ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಟಿ ಹತ್ತಿ: ಕ್ಷೇತ್ರ ಪ್ರಯೋಗದಲ್ಲೂ ದಾಖಲೆ

‘ಯುಎಎಸ್‌ಡಿ ಇವೆಂಟ್ ನಂ.78’ನಲ್ಲಿ ಹೆಚ್ಚು ಕ್ರೈ ಪ್ರೊಟೀನ್‌
Last Updated 24 ನವೆಂಬರ್ 2019, 19:33 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸುತ್ತಿರುವ ದೇಸಿ ಬಿ.ಟಿ ಹತ್ತಿ ತಳಿಯು ಕ್ಷೇತ್ರ ಪ್ರಯೋಗ ಹಂತ ತಲುಪಿದ್ದು, ಮೊನ್ಸಾಂಟೊ ಬೊಲ್ಗಾರ್ಡ್ ಹಾಗೂ ಬೊಲ್ಗಾರ್ಡ್–2 ಹತ್ತಿ ತಳಿಗಳಿಗಿಂತಲೂ ಐದು ಪಟ್ಟು ಹೆಚ್ಚು ರೋಗನಿರೋಧಕ ಶಕ್ತಿಯನ್ನು ದಾಖಲಿಸಿದೆ.

ಪ್ರಾಯೋಗಿಕ ತಾಕುಗಳಲ್ಲಿ ಬೆಳೆದಿರುವ 45 ದಿನಗಳ ಗಿಡಗಳಲ್ಲಿ ಪ್ರತಿ ಗ್ರಾಂ ಜೀವಕೋಶದಲ್ಲಿ ಹಾನಿಕಾರಕ ಕೀಟಗಳನ್ನು ಕೊಲ್ಲುವ ಕ್ರೈ ಪ್ರೊಟೀನ್ ಪ್ರಮಾಣ 5ರಿಂದ 6 ಮೈಕ್ರೋ ಗ್ರಾಂನಷ್ಟು ದಾಖಲಾಗಿರುವುದು
ವಿಜ್ಞಾನಿಗಳಲ್ಲಿ ಭರವಸೆ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಸಂಶೋಧಕಿ ಡಾ.ಮಂಜುಳಾ ಮರಳಪ್ಪನವರ, ‘ಆನುವಂಶಿಕ ಎಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನ ಅಂತರರಾಷ್ಟ್ರೀಯ ಕೇಂದ್ರ (ಐಸಿಜಿಇಬಿ)ದಿಂದ 2009ರಲ್ಲಿ ಮೂಲ ತಳಿಯನ್ನು ತರಲಾಗಿತ್ತು.ಈ ಮಣ್ಣಿನ ಗುಣಕ್ಕೆ ಅನುಕೂಲವಾಗುವಂಥ ತಳಿ ಅಭಿವೃದ್ಧಿ
ಪಡಿಸುವುದು ನಮ್ಮ ಉದ್ದೇಶವಾಗಿತ್ತು. ಇದಕ್ಕೆ‘ಯುಎಎಸ್‌ಡಿ ಇವೆಂಟ್ ನಂ.78’ ಎಂದು ಹೆಸರಿಸಲಾಗಿದೆ. ಪ್ರಯೋಗಾಲಯದಲ್ಲಿ ಬೆಳವಣಿಗೆ ಆಧಾರದ ಮೇಲೆ ಕ್ಷೇತ್ರ ಪ್ರಯೋಗಕ್ಕೆ ಕೋರಲಾಗಿತ್ತು’ ಎಂದು ತಿಳಿಸಿದರು.

‘ಆನುವಂಶಿಕ ಮಾರ್ಪಾಡು ನಿಯಂತ್ರಣ ಸಮಿತಿ (ಆರ್‌ಸಿಜಿಎಂ) ಮತ್ತು ಆನುವಂಶಿಕ ಎಂಜಿನಿಯರಿಂಗ್‌ ಮೌಲ್ಯಮಾಪನ ಸಮಿತಿ (ಜಿಇಎಸಿ), ರಾಜ್ಯ ಸರ್ಕಾರದ ಕೃಷಿ ವಿಜ್ಞಾನ ಸಮಿತಿಯಿಂದ ಅನುಮತಿ ಪಡೆದು ಕ್ಷೇತ್ರ ಪ್ರಯೋಗ ಆರಂಭಿಸಿವೆ. ಈ ಬೆಳೆಯಿಂದ ಪರಿಸರ ಮತ್ತು
ಪೂರಕ ಜೀವಿಗಳಿಗೆ ಯಾವುದೇ ಹಾನಿ ಇಲ್ಲ ಎಂಬುದನ್ನು ಸಾಬೀತುಪಡಿಸಲು ಜೈವಿಕ ಸುರಕ್ಷಾ ಪರೀಕ್ಷೆ ನಡೆಸಲೂ ಅನುಮತಿ ದೊರೆತಿದೆ’ ಎಂದು ತಿಳಿಸಿದರು.

‘ಪ್ರಾಯೋಗಿಕ ತಾಕಿನಲ್ಲಿ ಸಾಲಿನಿಂದ ಸಾಲಿಗೆ 90 ಸೆಂ.ಮೀ ಹಾಗೂ ಗಿಡದಿಂದ ಗಿಡಕ್ಕೆ 30 ಸೆಂ.ಮೀ ಅಂತರದಲ್ಲಿ ಬೀಜಗಳನ್ನು ಬಿತ್ತಲಾಗಿತ್ತು. ಪ್ರತಿಕೂಲ ಹವಾಮಾನದ ಪರಿಸ್ಥಿತಿಯಲ್ಲೂ ಗಿಡಗಳು ಉತ್ತಮವಾಗಿ ಬೆಳೆಯುತ್ತಿವೆ. ಯುಎಎಸ್‌ಡಿ ಇವೆಂಟ್ ನಂ.78 ಒಂದು ಮೂಲ ವಸ್ತು. ಇದರಿಂದ ಮುಂದೆ ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ಹಲವು ಬಗೆಯ ತಳಿಗಳನ್ನು ಅಭಿವೃದ್ಧಿಪಡಿಸಬಹುದು. ಆ ನಿಟ್ಟಿನಲ್ಲೂ ಸಂಶೋಧನೆ ಮುಂದುವರಿದಿದೆ’ ಎಂದು ಮಂಜುಳಾ ತಿಳಿಸಿದರು.

2019ಕ್ಕೆ ಆರಂಭವಾಗಿರುವ ಕ್ಷೇತ್ರ ಪ್ರಯೋಗ ಮೂರು ವರ್ಷ ಕಡ್ಡಾಯವಾಗಿ ನಡೆಸಬೇಕು. ಇದಕ್ಕಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್‌) ನೇಮಿಸಿರುವ ವಿವಿಧ ವಿಷಯಗಳ 9 ತಜ್ಞರ ಸಮಿತಿ, ಈ ತಳಿ ಕುರಿತು ಪ್ರತಿ ಹಂತದ ಮಾಹಿತಿಯನ್ನು ದಾಖಲಿಸುತ್ತಿದೆ.

2014ರಲ್ಲೇ ಕ್ಲಿನಿಕಲ್ ಹಂತ ತಲುಪಿದ್ದ ಈ ಸಂಶೋಧನೆ ವಿಶ್ವವಿದ್ಯಾಲಯದ ಆಂತರಿಕ ಕಾರಣದಿಂದಾಗಿ ನನೆಗುದಿಗೆ ಬಿದ್ದಿತ್ತು. ಕ್ಷೇತ್ರ ಪ್ರಯೋಗಕ್ಕೆ ಅವಕಾಶ ನೀಡಲಿಲ್ಲ ಎಂಬ ಕಾರಣದಿಂದ ಸಂಶೋಧಕಿ ಮಂಜುಳಾ, ಪ್ರಧಾನಿ ಕಚೇರಿಯ ಕದವನ್ನೂ ತಟ್ಟಿದ್ದರು. ನಂತರ ಐಸಿಎಆರ್‌ ಮಧ್ಯಪ್ರವೇಶಿಸಿ, ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿತು. ಅದರಂತೆಯೇ ಈಗ ನಾಗಪುರದಲ್ಲಿರುವ ಕೇಂದ್ರ ಹತ್ತಿ ಸಂಶೋಧನಾ ಕೇಂದ್ರ ಮತ್ತುಸಸ್ಯಗಳಲ್ಲಿನ ಜೈವಿಕ ತಂತ್ರಜ್ಞಾನ ಕುರಿತ ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್‌ಆರ್‌ಸಿಪಿಬಿ) ಕೇಂದ್ರದಲ್ಲೂ ಈ ಕುರಿತ ಸಂಶೋಧನೆ ನಡೆಯುತ್ತಿದೆ. ಈ ಕುರಿತು ‘ಪ್ರಜಾವಾಣಿ’ 2017ರ ಅಕ್ಟೋಬರ್‌ನಲ್ಲಿ ವರದಿ ಪ್ರಕಟಿಸಿತ್ತು.

ರೈತರಿಗೆ ನೆರವಾಗುವ ಉದ್ದೇಶದಿಂದ ಕೈಗೊಳ್ಳಲಾದ ಈ ಸಂಶೋಧನೆಗೆ ವಿಶ್ವವಿದ್ಯಾಲಯದಿಂದ ಸಂಪೂರ್ಣ ಸಹಕಾರ ದೊರೆತಿದ್ದರಿಂದ ಈಗ ಮತ್ತೆ ವೇಗ ಪಡೆದುಕೊಂಡಿದೆ. ಆದಷ್ಟು ಬೇಗ ಇದು ರೈತರಿಗೆ ದೊರಕುವ ವಿಶ್ವಾಸವಿದೆ‌
-ಡಾ. ಮಂಜುಳಾ ಮರಳಪ್ಪನವರ
ಹಿರಿಯ ಸಂಶೋಧಕಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ

ನಾನು ಐಸಿಎಆರ್‌ನಲ್ಲಿ ಮಹಾ ನಿರ್ದೇಶಕನಾಗಿದ್ದ ಸಂದರ್ಭದಿಂದ ಈ ಸಂಶೋಧನೆ ಕುರಿತು ಮಾಹಿತಿ ಇದೆ. ರೈತರಿಗೆ ಪ್ರಯೋಜನವಾಗುವ ಇಂಥ ಸಂಶೋಧನೆಗಳಿಗೆ ಬೆಂಬಲವಿದೆ
-ಡಾ.ಎಂ.ಬಿ.ಚೆಟ್ಟಿ, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT