ ಯಶೋಗಾಥೆಯನ್ನು ಮತ್ತೊಂದು ಅವಧಿಗೆ ಮುಂದುವರೆಸಿದ್ದರು.

ಮತ್ತೆ ಯಡಹಳ್ಳಿಯವರ ಕೈಗೆ ಚುಕ್ಕಾಣಿ: 1994 ಹಾಗೂ 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜೆ.ಟಿ.ಪಾಟೀಲ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದ ಆಡಳಿತ ಚುಕ್ಕಾಣಿ ಮತ್ತೆ ಯಡಹಳ್ಳಿಯವರ ಪಾಲಾಗಿತ್ತು. ವಿಶೇಷವೆಂದರೆ ಎರಡನೇ ಅವಧಿಗೆ ಪಕ್ಷದ ಮತ ಗಳಿಕೆ ಪ್ರಮಾಣವನ್ನು ಜೆ.ಟಿ.ಪಾಟೀಲ ಹೆಚ್ಚಿಸಿದ್ದರು. 2004 ಹಾಗೂ 2008ರ ಚುನಾವಣೆಗಳಲ್ಲಿ ಮುರುಗೇಶ ನಿರಾಣಿ ಮೂಲಕ ಬಿಜೆಪಿಗೆ ಒಲಿದ ಬೀಳಗಿ ಕ್ಷೇತ್ರ, ಐದು ವರ್ಷ ಕಾಲ ಭಾರಿ ಕೈಗಾರಿಕೆಯಂತಹ ಮಹತ್ವದ ಖಾತೆಯ ಹೊಣೆಗಾರಿಕೆಗೆ ಪ್ರಾತಿನಿಧ್ಯ ನೀಡಿತ್ತು.

2008ರಲ್ಲಿ ಅಜಯಕುಮಾರ ಸರನಾಯಕ ಅವರಿಗೆ ಟಿಕೆಟ್ ಬಿಟ್ಟು ಲೋಕಸಭೆಗೆ ಸ್ಪರ್ಧಿಸಿದ್ದ ಜೆ.ಟಿ.ಪಾಟೀಲ, 2013ರಲ್ಲಿ ಮತ್ತೆ ಪಕ್ಷದ ಟಿಕೆಟ್ ಪಡೆದು ಗೆಲುವಿನ ನಗೆ ಬೀರಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹೊನ್ನಿಹಾಳದ ದಣಿ ಬಸವಪ್ರಭು ಸರನಾಡಗೌಡರ ಬಿಜೆಪಿಯ ಗೆಲುವಿಗೆ ಅಡ್ಡಿಯಾಗಿದ್ದರು. ಅವರೀಗ ಕಾಂಗ್ರೆಸ್‌ನಲ್ಲಿದ್ದು, ಕೆಪಿಸಿಸಿ ಕಾರ್ಯದರ್ಶಿ ಕೂಡ ಆಗಿದ್ದಾರೆ.

ಈ ಬಾರಿ ಕಾಂಗ್ರೆಸ್‌ ಟಿಕೆಟ್‌ಗೆ ಶಾಸಕ ಜೆ.ಟಿ.ಪಾಟೀಲ ಜೊತೆಗೆ ಬಸವಪ್ರಭು ಸರನಾಡಗೌಡ ಕೂಡ ಆಕಾಂಕ್ಷಿ. ಜೆಡಿಎಸ್‌ ಟಿಕೆಟ್‌ಗಾಗಿ ಉದ್ಯಮಿ ಶಿವಕುಮಾರ ಮಲಘಾಣ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ವಕೀಲ ಎ.ಬಿ.ಬಳ್ಳೂರ ಕೂಡ ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಟಿಕೆಟ್‌ನ ಭರವಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯಿಂದ ಮಾಜಿ ಸಚಿವ ಮುರುಗೇಶ ನಿರಾಣಿಗೆ ಟಿಕೆಟ್ ಎನ್ನಲಾಗುತ್ತಿದೆಯಾದರೂ, ಅಮಿತ್ ಶಾ ಅವರ ಸಮೀಕ್ಷೆ ಪರಿಗಣಿಸಿದಲ್ಲಿ ನನಗೆ ಟಿಕೆಟ್ ಎಂದು ಯುವ ಮೋರ್ಚಾ ಬಸವರಾಜ ಯಂಕಂಚಿ ಹೇಳುತ್ತಿದ್ದಾರೆ. ಈ ಮಧ್ಯೆ ಬಿಜೆಪಿ, ಜೆಡಿಎಸ್ ಟಿಕೆಟ್‌ಗಾಗಿ ಪ್ರಯತ್ನಿಸಿ ವಿಫಲರಾಗಿ ಸ್ವತಂತ್ರ ಅಭ್ಯರ್ಥಿ ಆಗಿಯಾದರೂ ವಿಧಾನಸೌಧ ಪ್ರವೇಶಿಸುವೆ ಎಂದು ಶಪಥ ಮಾಡಿರುವ ಸೀಮಿಕೇರಿಯ ರಾಮಾರೂಢ ಮಠದ ಪರಮರಾಮಾರೂಢ ಶ್ರೀಗಳು ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ಕೂಡ ಕೈಗೊಂಡಿದ್ದಾರೆ. ಬಿ ಫಾರಂ ಹಂಚಿಕೆಯಾಗುವವರೆಗೂ ಬಿಜೆಪಿಯ ಟಿಕೆಟ್‌ಗೆ ಪ್ರಯತ್ನಿಸುವೆ ಎಂದು ಹೇಳಿರುವ ರಾಮಾರೂಢ ಶ್ರೀಗಳು ಚುನಾವಣಾ ಕಣದ ರಂಗು ಹೆಚ್ಚಿಸಿದ್ದಾರೆ.

ಪ್ರಮುಖ ಸಮುದಾಯ

ಕುರುಬರು, ಗಾಣಿಗರು, ರಡ್ಡಿ, ಲಿಂಗಾಯತ ಪಂಚಮಸಾಲಿ, ಪರಿಶಿಷ್ಟ ಪಂಗಡ, ಮುಸ್ಲಿಮರು ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT